ಶಿವಮೊಗ್ಗ : ಮಲೆನಾಡು ಕರಕುಶಲ ಉತ್ಸವ-ಸಿರಿಧಾನ್ಯ ಮೇಳ-ಫಲ ಪುಷ್ಪ ಪ್ರದರ್ಶನಕ್ಕೆ ಈ ಬಾರಿ ಸಾರ್ವಜನಿಕರಿಂದ ಉತ್ತಮ ಸ್ಪಂದನೆ ದೊರೆತಿದೆ.
ಈ ಬಾರಿ ಹಲವಾರು ವಿಶೇಷತೆಗಳೊಂದಿಗೆ ಜ.24 ರಿಂದ 27 ರವರೆಗೆ ನಗರದ ಅಲ್ಲಮ ಪ್ರಭು ಉದ್ಯಾನವನ (ಫ್ರೀಡಂ ಪಾರ್ಕ್) ದಲ್ಲಿ ಸುಮಾರು 2 ಲಕ್ಷ ಸಂಖ್ಯೆಯ ವಿವಿಧ ಬಣ್ಣದ ಹೂವುಗಳಾದ ಗುಲಾಬಿ, ಸೇವಂತಿಗೆ, ಆಂಥೋರಿಯಂ, ಕಾಮಿನಿಲೆ ಮತ್ತು ಫೋಲಿಯೇಜ್ ಗಿಡಗಳನ್ನು ಬಳಸಿ ವಿಶೇಷವಾದ ಹೂವಿನ ಕಲಾಕೃತಿಗಳನ್ನು ರಚಿಸಲಾಗಿದೆ.
ವಿವಿಧ ಜಾತಿಯ ಹೂವುಗಳಿಂದ 16 ಅಡಿ ಎತ್ತರದ ಕೋಟೆ ಹಾಗೂ ಕೆಳದಿ ಶಿವಪ್ಪ ನಾಯಕನ ಪ್ರತಿಮೆ ರಚನೆ, 15 ಅಡಿ ಎತ್ತರದ ಬಳ್ಳಿಗಾವಿ ಕೇದಾರೇಶ್ವರ ದೇವಸ್ಥಾನ ಎಲ್ಲರ ಗಮನ ಸೆಳೆಯುತ್ತಿದೆ.

ಹೂವುಗಳು ಹಾಗೂ ಫೋಲಿಯೇಜ್‌ನಿಂದ 60 ಅಡಿ ಅಗಲ x 22 ಅಡಿ ಎತ್ತರದ ಜೋಗ ಜಲಪಾತದ ಕಲಾಕೃತಿಯಂತೂ ಈ ಬಾರಿಯ ಆಕರ್ಷಣೆಯಾಗಿದೆ., ಹೂವಿನ ಐ ಲವ್ ಶಿವಮೊಗ್ಗ ಸೆಲ್ಫಿ ಪಾಯಿಂಟ್ ಬಳಿ ಜನರು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದರು.
















