ಶಿವಮೊಗ್ಗ : ನೀಟ್ ಪರೀಕ್ಷೆಯ ಬದಲಿಗೆ ರಾಜ್ಯಮಟ್ಟದ ಸಿಇಟಿ ಪರೀಕ್ಷಾ ವ್ಯವಸ್ಥೆ ಜಾರಿಗೆ ತರಲು ಹಾಗೂ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಲು ಆಗ್ರಹಿಸಿ ಇಂದು ಶಿವಮೊಗ್ಗ ನಗರ ಯುವ ಕಾಂಗ್ರೆಸ್ ಪ್ರತಿಭಟನೆ ನಡೆಸಿತು.
ಯುವ ಕಾಂಗ್ರೆಸ್ ಕಾರ್ಯಕರ್ತರು ಮಹಾವೀರ ವೃತ್ತದಿಂದ ಗೋಪಿವೃತ್ತದವರೆಗೆ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಅಣುಕು ಶವಯಾತ್ರೆ ನಡೆಸಿ ಪ್ರತಿಕೃತಿ ದಹಿಸಿ ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ > 251 ನೇ ತಿಂಗಳ ಸಾಹಿತ್ಯ ಹುಣ್ಣಿಮೆ, 250 ಗಾಯಕರಿಂದ ಸಮೂಹ ಗಾಯನ
ನೀಟ್ ಪರೀಕ್ಷೆಯನ್ನು ಪಾರದರ್ಶಕವಾಗಿ ನಡೆಯದಂತೆ ಮಾಡಿ, ಪ್ರಶ್ನೆಪತ್ರಿಕೆಯ ಸೋರಿಕೆಯನ್ನು ತಡೆಯಲಾಗದೇ ಮರುಪರೀಕ್ಷೆ ನಡೆಸಿ, ಸುಮಾರು 21 ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾದ ಕೇಂದ್ರ ಶಿಕ್ಷಣ ಸಚಿವ ದರ್ಮೇಂದ್ರ ಪ್ರಧಾನ್ ಅವರನ್ನು ಕೂಡಲೇ ಸಚಿವ ಸ್ಥಾನದಿಂದ ವಜಾಗೊಳಿಸಬೇಕು ಹಾಗೂ ಹಿಂದಿನಂತೆ ಸಿಇಟಿ ಪರೀಕ್ಷೆಯನ್ನೇ ಮುಂದುವರೆಸಬೇಕು ಎಂದು ರಾಷ್ಟ್ರಪತಿಗಳನ್ನು ಒತ್ತಾಯಿಸಿದರು.
ಇದನ್ನೂ ಓದಿ > ಮುಸ್ಲಿಂಮರೇ ಇಲ್ಲದ ಊರಲ್ಲಿ ಅದ್ದೂರಿ ಮೊಹರಂ ಆಚರಣೆ!
ಪ್ರತಿ ವರ್ಷ ಲಕ್ಷಾಂತರ ವಿದ್ಯಾರ್ಥಿಗಳು ತಮ್ಮ ಉತ್ತಮ ಭವಿಷ್ಯದ ಕನಸು ಹೊತ್ತುಕೊಂಡು ನೀಟ್ ಪರೀಕ್ಷೆಯನ್ನು ಬರೆಯುತ್ತಾರೆ. ಕೇಂದ್ರ ಸರ್ಕಾರದ ಈ ನಿರ್ಲಕ್ಷ್ಯದಿಂದಾಗಿ ದೇಶಾದ್ಯಂತ ಸುಮಾರು 21 ವಿದ್ಯಾರ್ಥಿಗಳು ಆತ್ಮಹತ್ಯೆ ಮಾಡಿಕೊಂಡಿದ್ದು, ಇದರಿಂದ ಲಕ್ಷಾಂತರ ವಿದ್ಯಾರ್ಥಿಗಳ ಭವಿಷ್ಯ ಮತ್ತು ಮಾನಸಿಕ ಆರೋಗ್ಯದ ಮೇಲೆ ಗಂಭೀರ ಪರಿಣಾಮ ಉಂಟಾಗಿದೆ. ಈ ಹಿನ್ನೆಲೆ ಶಿಕ್ಷಣ ವ್ಯವಸ್ಥೆಯ ಮೇಲಿನ ಜನರ ವಿಶ್ವಾಸ ಕುಂದಿದೆ. ಪ್ರಧಾನಿ ನರೇಂದ್ರ ಮೋದಿಯವರು ಘೋರ ದುರಂತ ನಡೆದಿದ್ದರೂ ಆ ಬಗ್ಗೆ ಇದುವರೆಗೂ ಚಕಾರವೆತ್ತಲಿಲ್ಲ. ಆದರೆ, ಪ್ರಶ್ನೆಪತ್ರಿಕೆ ಸೋರಿಕೆಗೆ ಮತ್ತು ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣವಾಗಿರುವ ಕೇಂದ್ರ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಹುಟ್ಟುಹಬ್ಬಕ್ಕೆ ಶುಭಾಶಯ ಕೋರುವ ಮೂಲಕ ಸೂತಕದ ವಾತಾವರಣದಲ್ಲೂ ಸಂಭ್ರಮಿಸಿದ್ದಾರೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.

ಕೂಡಲೇ ರಾಷ್ಟ್ರಪತಿಗಳು ಮಧ್ಯೆ ಪ್ರವೇಶಿಸಿ ನೀಟ್ ಪರೀಕ್ಷೆಯನ್ನು ಸಮರ್ಥವಾಗಿ ನಡೆಸಲಾಗದೇ ಮರುಪರೀಕ್ಷೆ ನೆಡೆಸಿ ವಿದ್ಯಾರ್ಥಿಗಳ ಆತ್ಮಹತ್ಯೆಗೆ ಕಾರಣರಾದ ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರನ್ನು ಸಚಿವ ಸ್ಥಾನದಿಂದ ವಜಾಗೊಳಿಸಬೇಕು. ದೇಶದಾದ್ಯಂತ ನೀಟ್ ಪರೀಕ್ಷೆಯನ್ನು ರದ್ದುಗೊಳಿಸಿ, ರಾಜ್ಯಗಳಿಗೆ ತಮ್ಮದೇ ಸಿಇಟಿ ಮೂಲಕ ವೈದ್ಯಕೀಯ ಪ್ರವೇಶಾತಿ ನಡೆಸುವ ಅವಕಾಶ ಮಾಡಿಕೊಡಬೇಕು. ಪರೀಕ್ಷಾ ಅಕ್ರಮಗಳ ಬಗ್ಗೆ ಸಂಪೂರ್ಣ, ಪಾರದರ್ಶಕ ಹಾಗೂ ಸ್ವತಂತ್ರ ತನಿಖೆ ನಡೆಸಬೇಕು. ಕೂಡಲೇ ಕೇಂದ್ರ ಶಿಕ್ಷಣ ಸಚಿವರನ್ನು ಸಚಿವ ಸ್ಥಾನದಿಂದ ವಜಾಗೊಳಿಸದೇ ಇದ್ದಲ್ಲಿ ಯುವ ಕಾಂಗ್ರೆಸ್ ಪ್ರತಿಭಟನೆಯನ್ನು ತೀವ್ರಗೊಳಿಸುವುದಾಗಿ ಮನವಿಯಲ್ಲಿ ತಿಳಿಸಿದ್ದಾರೆ.
ಈ ಸಂದರ್ಭದಲ್ಲಿ ಯುವ ಮುಖಂಡ ಮಧುಸೂದನ್, ಜಿಲ್ಲಾ ಅಧ್ಯಕ್ಷ ಹರ್ಷಿತ್, ನಗರಾಧ್ಯಕ್ಷ ಚರಣ್, ಗ್ರಾಮಾಂತರ ಅಧ್ಯಕ್ಷ ಪ್ರವೀಣ್, ಬ್ಲಾಕ್ ಅಧ್ಯಕ್ಷ ಗಿರೀಶ್, ಮಹಮದ್ ಗೌಸ್, ಪ್ರಧಾನ ಕಾರ್ಯದರ್ಶಿಗಳಾದ ಅಬ್ದುಲ್, ಮಲಗೊಪ್ಪ ಶಿವು, ರೇಷ್ಮಾ,ಗೌತಮ್, ಬಾಬು, ತೌಫಿಕ್, ನಿಖಿಲ್, ವಿಷ್ಣು, ಆಕಾಶ್, ಅಶೋಕ್, ಲಿಂಗರಾಜು, ರವಿ, ಯೋಗೇಶ್,ಅರುಣ್, ಪ್ರಶಾಂತ್, ಗೌತಮ್, ದೃಶ್ಯ, ರೋಷನ್, ಅನೂಪ್, ಮನು, ಗಣೇಶ್, ಗಗನ್ ಹಾಗೂ ನೂರಾರು ಯುವಕ ಮುಖಂಡರು ಪಾಲ್ಗೊಂಡಿದ್ದರು.













