ಫೆ.23 : ಜೆಡಿಎಸ್ ನೂತನ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ

ಶಿವಮೊಗ್ಗ : ಜಿಲ್ಲಾ ಜೆಡಿಎಸ್ ಅಧ್ಯಕ್ಷರಾಗಿ ನೇಮಕಗೊಂಡಿರುವ ಕೆ.ಎನ್.ರಾಮಕೃಷ್ಣ ಅವರು ಫೆ.23ರ ಬೆಳಿಗ್ಗೆ 10.30ಕ್ಕೆ ಪಕ್ಷದ ಜಿಲ್ಲಾ ಕಚೇರಿಯಲ್ಲಿ ನಡೆಯುವ ಸರಳ ಸಮಾರಂಭದಲ್ಲಿ ಅಧಿಕಾರ ಸ್ವೀಕರಿಸಲಿದ್ದಾರೆ.
ಇಂದು ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾಧ್ಯಕ್ಷ ಕಡಿದಾಳ್ ಗೋಪಾಲ್ ಮಾತನಾಡಿ, ಇತ್ತೀಚೆಗೆ ಬೆಂಗಳೂರಿನಲ್ಲಿ ನಡೆದ ಪಕ್ಷದ ರಾಜ್ಯಸಮಿತಿ ಸಭೆಯಲ್ಲಿ 15 ಜಿಲ್ಲೆಯ ಅಧ್ಯಕ್ಷರನ್ನು ಬದಲಾವಣೆ ಮಾಡಿದ್ದು, ನನಗೆ ವಯಸ್ಸಾಗಿದೆ, ಒಂದು ವರ್ಷ ಮಾತ್ರ ಅಧ್ಯಕ್ಷನಾಗಿರುತ್ತೇನೆ ಎಂದು ಪಕ್ಷದ ವರಿಷ್ಠರಿಗೆ ತಿಳಿಸಿದ್ದೆ. ಕಳೆದ ಮೂರು ವರ್ಷದಿಂದ ನಾನು ಅಧ್ಯಕ್ಷನಾಗಿ ಕಾರ್ಯನಿರ್ವಹಿಸಿದ್ದೇನೆ. ಆದರೆ ಕೆ.ಎನ್.ರಾಮಕೃಷ್ಣ ಅವರು ಕಳೆದ 42 ವರ್ಷಗಳಿಂದ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸಿದ್ದಾರೆ. ಅವರ ಮುಂದಾಳತ್ವದಲ್ಲಿ ಪಕ್ಷದ ಎಲ್ಲಾ ಕಾರ್ಯಗಳು ನಡೆದಿವೆ ಎಂದರು.
42 ವರ್ಷಗಳಿಂದ ಜನತಾದಳ, ಜಾತ್ಯಾತೀತ ಜನತಾದಳದಲ್ಲಿ ಸಕ್ರೀಯವಾಗಿ ಕಾರ್ಯನಿರ್ವಹಿಸಿದ್ದು, 16 ವರ್ಷ ಶಿವಮೊಗ್ಗ ತಾಲೂಕು ಅಧ್ಯಕ್ಷನಾಗಿ, 8 ವರ್ಷ ಜಿಲ್ಲಾ ಘಟಕದಲ್ಲಿ ವಿವಿಧ ಹುದ್ದೆಗಳನ್ನು ನಿರ್ವಹಿಸಿದ್ದು, ಈ ನನ್ನ ಸಾಧನೆ ಗುರುತಿಸಿ ಪಕ್ಷದ ವರಿಷ್ಠರಾದ ಹೆಚ್.ಡಿ.ದೇವೇಗೌಡರು, ಹೆಚ್.ಡಿ.ಕುಮಾರಸ್ವಾಮಿ ಅವರು ನನ್ನನ್ನು ಅಧ್ಯಕ್ಷನನ್ನಾಗಿ ನೇಮಕಮಾಡಿದ್ದು, ಅವರಿಗೆ ಅಭಿನಂದಿಸುತ್ತೇನೆ.
-ಕೆ.ಎನ್.ರಾಮಕೃಷ್ಣ ನೂತನ ಅಧ್ಯಕ್ಷರು
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮುಖಂಡರಾದ ರಾಕೇಶ್ ಡಿಸೋಜಾ, ದಾದಾಪೀರ್, ಅಬ್ದುಲ್ ವಾಜೀದ್, ತ್ಯಾಗರಾಜ್, ಎಂ.ಉಮಾಶಂಕರ ಉಪಾಧ್ಯ, ಹೆಚ್.ಎಂ.ಸಂಗಯ್ಯ, ಪ್ರೇಮ್‍ಕುಮಾರ್, ನರಸಿಂಹ ಗಂಧದಮನೆ, ನಾಗೇಶ್, ನಿಖಿಲ್ ಇನ್ನಿತರರು ಉಪಸ್ಥಿತರಿದ್ದರು.
ಇಂದಿನಿಂದ ಮಹಾತ್ಮಗಾಂಧಿ ಪಾರ್ಕ್ ಸಾರ್ವಜನಿಕ ವೀಕ್ಷಣೆಗೆ ಲಭ್ಯ

ಶಿವಮೊಗ್ಗ : ನಗರದ ಹೃದಯ ಭಾಗದಲ್ಲಿರುವ ಮಹಾತ್ಮಾ ಗಾಂಧಿ ಉದ್ಯಾನವನವನ್ನು 1.8 ಕೋಟಿ ರೂ.ಗಳ ವೆಚ್ಚದಲ್ಲಿ ನವೀಕರಿಸಲಾಗಿದ್ದು, ಇಂದಿನಿಂದಲೇ ಸಾರ್ವಜನಿಕ ವೀಕ್ಷಣೆಗೆ ಅವಕಾಶ ಕಲ್ಪಿಸಲಾಗಿದೆ ಎಂದು ಶಾಸಕ ಎಸ್.ಎನ್.ಚನ್ನಬಸಪ್ಪ ಹೇಳಿದರು.
ಕಾರಂಜಿ, ಕಾಂಪೌಂಡ್ ಗ್ರಿಲ್, ಮಕ್ಕಳ ರೈಲು, ಮಕ್ಕಳ ಆಟಿಕೆಗಳು, ಜಿಮ್ ಉಪಕರಣಗಳು, ಈಜುಕೊಳ ಮೊದಲಾದವುಗಳ ಜೀರ್ಣೋದ್ಧಾರ ಮಾಡಲಾಗಿದೆ. ಪಾರ್ಕಿನ ನಿರ್ವಹಣೆಗೆ ಪ್ರತ್ಯೇಕವಾಗಿ ಒಂದು ಸಮಿತಿ ರಚಿಸಲಾಗಿದೆ. ಇದರಲ್ಲಿ ಉಪ ಆಯುಕ್ತರು (ಆಡಳಿತ), ಉಪ ಆಯುಕ್ತರು (ಅಭಿವೃದ್ಧಿ), ಸಹಾಯಕ ಕಾರ್ಯಪಾಲ ಅಭಿಯಂತರು (ಪರಿಸರ), ಸಹಾಯಕ ಕಾರ್ಯಪಾಲಕ ಅಭಿಯಂತರರು (ಸಿವಿಲ್), ಕಾರ್ಯಪಾಲಕ ಅಭಿಯಂತರರು (ಸಿವಿಲ್) ಮತ್ತು ಎಲೆಕ್ಟ್ರಿಕಲ್ ವಿಭಾಗದ ಅಧಿಕಾರಿಗಳು ಈ ಸಮಿತಿಯಲ್ಲಿ ಇರುತ್ತಾರೆ. ಸಾರ್ವಜನಿಕರಿಗೆ ಏನೇ ತೊಂದರೆಯಾದರೂ ಈ ಸಮಿತಿಯ ಗಮನಕ್ಕೆ ತಂದು ಸಮಸ್ಯೆಯನ್ನು ಬಗೆಹರಿಸಿಕೊಳ್ಳಬಹುದು.
–ಎಸ್.ಎನ್.ಚನ್ನಬಸಪ್ಪ, ಶಾಸಕರು
ಅವರು ಇಂದು ಗಾಂಧಿಪಾರ್ಕಿನಲ್ಲಿ ಕರೆದ ಸುದ್ದಿಗೋಷ್ಟಿಯಲ್ಲಿ ಮಾತನಾಡಿ, 5 ಕೃತಕ ನೀರಿನ ಸಂಗ್ರಹಾಗಾರಗಳನ್ನು ಸ್ವಚ್ಛಗೊಳಿಸಲಾಗಿದೆ. 2 ಬೋರ್‍ವೆಲ್ ಮೂಲಕ ಇವುಗಳಿಗೆ ನೀರು ಸರಬರಾಜು ಮಾಡಿ ಉದ್ಯಾನವನದಲ್ಲಿರುವ ಗಿಡಗಂಟಿಗಳಿಗೆ ಸ್ಪ್ರಿಂಕ್ಲರ್ ಮೂಲಕ ನೀರುಣಿಸಲಾಗುವುದು ಎಂದ ಅವರು, ಉದ್ಯಾನದಲ್ಲಿ 32 ಸಿಸಿ ಕ್ಯಾಮೇರಾಗಳನ್ನು ಅಳವಡಿಸಲಾಗಿದ್ದು, ಇನ್ನು ಮುಂದೆ ಇಡೀ ಉದ್ಯಾನವನ ಸಿಸಿ ಕಣ್ಗಾವಲಿನಲ್ಲಿ ಇರಲಿದೆ. ಸಾರ್ವಜನಿಕರು ಉದ್ಯಾನವನದ ಪ್ರಯೋಜನ ಪಡೆಯಬೇಕೆಂದು ತಿಳಿಸಿದರು.
ಸುದ್ದಿಗೋಷ್ಟಿಯಲ್ಲಿ ಉಪ ಆಯುಕ್ತ ತುಷಾರ್ ಹೊಸೂರ್, ಎಇಇಗಳಾದ ಪ್ರಿಯಾ ಹಾಗೂ ಲಕ್ಷ್ಮಿ ಉಪಸ್ಥಿತರಿದ್ದರು.
ಕಾಂಗ್ರೆಸ್ ಸುಪಾರಿ ಕಿಲ್ಲರ್ ಸರ್ಕಾರ : ಶಾಸಕ ಚನ್ನಬಸಪ್ಪ ವಾಗ್ದಾಳಿ
ಶಿವಮೊಗ್ಗ : ಬೆಂಗಳೂರಿನಲ್ಲಿ ನಿನ್ನೆ ನಡೆದ ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸಭೆ ಯಶಸ್ವಿಯಾಗಿದ್ದು, 2028ರಲ್ಲಿ ರಾಜ್ಯದಲ್ಲಿ ಬಿಜೆಪಿ ಸರ್ಕಾರ ತರಲು ಏನೆಲ್ಲಾ ಯತ್ನ ನಡೆಸಬೇಕೆಂಬುದರ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಶಾಸಕ ಎಸ್.ಎನ್. ಚನ್ನಬಸಪ್ಪ ಹೇಳಿದರು.
ಅವರು ಇಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ರಾಜ್ಯದಲ್ಲಿನ ಕಾಂಗ್ರೆಸ್ ಸರ್ಕಾರ ನಿಷ್ಕ್ರಿಯ ಹಾಗೂ ಅಭಿವೃದ್ಧಿ ಶೂನ್ಯವಾಗಿರುವುದರಿಂದ ಇದರ ವಿರುದ್ಧ ಸಂಘಟನಾತ್ಮಕ ಹೋರಾಟ ಮಾಡಲು ನಿರ್ಧರಿಸಲಾಗಿದೆ. ಕಾಂಗ್ರೆಸ್ ನಿಷ್ಕ್ರಿಯತೆ ಜೊತೆಗೆ ಭ್ರಷ್ಟಾಚಾರದ ಸರ್ಕಾರವಾಗಿದೆ. ಸುಪಾರಿ ಕಿಲ್ಲರ್ ಸರ್ಕಾರವಾಗಿದ್ದು, ಅಬಕಾರಿ ಇಲಾಖೆಯಲ್ಲಿ ಭ್ರಷ್ಟಾಚಾರ ಮಹಿಳೆಯರಿಗೆ ನೀಡುವ ಹಣದಲ್ಲಿ ವಂಚನೆ, ಗುತ್ತಿಗೆ ನೀಡಿಕೆಯಲ್ಲಿ ಶೇ.60 ಕಮೀಷನ್, ರೈತರ ಬಗ್ಗೆ ಕಿಂಚಿತ್ತೂ ಕಾಳಜಿ ಇಲ್ಲ. ಹೀಗಾಗಿ ಅನೇಕ ರೈತರದ್ದು ಸಾವಿನ ಮನೆಗಳಾಗಿ ಪರಿವರ್ತನೆಯಾಗಿದ್ದರ ವಿರುದ್ಧ ಹೋರಾಟ ನಡೆಸಲಾಗುತ್ತದೆ ಎಂದರು.
ಎಸ್‍ಸಿ, ಎಸ್‍ಟಿ ಸಮುದಾಯಗಳಿಗೆ ನೀಡಬೇಕಾದ 42 ಸಾವಿರ ಕೋಟಿ ಅನುದಾನವನ್ನು ನಿಲ್ಲಿಸಿ ಬೇರೆ ಯೋಜನೆಗಳಿಗೆ ಬಳಸಿಕೊಂಡು ಅನ್ಯಾಯ ಮಾಡಲಾಗಿದೆ. ಇದಕ್ಕಾಗಿ ಕಾನೂನು ಬದಲಾವಣೆ ಮಾಡಲು ಸರ್ಕಾರ ಮುಂದಾಗಿದೆ ಎಂದು ದೂರಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಎನ್.ಕೆ. ಜಗದೀಶ್, ನಗರಾಧ್ಯಕ್ಷ ಮೋಹನ ರೆಡ್ಡಿ, ಸೂಡಾ ಮಾಜಿ ಅಧ್ಯಕ್ಷ ಎನ್.ಜೆ. ನಾಗರಾಜ್, ಮಾಧ್ಯಮ ಪ್ರಮುಖ್ ಚಂದ್ರಶೇಖರ್ ಎಸ್. ಸಹಪ್ರಮುಖ್ ಮಂಜುನಾಥ ಇದ್ದರು.
ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಜಿಲ್ಲೆಗೆ 4 ಚಿನ್ನ-4 ಬೆಳ್ಳಿ ಪದಕ

ಶಿವಮೊಗ್ಗ : ಬ್ಯಾಂಕಾಕ್‍ನ ರತನ್ ಬಂಡಿತ್ ಯೂನಿವರ್ಸಿಟಿಯ ಒಳಾಂಗಣ ಕ್ರೀಡಾಂಗಣದಲ್ಲಿ ಫೆ.15ರಂದು ನಡೆದ ಅಂತಾರಾಷ್ಟ್ರೀಯ ಕರಾಟೆ ಪಂದ್ಯಾವಳಿಯಲ್ಲಿ ಶಿವಮೊಗ್ಗ ಹಾಗೂ ಉತ್ತರಕನ್ನಡ ಜಿಲ್ಲೆಯ ಕರಾಟೆ ಪಟುಗಳು ಭಾರತ ದೇಶವನ್ನು ಪ್ರತಿನಿಧಿಸಿ ನಾಲ್ಕು ಚಿನ್ನ ಹಾಗೂ ನಾಲ್ಕು ಬೆಳ್ಳಿ ಪದಕವನ್ನು ಗಳಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ ಎಂದು ಕರ್ನಾಟಕ ಶೋಟೊ ಕಾಯ್ ಕರಾಟೆ ಡೋ ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಚಂದ್ರಕಾಂತ್ ಜಿ.ಭಟ್ ತಿಳಿಸಿದರು.
ಅವರಿಂದು ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಕಟಾ ಮತ್ತು ಕಮಿಟೆ, ಬಾಲಕ, ಬಾಲಕಿಯರ ಸಬ್ ಜೂನಿಯರ್ 14 ವರ್ಷದೊಳಗಿನ ವಿಭಾಗದಲ್ಲಿ ಕರಾಟೆ ಪಟುಗಳು ಪದಕಗಳಿಸಿ ವೈಯಕ್ತಿಕ ವಿಭಾಗದಲ್ಲಿ ವಿಜೇತರಾಗಿದ್ದಾರೆ ಎಂದರು. ತೀರ್ಥಹಳ್ಳಿಯ ಸೆಂಟ್ ಮ್ಯಾರೀಸ್ ಇಂಗ್ಲೀಷ್ ಶಾಲೆಯ ಕ್ಲಿಯೋನ್ ಫೆಬಿಲಿಯೊ ಮಾರ್ಟಿಸ್, 26 ರಿಂದ 30 ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕ ಗಳಿಸಿದ್ದಾರೆ, ತೀರ್ಥಹಳ್ಳಿಯ ಸೇವಾಭಾರತಿ ಶಿಕ್ಷಣ ಸಂಸ್ಥೆಯ ರಾಹುಲ್ ಭಾರದ್ವಾಜ್ 46 ರಿಂದ 50 ಕೆ.ಜಿ. ವಿಭಾಗದಲ್ಲಿ ಕಟಾ ಮತ್ತು ಕಮಿಟೆಯಲ್ಲಿ 2 ಬೆಳ್ಳಿ ಪದಕವನ್ನು ಹಾಗೂ ಬಾಲಕಿಯರ ವಿಭಾಗದಲ್ಲಿ ತೀರ್ಥಹಳ್ಳಿಯ ವಾಗ್ದೇವಿ ಶಿಕ್ಷಣ ಸಂಸ್ಥೆಯ ಸಾನ್ವಿ ಜೋಯ್ಸ್, 46 ರಿಂದ 50 ಕೆ.ಜಿ. ವಿಭಾಗದಲ್ಲಿ ಒಂದು ಚಿನ್ನ ಹಾಗೂ ಒಂದು ಬೆಳ್ಳಿ ಪದಕವನ್ನು ಗಳಿಸಿರುತ್ತಾಳೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಪದಕಗಳನ್ನು ಗಳಿಸಿದವರು, ಮಹಾಬಲ ಜೋಯ್ಸ್, ಚಂದ್ರಹಾಸ, ಕ್ಲೇವನ್ ಮಾರ್ಟಿಸ್ ಉಪಸ್ಥಿತರಿದ್ದರು.

ಶ್ರೀ ಜಗನ್ನಾಥದಾಸರು ಭಾಗ-2 ಚಲನಚಿತ್ರದ ಉಚಿತ ಪ್ರದರ್ಶನ
ಶ್ರೀ ಜಗನ್ನಾಥ ದಾಸರು – ಭಾಗ 2 ಚಲನಚಿತ್ರವನ್ನು ಶಿವಮೊಗ್ಗದ ಶ್ರೀ ಮಂಜುನಾಥ ಚಿತ್ರಮಂದಿರದಲ್ಲಿ ಫೆ.20, 21, 22 ರಂದು ಪ್ರತಿದಿನ 8 ಪ್ರದರ್ಶನಗಳನ್ನು ಉಚಿತವಾಗಿ ಏರ್ಪಡಿಸಲಾಗಿದೆ.
ಕನ್ನಡ ಹರಿದಾಸ ಸಾಹಿತ್ಯ ಲೋಕದಲ್ಲಿ ದಾಸಪಂಥವನ್ನು ಉನ್ನತ ಮಟ್ಟಕ್ಕೆ ಕೊಂಡೊಯ್ದು ಹರಿಕಥಾಮೃತ ಸಾರ ಎಂಬ ಕೃತಿಯ ಮೂಲಕ ಜನಸಾಮಾನ್ಯರಿಗೆ ಬದುಕುವ ಕಲೆಯನ್ನು, ಭಗವಂತನ ಸಾಕ್ಷಾತ್ಕಾರದ ರೀತಿಯನ್ನು ಹರಿದಾಸ ಸಾಹಿತ್ಯದ ಮೂಲಕ, ಕೀರ್ತನೆಗಳ ಮೂಲಕ, ಪಸರಿಸಿದ ಕೀರ್ತಿ ಹೊತ್ತಿರುವ ಶ್ರೀ ಜಗನ್ನಾಥದಾಸರು ಭಾಗ-2 ಚಲನ ಚಿತ್ರವನ್ನು ಎಲ್ಲರೂ ವೀಕ್ಷಿಸಿ, ಹರಿದಾಸರ ಹಾಗೂ ಶ್ರೀ ಜಗನ್ನಾಥ ವಿಠಲನ ಕೃಪೆಗೆ ಪಾತ್ರರಾಗಲು ಕೋರಿದೆ.
ಈ ಚಲನಚಿತ್ರದ ಉಚಿತ ವೀಕ್ಷಣೆಗೆ ಶಿವಮೊಗ್ಗದ ರಾಯಲ್ ಪ್ರಿಂಟರ್‌ನ ಮಾಲೀಕ ಎಂ. ಮಾಧವಾಚಾರ್‌ರವರು ಪ್ರಾಯೋಜಕರಾಗಿರುತ್ತಾರೆ.
ಫೆ: 24 ರಂದು ಮಹಾರುದ್ರಾಭಿಷೇಕ
ಭದ್ರಾವತಿ: ತಾಲೂಕಿನ ವೀರಾಪುರ ಗ್ರಾಮದಲ್ಲಿರುವ ಕ್ಷೇತ್ರನಾಥ ಶ್ರೀ ವೀರಭದ್ರ ಸ್ವಾಮಿ ದೇವಾಲಯದಲ್ಲಿ 25 ನೇ ವರ್ಷದ ಮಹಾರುದ್ರಾಭಿಷೇಕ ಮಹೋತ್ಸವವು ಫೆ: 24 ರಂದು ಮಂಗಳವಾರ ನಡೆಯಲಿದೆ. ತರೀಕೆರೆ ಹಿರೇಮಠದ ಶ್ರೀ ಜಗದೀಶ್ವರ ಶಿವಾಚಾರ್ಯ ಸ್ವಾಮಿಗಳವರ ನೇತೃತ್ವದಲ್ಲಿ ಧಾರ್ಮಿಕ ಕಾರ್ಯಕ್ರಮ ನಡೆದು ಆಶೀರ್ವಚನ ನೀಡಲಿದ್ದಾರೆ. ವಿಶೇಷ ಪೂಜೆ ಹಾಗು ಕೆಂಡಾರ್ಚನೆ ಸೇರಿದಂತೆ ಇತರ ಧಾರ್ಮಿಕ ಕಾರ್ಯಗಳು ನಡೆಯಲಿದೆ. ಅಂದು ಬೆಳಿಗ್ಗೆ 5 ಗಂಟೆಗೆ ಬ್ರಾಹ್ಮಿ ಮುಹೂರ್ತದಲ್ಲಿ ಮಹಾ ರುದ್ರಾಭಿಷೇಕ ನಡೆಯಲಿದೆ. ನಂತರ 8 ಗಂಟೆಯಿಂದ ವೀರಗಾಸೆ ಮತ್ತು ಮಂಗಳವಾದ್ಯ ಸಹಿತ ಶ್ರೀ ಸ್ವಾಮಿಯ ಉತ್ಸವ ಮತ್ತು ಕೆಂಡಾರ್ಚನೆ ಏರ್ಪಡಿಸಲಾಗಿದೆ.
ಕ್ಷತ್ರೀಯ ಮರಾಠ ಮಹಾ ಒಕ್ಕೂಟದ ಜಿಲ್ಲಾಧ್ಯಕ್ಷರಾಗಿ ಎಂ.ಡಿ.ದೇವರಾಜ ಶಿಂಧೆ ನೇಮಕ
ಶಿವಮೊಗ್ಗ:‘ಕರ್ನಾಟಕ ಕ್ಷತ್ರೀಯ ಮರಾಠ ಮಹಾ ಒಕ್ಕೂಟದ ಜಿಲ್ಲಾ ಘಟಕ ಅಧ್ಯಕ್ಷರಾಗಿ ವಿನೋಬನಗರ ನಿವಾಸಿ ಎಂ.ಡಿ.ದೇವರಾಜ ಶಿಂಧೆ ಅವರನ್ನು ನೇಮಕಗೊಳಿಸಿ ಒಕ್ಕೂಟದ ರಾಜ್ಯ ಘಟಕ ಅಧ್ಯಕ್ಷ ಡಿ.ಎಸ್.ಶ್ಯಾಮಸುಂದರ್ ಗಾಯಕ್ ವಾಡ್ ಅವರು ಆದೇಶ ಹೊರಡಿಸಿದ್ದಾರೆ.’
ಜಿಲ್ಲೆಯಾದ್ಯಂತ ಪ್ರವಾಸ ಕೈಗೊಂಡು ಜಿಲ್ಲಾ ಸಮಿತಿ, ತಾಲ್ಲೂಕು ಸಮಿತಿಗಳನ್ನು ಒಂದು ತಿಂಗಳೊಳಗೆ ರಚಿಸಬೇಕು. ಸಮುದಾಯದ ಅಭಿವೃದ್ಧಿಗೆ ವಿವಿಧ ಕಾರ್ಯಕ್ರಮಗಳನ್ನು ಕೈಗೊಂಡು ಸಮಾಜದ ಏಳಿಗೆಗೆ ಶ್ರಮಿಸಬೇಕು. ಮೂರು ತಿಂಗಳೊಳಗೆ ಜಿಲ್ಲಾ ಸಮಾವೇಶವನ್ನು ಮಾಡುವಂತೆ ಸೂಚಿಸಿದ್ದಾರೆ ಎಂದು ದೇವರಾಜ ಶಿಂಧೆ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಹೊಸನಗರ: ಫೆ. 25 ರಂದು ಗೋವರ್ಧನ ಗಿರಿಧಾರಿಯಲ್ಲಿ ಕೃಷ್ಣಾರ್ಪಣಮ್
ಹೊಸನಗರ: ತಾಲ್ಲೂಕಿನ ರಾಮಚಂದ್ರಾಪುರಮಠದ ಮಹಾನಂದಿ ಗೋಲೋಕದಲ್ಲಿರುವ ಗೋವರ್ಧನ ಗಿರಿಧಾರಿ ದೇವರ ಸನ್ನಿಧಿಯಲ್ಲಿ ಫೆ. 25 ರಂದು ಗೋಪಾಲಕೃಷ್ಣ ದೇವರ ಪ್ರತಿಷ್ಠಾ ವರ್ಧಂತಿ, ಗೋದೀಪ ಮಹೋತ್ಸವ, ವಿಷ್ಣು ಸಹಸ್ರನಾಮ ಪಠಣ, ಛತ್ರ ಸಮರ್ಪಣೆ, ಪಾಂಚಜನ್ಯ ಸೇವೆ,
ಲೇಖನ ಯಜ್ಞ ಸಮರ್ಪಣೆ ಸೇರಿದಂತೆ ಗೋಲೋಕ ವರ್ಷ ಸಂಭ್ರಮದ ಕೃಷ್ಣಾರ್ಪಣಮ್ ಕಾರ್ಯಕ್ರಮ ನಡೆಯಲಿದೆ.ಅಂದು ಸಂಜೆ ನಡೆಯುವ ಗೋದೀಪ ಮಹೋತ್ಸವ ಬಲು ವಿಶಿಷ್ಟತೆಯನ್ನು ಒಳಗೊಂಡಿದೆ. ಬುಧವಾರದಿಂದ ಧಾರ್ಮಿಕ ಕಾರ್ಯಕ್ರಮ ಆರಂಭಗೊಂಡಿದೆ. ಫೆ.24ರ ವರೆಗೆ ನಿತ್ಯ ಬೆಳಿಗ್ಗೆ 7 ಗಂಟೆಯಿಂದ ಮಧ್ಯಾಹ್ನ 12.30ರ ವರೆಗೆ ಭಾಗವತ ಸಪ್ತಾಹ ಜರುಗಲಿದೆ. ಫೆ. 24 ರಂದು ಗೋಸಂಪದಾಭಿವೃದ್ದಿ, ಕ್ಷೇತ್ರಪುಷ್ಠಿ ಮತ್ತು ಲೋಕಕಲ್ಯಾಣಾರ್ಥ ವಿವಿಧ ಧಾರ್ಮಿಕ ಕಾರ್ಯಕ್ರಮ ನಡೆಯಲಿವೆ.ಫೆ. 25 ರಂದು ಬೆಳಿಗ್ಗೆ ಶ್ರೀಪೂಜೆ, ಪಾದುಕ ಪೂಜೆ ಮತ್ತು 7 ಗಂಟೆಗೆ ಸೋಪಾನಪೂಜೆ ಹಾಗೂ ಪ್ರತಿಷ್ಠಾ ವರ್ಧಂತಿ ನಡೆಯಲಿದೆ. ನಂತರ ವಿಷ್ಣು ಸಹಸ್ರನಾಮ ಪಾರಾಯಣ, ಛತ್ರ, ಪಾಂಚಜನ್ಯ ಸಮರ್ಪಣೆ, ಗೋವುಗಳಿಗೆ ಗೋಗ್ರಾಸ ಸಮರ್ಪಣೆ ಮತ್ತಿತರ ಕಾರ್ಯಕ್ರಮ ಸಂಪನ್ನಗೊಳ್ಳಲಿದೆ ಎಂದು ಸಮಿತಿ ಪ್ರಕಟಣೆಯಲ್ಲಿ ತಿಳಿಸಿದೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ : 7483162573, yuvadhwanismg@gmail.com