ಶಿವಮೊಗ್ಗ : ಸುಪ್ರಸಿದ್ಧ ಶಿವಮೊಗ್ಗ ಶ್ರೀ ಕೋಟೆ ಮಾರಿಕಾಂಬ ದೇವಿಯ ಜಾತ್ರಾ ಮಹೋತ್ಸವವು ಫೆ.೨೪ರಿಂದ ಆರಂಭವಾಗಲಿದ್ದು, ಇದರ ಮಾಹಿತಿಯ ಭಿತ್ತಿಚಿತ್ರವನ್ನು ಶ್ರೀ ಕೋಟೆ ಮಾರಿಕಾಂಬ ದೇವಸ್ಥಾನ ಸಮಿತಿ ವತಿಯಿಂದ ಬಿಡುಗಡೆಗೊಳಿಸಲಾಯಿತು. ಈ ಸಂದರ್ಭದಲ್ಲಿ ದೇವಸ್ಥಾನ ಸಮಿತಿಯ ಅಧ್ಯಕ್ಷ ಎಸ್.ಕೆ. ಮರಿಯಪ್ಪ, ಪ್ರಧಾನ ಕಾರ್ಯದರ್ಶಿ ಎನ್. ಮಂಜುನಾಥ್, ಪ್ರಮುಖರಾದ ಸುನೀಲ್ ಸೇರಿದಂತೆ ಹಲವರಿದ್ದರು.

ಫೆ.21 ಮತ್ತು 22: ರಾಜ್ಯಮಟ್ಟದ ಭರ್ಜರಿ ಟಗರಿನ ಕಾಳಗ
ಶಿವಮೊಗ್ಗ : ಕೋಟೆ ಶ್ರೀ ಮಾರಿಕಾಂಬ ಟಗರು ಕಾಳಗ ಸಮಿತಿ, ಶಿವಮೊಗ್ಗ ವತಿಯಿಂದ 8ನೇ ಬಾರಿಗೆ ಫೆಬ್ರವರಿ 21 ಮತ್ತು 22ರಂದು ಸರ್ಕಾರಿ ಪದವಿಪೂರ್ವ ಕಾಲೇಜಿನ ಸೈನ್ಸ್ ಮೈದಾನದಲ್ಲಿ ರಾಜ್ಯಮಟ್ಟದ ಭರ್ಜರಿ ಟಗರಿನ ಕಾಳಗ ನಡೆಯಲಿದೆ ಎಂದು ಸಮಿತಿಯ ಅಧ್ಯಕ್ಷ ಸಂದೀಪ್ ಬೆನ್ನಳ್ಳಿ ತಿಳಿಸಿದ್ದಾರೆ.
ಈ ಕಾಳಗದಲ್ಲಿ 2,4,6, ಮತ್ತು 8 ಹಲ್ಲಿನ ಟಗರಿನ ಕಾಳಗಗಳು ನಡೆಯಲಿದೆ. ಸಚಿವ ಮಧು ಬಂಗಾರಪ್ಪ 21ರಂದು ಬೆಳಿಗ್ಗೆ 10 ಗಂಟೆಗೆ ಟಗರಿನ ಕಾಳಗವನ್ನು ಉದ್ಘಾಟಿಸುವರು. ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಜಿಲ್ಲೆಯ ಎಲ್ಲಾ ಶಾಸಕರು , ರಾಜಕೀಯ ಮುಖಂಡರು, ಗಣ್ಯರು, ವಿಶೇಷ ಆಹ್ವಾನಿತರು, ಈ ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದಾರೆ.
8 ಹಲ್ಲಿನ ಕುರಿಗೆ ಕ್ರಮವಾಗಿ 1,11,111 ರೂ. ಪ್ರಥಮ ಬಹುಮಾನವಿರುತ್ತದೆ. ಹಾಗೆಯೇ 6 ಹಲ್ಲಿನ ಕುರಿಗೆ 71,111, 4 ಹಲ್ಲಿನ ಕುರಿಗೆ 41,111, 2ಹಲ್ಲಿನ ಕುರಿಗೆ 31,111 ಬಹುಮಾನವಿರುತ್ತದೆ. ಉಳಿದಂತೆ 3 ಬಹುಮಾನಗಳು ಸೇರಿ ಒಟ್ಟು 4 ಬಹುಮಾನಗಳಿರುತ್ತವೆ. ಪ್ರವೇಶ ಶುಲ್ಕ ಕ್ರಮವಾಗಿ 2000, 1600, 1200, 800, 600 ರೂ. ಇರುತ್ತದೆ ಎಂದು ಸತೀಶ್ ಬೆನವಳ್ಳಿ ಹಾಗೂ ಕಾರ್ಯಕಾರಿ ಸಮಿತಿ ತಿಳಿಸಿದೆ.
ಈ ಟಗರು ಕಾಳಗದ ಉದ್ಘಾಟನೆಯನ್ನು ಬಿಗ್ಬಾಸ್ ಖ್ಯಾತಿಯ ವರ್ತೂರು ಸಂತೋಷ್ ನೆರವೇರಿಸುವರು. ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು ಎಂದು ಕೋರಲಾಗಿದೆ.













