ಸಾಗರ : ಮಲೆನಾಡು ರೈತರ ವಿವಿಧ ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮಲೆನಾಡು ರೈತ ಹೋರಾಟ ವೇದಿಕೆ ವತಿಯಿಂದ ಸಿಗಂದೂರು ಸೇತುವೆ ಮೇಲಿನ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಪ್ರತಿಭಟನೆಯಲ್ಲಿ ಸಾಗರ, ಹೊಸನಗರ, ಸೊರಬ, ಶಿಕಾರಿಪುರ ಸೇರಿ ಜಿಲ್ಲೆಯ ಬೇರೆಬೇರೆ ಭಾಗದ ರೈತರು, ವಿವಿಧ ಸಂಘ ಸಂಸ್ಥೆಗಳ ಪ್ರಮುಖರು ಪಾಲ್ಗೊಂಡಿದ್ದು ವಿಶೇಷವಾಗಿತ್ತು.
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ವೇದಿಕೆ ಜಿಲ್ಲಾ ಸಂಚಾಲಕ ತೀ.ನ.ಶ್ರೀನಿವಾಸ್, ಕೇಂದ್ರ ಮತ್ತು ರಾಜ್ಯ ಸರ್ಕಾರ ಮಾನಮರ್ಯಾದೆ ಇಲ್ಲ. ಮಲೆನಾಡು ರೈತರನ್ನು ಓಟ್ಬ್ಯಾಂಕ್ ಅಗಿ ನೋಡುತ್ತಿವೆಯೆ ಹೊರತು ಅವರ ಬೇಡಿಕೆ ಈಡೇರಿಸಲು ಯಾವ ಸರ್ಕಾರಗಳಿಗೂ ಮನಸ್ಸು ಇದ್ದಂತೆ ಕಾಣುತ್ತಿಲ್ಲ. ಶರಾವತಿ, ಚಕ್ರ, ವರಾಹಿ ಸೇರಿ ಜಿಲ್ಲೆಯ ಬೇರೆಬೇರೆ ನದಿಗಳ ಮುಳುಗಡೆ ಸಂತ್ರಸ್ತರು ತಾವು ವಾಸಿಸುವ ಭೂಮಿಯ ಹಕ್ಕು ಸಿಗದೆ ಸರ್ಕಾರಿ ಸೌಲಭ್ಯ ಪಡೆಯಲು ಸಾಧ್ಯವಾಗದೆ ಒದ್ದಾಡುತ್ತಿದ್ದಾರೆ. ನಾಡಿಗೆ ಬೆಳಕು ನೀಡಿದ ಶರಾವತಿ ಮುಳುಗಡೆ ಸಂತ್ರಸ್ತರನ್ನು ಅತ್ಯಂತ ನಿಕೃಷ್ಟವಾಗಿ ನಡೆಸಿಕೊಳ್ಳಲಾಗುತ್ತಿದೆ ಎಂದು ದೂರಿದರು.
ವಿದ್ಯುತ್ ಯೋಜನೆಗೆ ಭೂಮಿ ಕೊಟ್ಟು 65 ವರ್ಷವಾಗಿದೆ. ಸುಪ್ರೀಂ ಕೋರ್ಟ್ ಶರಾವತಿ ಮುಳುಗಡೆ ಸಂತ್ರಸ್ತರ ಸಮಸ್ಯೆಯನ್ನು ಕೇಂದ್ರ ಮತ್ತು ರಾಜ್ಯ ಸರ್ಕಾರದ ಕಾರ್ಯದರ್ಶಿಗಳು ಕುಳಿತು ಬಗೆಹರಿಸಲು ಸೂಚನೆ ನೀಡಿದೆ. ನ್ಯಾಯಾಲಯ ಆದೇಶ ಮಾಡಿ 15 ತಿಂಗಳು ಕಳೆದರೂ ರೈತರಿಗೆ ಹಕ್ಕುಪತ್ರ ನೀಡಿಲ್ಲ. ಚುನಾಯಿತ ಪ್ರತಿನಿಧಿಗಳು ಅತ್ಯಂತ ಬೇಜವಾಬ್ದಾರಿಯಿಂದ ನಡೆದುಕೊಳ್ಳುತ್ತಿದ್ದಾರೆ. ಕೆಪಿಸಿ ಭೂಮಿ ಉಪಯೋಗಿಸದಿದ್ದರೆ ರೈತರಿಗೆ ಹಿಂದಿರುಗಿಸಿ ಎಂದು ಆದೇಶ ಇದ್ದರೂ ಅದನ್ನು ವಾಪಾಸ್ ಕೊಡುತ್ತಿಲ್ಲ. ಸಿಂಗಳೀಕ ಅಭಯಾರಣ್ಯ ಹೆಸರಿನಲ್ಲಿ ಯುವಕರಿಗೆ ಹಿಂಸೆ ಕೊಡುತ್ತಿದ್ದಾರೆ. ಸಿದ್ದರಾಮಯ್ಯ ವಿಪಕ್ಷ ನಾಯಕರಾಗಿದ್ದಾಗ ನಮ್ಮ ಸರ್ಕಾರ ಬಂದರೆ ತಕ್ಷಣ ಸಮಸ್ಯೆ ಬಗೆಹರಿಸುವ ಭರವಸೆ ನೀಡಿದ್ದರು. ಮೂರು ವರ್ಷವಾದರೂ ಮುಖ್ಯಮಂತ್ರಿಗಳು ತಾವು ಕೊಟ್ಟ ಭರವಸೆ ಈಡೇರಿಸಿಲ್ಲ ಎಂದು ಆರೋಪಿಸಿದರು.
ಸರ್ಕಾರಿ ನೌಕರರ ಪ್ರತಿಭಟನೆ ಮಾಡಿದರೆ ಮಾತುಕತೆಗೆ ಕರೆಯುತ್ತಾರೆ, ಹೆಂಡದ ಅಂಗಡಿಯವರು ಪ್ರತಿಭಟನೆ ನಡೆಸಿ ಕಮೀಷನ್ ಜಾಸ್ತಿ ಮಾಡಿ ಎಂದರೆ ರಾತ್ರೋರಾತ್ರಿ ಸಭೆ ಕರೆಯುತ್ತೀರಿ. ಆದರೆ ರಾಜ್ಯಕ್ಕೆ ಬೆಳಕು ನೀಡುವ ಅನ್ನಹಾಕುವ ರೈತರಿಗೆ ನ್ಯಾಯ ಕೊಡಲು ಸರ್ಕಾರ ಸಂಪೂರ್ಣ ವಿಫಲವಾಗಿದೆ. ಮುಂದಿನ ಹದಿನೈದು ದಿನಗಳಲ್ಲಿ ಸಭೆ ಕರೆದು ಮಲೆನಾಡು ರೈತರ ಸಮಸ್ಯೆ ಬಗೆಹರಿಸದೆ ಹೋದಲ್ಲಿ ಜಿಲ್ಲಾಧಿಕಾರಿಗಳು, ಉಸ್ತುವಾರಿ ಸಚಿವರು, ಶಾಸಕರ ಕಚೇರಿಗೆ ಬೀಗ ಹಾಕುವ ಎಚ್ಚರಿಕೆ ನೀಡಿದರು.
ನವಚೇತನ ವೇದಿಕೆ ಅಧ್ಯಕ್ಷ ಕೆ.ಎಸ್.ಪ್ರಶಾಂತ್ ಮಾತನಾಡಿದರು. ಕುಮಾರಸ್ವಾಮಿ, ಇಂದೂಧರ ಗೌಡ, ಹೂವಣ್ಣ ಹುರಳಿ, ಅಶೋಕ್ ಬೇಸೂರು, ಚಕ್ರಪಾಣಿ, ಮಂಜಪ್ಪ ಇನ್ನಿತರರು ಹಾಜರಿದ್ದರು.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













