ಶಿವಮೊಗ್ಗ : ಇಲಿಯಾಜ್ ನಗರದ ಫಾತಿಮಾ ರಸ್ತೆಯ ಮೌಂಟ್ ಹೀರಾ ಶಾಲೆ ಸಮೀಪದ ತುಂಗಾ ಚಾನಲ್ ಬಳಿ ಗಾಂಜಾ ಮಾರಾಟ ಮಾಡುತ್ತಿದ್ದ ಅಡ್ಡೆಯೊಂದರ ಮೇಲೆ ಶಿವಮೊಗ್ಗದ ದೊಡ್ಡಪೇಟೆ ಠಾಣೆ ಪೊಲೀಸರು ದಾಳಿ ನಡೆಸಿದ ಘಟನೆ ನಡೆದಿದೆ.
ಇಬ್ಬರು ಆರೋಪಿಗಳು ಸ್ಕೂಟಿಯಲ್ಲಿ ಗಾಂಜಾ ಇಟ್ಟುಕೊಂಡು ಮಾರಾಟ ಮಾಡುತ್ತಿರುವ ಕುರಿತಂತೆ ಪೊಲೀಸರಿಗೆ ಖಚಿತ ವರ್ತಮಾನ ಲಭ್ಯವಾಗಿತ್ತು. ಈ ಕುರಿತಂತೆ ಪೊಲೀಸ್ ಇಲಾಖೆ ಮಾರ್ಚ್ 05 ರಂದು ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ.
ಪಿಎಸ್‌ಐ ನಾರಾಯಣ ಮಧುಗಿರಿ ನೇತೃತ್ವದ ಪೊಲೀಸ್ ತಂಡ ದಾಳಿ ನಡೆಸಿತ್ತು. ಈ ವೇಳೆ 2 ಕೆಜಿ 66 ಗ್ರಾಂ ತೂಕದ ಒಣ ಗಾಂಜಾ, ಸ್ಕೂಟಿಯನ್ನು ವಶಕ್ಕೆ ಪಡೆದುಕೊಂಡಿತ್ತು.
ಪ್ರಕರಣಕ್ಕೆ ಸಂಬಂಧಿಸಿದಂತೆ ಬಟ್ಟೆ ವ್ಯಾಪಾರಿ ಸವಾಯಿಪಾಳ್ಯದ ಶಾದಾಬ್ ಶಾದಿ ಮಹಲ್ ಸಮೀಪದ ನಿವಾಸಿ ಮೊಹಮ್ಮದ್ ಹಮ್ಮದ್ ಅಜರುದ್ದೀನ್ ಯಾನೆ ಅಜರ್ ಯಾನೆ ಪುಕು (28) ಎಂಬಾತನನ್ನು ಪೊಲೀಸರು ಬಂಧಿಸಿ, ಈತನನ್ನು ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ.
ಪ್ರಕರಣದ ಮತ್ತೋರ್ವ ಆರೋಪಿ ವಾದಿಹುದಾ ಬಡಾವಣೆ ನಿವಾಸಿ ವಸೀಂ ಅಕ್ರಂ ಯಾನೆ ಸೈಲೆಂಟ್ ಯಾನೆ ಗೋಗೋ (24) ಎಂಬಾತ ತಲೆಮರೆಸಿಕೊಂಡಿದ್ದು, ಆತನ ಬಂಧನಕ್ಕೆ ಪೊಲೀಸರು ಕ್ರಮಕೈಗೊಂಡಿದ್ದಾರೆ.
ಪ್ರಕರಣದ ಮುಖ್ಯ ಆರೋಪಿ ಮೊಹಮ್ಮದ್ ಹಮ್ಮದ್ ಅಜರುದ್ದೀನ್ ವಿರುದ್ದ ಈ ಹಿಂದೆ ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ 5 ಹಾಗೂ ತುಂಗಾನಗರ ಪೊಲೀಸ್ ಠಾಣೆಯಲ್ಲಿ1 ಪ್ರಕರಣ ದಾಖಲಾಗಿವೆ ಎಂದು ಪೊಲೀಸ್ ಇಲಾಖೆ ಬಿಡುಗಡೆ ಮಾಡಿದ ಪ್ರಕಟಣೆಯಲ್ಲಿ ಮಾಹಿತಿ ನೀಡಲಾಗಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













