ಶಿವಮೊಗ್ಗ: ಇಸ್ರೇಲ್ ಮತ್ತು ಇರಾನ್ ನಡುವಿನ ಯುದ್ಧದ ಪರಿಣಾಮ ವಾಣಿಜ್ಯ ಅನಿಲ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಿದ್ದು, ಅನಿಲ ಕೊರತೆಯಿಂದಾಗಿ ಶಿವಮೊಗ್ಗದ ಬಹುತೇಕ ಹೊಟೇಲ್ಗಳು ಗುರುವಾರದಿಂದ ಬಂದ್ ಆಗಲಿವೆ.
ಮಥುರಾ ಪ್ಯಾರಡೈಸ್ನಲ್ಲಿ ಶಿವಮೊಗ್ಗ ಜಿಲ್ಲಾ ಹೋಟೆಲ್ ಮಾಲೀಕರ ಸಂಘವು ಜಿಲ್ಲಾಧ್ಯಕ್ಷ ಶಂಕರನಾರಾಯಣ ಹೊಳ್ಳ ಅವರ ನೇತೃತ್ವದಲ್ಲಿ ಈ ಸಭೆಯಲ್ಲಿ ಸಂಘದ ಪ್ರಮುಖರು ನಿರ್ಧರಿಸಿದ್ದಾರೆ.
ವಾಣಿಜ್ಯ ಅನಿಲದ ತೀವ್ರ ಕೊರತೆ ಎದುರಾಗಿರುವುದರಿಂದ ನಾಳೆಯಿಂದ ಹೋಟೆಲ್ಗಳನ್ನು ಯಾವ ರೀತಿ ನಡೆಸಬೇಕು ಎಂಬ ಬಗ್ಗೆ ಸಭೆಯಲ್ಲಿ ಚರ್ಚೆ ನಡೆಸಲಾಯಿತು.
ಸುದ್ದಿಗಾರರೊಂದಿಗೆ ಮಾತನಾಡಿದ ಹೊಟೇಲ್ ಮಾಲೀಕರ ಸಂಘದ ಅಧ್ಯಕ್ಷ ಶಂಕರನಾರಾಯಣ ಹೊಳ್ಳ, ಖಾಸಗಿ ಕಂಪನಿಗಳು ಗ್ಯಾಸ್ ಪೂರೈಕೆಯನ್ನು ಸ್ಥಗಿತಗೊಳಿಸಿವೆ ಹಾಗೂ ಏಜೆನ್ಸಿಗಳಲ್ಲಿಯೂ ಸಿಲಿಂಡರ್ಗಳ ಲಭ್ಯತೆ ತೀರಾ ಕಡಿಮೆಯಾಗಿದೆ. ಶೇ. 98 ರಷ್ಟು ಹೋಟೆಲ್ಗಳು ಗ್ಯಾಸ್ ಮೇಲೆ ಅವಲಂಬಿತವಾಗಿವೆ. ಅಡುಗೆ ಅನಿಲವಿಲ್ಲದೆ ಹೋಟೆಲ್ ನಡೆಸುವುದು ಅಸಾಧ್ಯ. ಈ ಸಮಸ್ಯೆಯಿಂದಾಗಿ ಹೋಟೆಲ್ ಕಾರ್ಮಿಕರ ವೇತನ ಪಾವತಿಗೂ ಸಂಚಕಾರ ಬಂದಿದೆ. ಉದ್ಯಮ ಮುಂದುವರಿಸುವುದೆ ಸವಾಲಾಗಿದೆ ಎಂದರು.
ಇದನ್ನೂ ಓದಿ ಶಿವಮೊಗ್ಗ, ಉದ್ಯೋಗ ನೀಡಲು ನೇರ ಸಂದರ್ಶನ, ಪ್ರತಿಷ್ಟಿತ ಖಾಸಗಿ ಕಂಪನಿಗಳು ಭಾಗಿ
ಗ್ಯಾಸ್ ಕೊರತೆಯಿಂದಾಗಿ ಗುರುವಾರದಿಂದ ಶಿವಮೊಗ್ಗದ ಹೋಟೆಲ್ಗಳು ಕಾರ್ಯಾಚರಣೆ ಸ್ಥಗಿತಗೊಳಿಸುವ ಸಾಧ್ಯತೆಯಿದೆ. ಪರ್ಯಾಯವಾಗಿ ಕಟ್ಟಿಗೆ ಒಲೆ ಅಥವಾ ವಿದ್ಯುತ್ ಒಲೆ ಬಳಸಲು ಸಾಧ್ಯವಿರುವ ಕೆಲವೇ ಕೆಲವು ಹೋಟೆಲ್ಗಳು ಮಾತ್ರ ಸೀಮಿತ ತಿಂಡಿ ತಿನಿಸುಗಳೊಂದಿಗೆ ಕಾರ್ಯನಿರ್ವಹಿಸಲಿವೆ. ಆಸ್ಪತ್ರೆಗೆ ಬರುವವರು ಹಾಗೂ ಹೊರಗಿನಿಂದ ಬರುವ ಸಾರ್ವಜನಿಕರಿಗೆ ಇದರಿಂದ ತೊಂದರೆಯಾಗಲಿದೆ ಎಂದು ತಿಳಿಸಿದರು.
ರಾಜ್ಯ ಹೋಟೆಲ್ ಮಾಲೀಕರ ಸಂಘದ ವಲಯ ಕಾರ್ಯದರ್ಶಿ ಉದಯ್ ಕಂಡಂಬ ಮಾತನಾಡಿ, ಇಂಧನ ಪೂರೈಕೆ ಸ್ಥಗಿತಗೊಂಡರೆ ಲಕ್ಷಾಂತರ ಕಾರ್ಮಿಕರ ಬದುಕು ದುಸ್ತರವಾಗಲಿದೆ ಮತ್ತು ಹೋಟೆಲ್ಗಳನ್ನು ನಂಬಿರುವ ವಿದ್ಯಾರ್ಥಿಗಳು ಹಾಗೂ ರೋಗಿಗಳಿಗೆ ಊಟದ ಸಮಸ್ಯೆ ಎದುರಾಗಲಿದೆ. ಸರ್ಕಾರ ಕೂಡಲೇ ಮಧ್ಯಪ್ರವೇಶಿಸಿ ಗ್ಯಾಸ್ ಪೂರೈಕೆಗೆ ವ್ಯವಸ್ಥೆ ಮಾಡಿ ಉದ್ಯಮ ಹಾಗೂ ಗ್ರಾಹಕರ ಹಿತ ಕಾಯಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ಸಂಘದ ಉಪಾಧ್ಯಕ್ಷ ಗೋಪಿನಾಥ್ ಸೇರಿದಂತೆ ಹಲವರು ಇದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com














