ಶಿವಮೊಗ್ಗ: ಸಂಭ್ರಮದ ಹೋಳಿ ಆಚರಣೆಗೆ ಶಿವಮೊಗ್ಗ ಸಜ್ಜಾಗಿದ್ದು, ನಗರದ ಗಾಂಧಿ ಬಜಾರ್ ಬಸವೇಶ್ವರ ಸ್ವಾಮಿ ದೇವಸ್ಥಾನ, ತುಳಜಾ ಭವಾನಿ ದೇವಸ್ಥಾನ, ರವಿವರ್ಮ ರಸ್ತೆಯ ರಾಮಮಂದಿರ, ಬಿಬಿ ರಸ್ತೆ ಆರ್ಯ ಅಕ್ಷೋಭ್ಯ ತೀರ್ಥ ಮಠದ ಆವರಣ ಹಾಗೂ ಕುಂಬಾರ ಬೀದಿಯಲ್ಲಿ ಈಗಾಗಲೇ ಕಾಮಣ್ಣನ ಪ್ರತಿಕೃತಿ ಪ್ರತಿಷ್ಠಾಪಿಸಲಾಗಿದೆ.
ನಗರದ ಗಾಂಧಿ ಬಜಾರ್ ಗೆಳೆಯರು ಸೇರಿ ಈ ಬಾರಿ ಗಾಂಧಿಬಜಾರ್‌ನಲ್ಲಿ ವಿಶೇಷ ರೀತಿ ಹೋಳಿ ಹಬ್ಬದ ಆಚರಣೆ ಮಾಡಲಿದ್ದು, ಹೋಳಿ ನಿಮಿತ್ತ ರೈನ್ ಡ್ಯಾನ್ಸ್ (ಮಳೆ ನೃತ್ಯ) ಏರ್ಪಡಿ ಸಿದ್ದು, ಮಹಿಳೆಯರಿಗೆ ಮತ್ತು ಪುರುಷರಿಗೆ ಪ್ರತ್ಯೇಕವಾಗಿರುತ್ತದೆ. ಡಿಜೆ ಡ್ಯಾನ್ಸ್ ಸಹ ಇರುತ್ತದೆ. ನಾಳೆ ಬೆಳಿಗ್ಗೆ 8.30ರಿಂದ 12.30ರ ವರೆಗೆ ಶಿವಮೊಗ್ಗದ ಜನತೆ ಹೋಳಿ ಆಡುವುದರ ಮೂಲಕ ಸಂಭ್ರಮಿಸೋಣ ಎಂಬುದು ಈ ಭಾಗದ ಪ್ರಮುಖರ ಮನವಿಯಾಗಿದೆ.
ಪೊಲೀಸ್ ಇಲಾಖೆಯ ಎಚ್ಚರಿಕೆ ಏನು?
ಮಹಿಳೆಯರ ತೇಜೋವಧೆ ಮಾಡುವ ಅಥವಾ ಅವರ ಘನತೆಗೆ ಚ್ಯುತಿ ತರುವವರ ವಿರುದ್ಧ ಭಾರತೀಯ ನ್ಯಾಯ ಸಂಹಿತೆ 2023 ರ ಸೆಕ್ಷನ್ 79ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗುವುದು.
ಈ ಕಾಯ್ದೆಯನ್ವಯ ಆರೋಪ ಸಾಬೀತಾದರೆ ಅಪರಾಧಿಗೆ 3 ವರ್ಷಗಳವರೆಗೆ ಕಾರಾಗೃಹ ಶಿಕ್ಷೆ
ಮತ್ತು ದಂಡವನ್ನು ವಿಧಿಸಲಾಗುತ್ತದೆ.
ಸಾರ್ವಜನಿಕರು ಹಬ್ಬಗಳನ್ನು ಶಾಂತಿ ಹಾಗೂ ಸೌಹಾರ್ದತೆಯಿಂದ ಆಚರಿಸಬೇಕು, ಹೆಣ್ಣು ಮಕ್ಕಳ ರಕ್ಷಣೆಗೆ ಪ್ರತಿಯೊಬ್ಬರೂ ಆದ್ಯತೆ ನೀಡ ಬೇಕು.
ಯಾರಾದರೂ ಅಸಭ್ಯವಾಗಿ ವರ್ತಿಸಿದರೆ ತಕ್ಷಣವೇ 112 ಸಹಾಯವಾಣಿಗೆ ಕರೆ ಮಾಡಿ ಮಾಹಿತಿ ನೀಡುವಂತೆ ಶಿವಮೊಗ್ಗ ಪೊಲೀಸರು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.













