ಶಿವಮೊಗ್ಗ: ಶಾಲಾ ಕಾಲೇಜುಗಳಲ್ಲಿ ಮಾತ್ರವಲ್ಲ ಇಡೀ ರಾಜ್ಯವೇ ಕೇಸರಿಮಯವಾಗಿ ಕಾಂಗ್ರೆಸ್ ನಿರ್ನಾಮವಾಗುತ್ತದೆ ಎಂದು ಹೇಳಿರುವ ಮಾಜಿ ಡಿಸಿಎಂ ಕೆ.ಎಸ್. ಈಶ್ವರಪ್ಪ ಅವರ ಹೇಳಿಕೆಗೆ ಶಿವಮೊಗ್ಗ ಜಿಲ್ಲಾ ಯುವ ಕಾಂಗ್ರೆಸ್ ಮುಖಂಡ ಸಿ.ಜಿ. ಮಧುಸೂದನ್ ಖಂಡಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಮಧುಸೂದನ್, ಕೆ.ಎಸ್. ಈಶ್ವರಪ್ಪ ಅವರಿಗೆ ಬಿಜೆಪಿ ಪಕ್ಷವೇ ರಾಜಕೀಯ ನಿವೃತ್ತಿ ನೀಡಿದೆ. ಆದರೆ, ಇನ್ನೂ ಅಧಿಕಾರದ ಆಸೆಯಿಂದ ಅವರು ರಾಷ್ಟಭಕ್ತರ ಬಳಗ ಕಟ್ಟಿಕೊಂಡು ಅಧಿಕಾರದ ಕನಸು ಕಾಣುತ್ತಿದ್ದಾರೆ. ಅದಕ್ಕಾಗಿ ಕಾಂಗ್ರೆಸ್ ವಿರುದ್ಧ ಅಸಂಬದ್ಧ ಹೇಳಿಕೆಗಳನ್ನು ನೀಡುತ್ತಾ ಪ್ರಚಾರ ಪಡೆಯುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ > ಇಡೀ ರಾಜ್ಯ ಕೇಸರಿಮಯವಾಗಲಿದೆ!, ಕಾಂಗ್ರೆಸ್ ನಿರ್ನಾಮ ಖಚಿತ, ಮಾಜಿ ಡಿಸಿಎಂ ಕೆ.ಎಸ್.ಈಶ್ವರಪ್ಪ
ಈಶ್ವರಪ್ಪನವರು ತಮ್ಮ ರಾಜಕೀಯ ಜೀವನದುದ್ದಕ್ಕೂ ಕೋಮು ವಿವಾದ ಸೃಷ್ಟಿಸುತ್ತಾ ಮತದಾರರನ್ನು ದಿಕ್ಕುತಪ್ಪಿಸಿ ರಾಜಕೀಯ ಲಾಭ ಪಡೆದುಕೊಳ್ಳುತ್ತಲೇ ಬಂದಿದ್ದಾರೆ. ಈ ದೇಶದ ಸಂವಿಧಾನದಲ್ಲಿ ಎಲ್ಲಾ ಧರ್ಮ, ಮತದವರಿಗೂ ಸಮಾನ ಅವಕಾಶಗಳನ್ನು ಕೊಡಲಾಗಿದೆ ಎನ್ನುವುದನ್ನೇ ಅವರು ಮರೆತಿದ್ದಾರೆ. ಅಲ್ಪಸಂಖ್ಯಾತರನ್ನು ತಮ್ಮ ರಾಜಕೀಯ ಲಾಭಕ್ಕೆ ಬಳಸಿಕೊಳ್ಳುತ್ತಾ ಬಂದಿರುವ ಈಶ್ವರಪ್ಪನವರ ಶಿಕ್ಷಣ ಸಂಸ್ಥೆಯ ಮರ್ಯಾದೆಯನ್ನು ಉಳಿಸಿದ್ದು, ಅದೇ ಅಲ್ಪಸಂಖ್ಯಾತ ಸಮುದಾಯದ ಓರ್ವ ವಿದ್ಯಾರ್ಥಿನಿ ಎನ್ನುವುದನ್ನು ಮರೆತಿದಿದ್ದಾರೆ ಎಂದು ಟೀಕಿಸಿದ್ದಾರೆ.
ಶಿಕ್ಷಣ ಸಂಸ್ಥೆಗಳು ಸರ್ವ ಜನಾಂಗದ ಶಾಂತಿಯ ತೋಟ. ಆದರೆ, ಅಲ್ಲಿ ಹಿಜಾಬ್ ಎಂದು ಹೇಳುತ್ತಾ ಈಶ್ವರಪ್ಪ ಗೊಂದಲ ಸೃಷ್ಟಿಸುವ ಕೆಲಸವನ್ನು ಮಾಡುತ್ತಾ ಬಂದಿದ್ದಾರೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಶಿಕ್ಷಣ ಸಂಸ್ಥೆಗಳನ್ನು ನಿಜಾರ್ಥದಲ್ಲಿ ಸರ್ವ ಜನಾಂಗದ ತೋಟ ಮಾಡಲು ಮಾಡಿರುವ ಆದೇಶವನ್ನು ಮಾಡಿದ್ದು, ಶಾಲಾ ಕಾಲೇಜುಗಳಲ್ಲಿ ಹಿಜಾಬ್, ಜನಿವಾರ, ರುದ್ರಾಕ್ಷಿ ಸೇರಿದಂತೆ ಅವರವರ ಆಚಾರದ ಸಂಕೇತಗಳನ್ನು ಧರಿಸಲು ಅವಕಾಶ ನೀಡಿದ್ದಾರೆ. ಇದನ್ನು ಒಪ್ಪಿಕೊಳ್ಳಲು ಇವರಿಗೆ ಆಗುತ್ತಿಲ್ಲ. ಹಾಗಾಗಿ ಈಶ್ವರಪ್ಪರ ರೀತಿಯ ವ್ಯಕ್ತಿಗಳು ತಲೆಬುಡವಿಲ್ಲದ ಹೇಳಿಕೆಗಳನ್ನು ನೀಡುತ್ತಾ ಪ್ರಚಾರ ಪಡೆದುಕೊಳ್ಳುತ್ತಿರುವುದು ಸರಿಯಲ್ಲ.
ಇದನ್ನೂ ಓದಿ > ಶಿವಮೊಗ್ಗ ಎಂಆರ್‌ಎಸ್ ವೃತ್ತದ ಡಬಲ್ ಟ್ಯಾಂಕ್ ಇನ್ನು ನೆನಪು, ಹಳೆಯ ವಾಟರ್ ಟ್ಯಾಂಕ್ ಡೆಮಾಲಿಷ್
ಈ ಬಾರಿಯ ಪಿಯುಸಿ ಫಲಿತಾಂಶದಲ್ಲಿ ಅಲ್ಪಸಂಖ್ಯಾತ ವಿದ್ಯಾರ್ಥಿನಿ ಜಿಲ್ಲೆಗೆ ಪ್ರಥಮ, ರಾಜ್ಯಕ್ಕೆ ನಾಲ್ಕನೆಯವಳಾಗಿ ಸಾಧನೆ ಮಾಡಿದ್ದನ್ನು ಸ್ವತಃ ಈಶ್ವರಪ್ಪ ಒಪ್ಪಿಕೊಂಡಿದ್ದರು. ಅವರಿಗೆ ಧೈರ್ಯವಿದ್ದರೆ, ಅವರ ಶಿಕ್ಷಣ ಸಂಸ್ಥೆಯಲ್ಲಿ ಅಲ್ಪಸಂಖ್ಯಾತರಿಗೆ ಅವಕಾಶವಿಲ್ಲ ಎಂದು ಬೋರ್ಡ್ ಹಾಕಲಿ ಎಂದು ಸವಾಲು ಹಾಕಿದ್ದಾರೆ.
ತಮ್ಮ ಮಗನ ರಾಜಕೀಯ ಭವಿಷ್ಯ ರೂಪಿಸಲು ಈಶ್ವರಪ್ಪ ಪ್ರಯತ್ನಿಸುತ್ತಿದ್ದು, ಇದರ ಅಂಗವಾಗಿ ಈ ರೀತಿಯ ಹೇಳಿಕೆ ನೀಡುತ್ತಿದ್ದಾರೆ. ಈಶ್ವರಪ್ಪನವರು ಇನ್ನಾದರೂ ತಮ್ಮ ದೃಷ್ಟಿಕೋನವನ್ನು ಬದಲಾಯಿಸಿಕೊಳ್ಳಲಿ. ರಾಜಕೀಯವಾಗಿ ಸ್ವಯಂ ನಿವೃತ್ತಿ ಪಡೆಯಲಿ ಎಂದು ಸಿ.ಜಿ. ಮಧುಸೂದನ್ ಆಗ್ರಹಿಸಿದ್ದಾರೆ.















