ಭದ್ರಾವತಿ: ತಾಲ್ಲೂಕಿನ ಗೌರಾಪುರ-ಶಿವನಿ ಕ್ರಾಸ್ ಸಮೀಪ ಗ್ಯಾಂಗ್ ಕಟ್ಟಿಕೊಂಡು ದರೋಡೆಗೆ ಸಂಚು ರೂಪಿಸಿದ್ದ ಆರೋಪಿಗಳ ಬಂಧನಕ್ಕೆ ತೆರಳಿದ ಪೋಲೀಸರ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾದಾಗ ಒಬ್ಬನ ಮೇಲೆ ಗುಂಡು ಹಾರಿಸಿ ಬಂಧಿಸಲಾಗಿದೆ.
ಗುಂಡೇಟಿನಿಂದ ಗಾಯಗೊಂಡಿರುವ ಆರೋಪಿ ರೌಡಿ ಶೀಟರ್ ಡಿಚ್ಚಿ ಮುಬಾ ರಕ್‌ಗೆ ಭದ್ರಾವತಿಯ ಸರ್ಕಾರಿ ಆಸ್ಪತ್ರೆಯಲ್ಲಿ ಪ್ರಾಥಮಿಕ ಚಿಕಿತ್ಸೆ ಕೊಡಿಸಿ ನಂತರ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈತನ ಸಹಚರರಾದ ಜಹೀರ್, ರೆಹಮತ್ ಪಾಷಾ, ಜುನೈದ್ ಹಾಗು ಮನು ಸಿಂಗ್ ಎಂಬುವವರನ್ನು ಬಂಧಿಸಲಾಗಿದೆ.
ಮಾರಕಾಸ್ತ್ರಗಳನ್ನು ಹೊಂದಿರುವ ಗುಂಪೊಂದು ದರೋಡೆಗೆ ಹೊಂಚು ಹಾಕಿ ಕುಳಿತಿದೆ ಎಂಬ ಖಚಿತ ಮಾಹಿತಿ ಆಧಾರದಲ್ಲಿ, ಅವರನ್ನು ಬಂಧಿಸಲು ಡಿ.ವೈ.ಎಸ್.ಪಿ ಪ್ರಕಾಶ್ ರಾಥೋಡ್ ನೇತೃತ್ವದ ವಿಶೇಷ ತಂಡ ತೆರಳಿತ್ತು. ಪೊಲೀಸರನ್ನು ಕಂಡ ಕೂಡಲೇ ಆರೋಪಿಗಳು ಅವರ ಮೇಲೆ ಕಲ್ಲು ತೂರಿ ಮಾರಕಾಸ್ತ್ರಗಳಿಂದ ದಾಳಿ ನಡೆಸಲು ಮುಂದಾಗಿದ್ದಾರೆ. ಆತ್ಮ ರಕ್ಷಣೆಗಾಗಿ ಪಿಎಸ್‌ಐ ಕೃಷ್ಣಕುಮಾರ್ ಮಾನೆ ಮೊದಲು ಗಾಳಿಯಲ್ಲಿ ಗುಂಡು ಹಾರಿಸಿ ಆರೋಪಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಆದರೂ ಮುಬಾರಕ್ ಚಾಕುವಿನಿಂದ ಪೊಲೀಸರನ್ನು ತಿವಿಯಲು ಮುಂದಾದಾಗ ಆತನ ಕಾಲಿಗೆ ಗುಂಡು ಹಾರಿಸಲಾಗಿದೆ’ ಎಂದು ಎಸ್ಪಿ ಬಿ.ನಿಖಿಲ್ ತಿಳಿಸಿದ್ದಾರೆ.
ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದ ಪಿಎಸ್‌ಐಗಳಾದ ಕೃಷ್ಣಕುಮಾರ್, ಸಿದ್ದಪ್ಪ ಹಾಗು ಕಾನ್ಸ್ ಟೇಬಲ್ ಆದರ್ಶ್ ಗಾಯಗೊಂಡಿದ್ದು ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwani@gmail.com













