ಸಾಗರ : ಬೇಸೂರಿನಲ್ಲಿ ಪ್ರಸ್ತಾವಿತ ಅಣು ವಿದ್ಯುತ್ ಸ್ಥಾವರ ವಿರೋಧಿಸಿ ಬುಧವಾರ ಮಲೆನಾಡು ಅಣು ವಿದ್ಯುತ್ ಸ್ಥಾವರ ಕರೆ ಕೊಟ್ಟಿದ್ದ 25 ಕಿ.ಮೀ. ಪಾದಯಾತ್ರೆ ಅಭೂತಪೂರ್ವ ಯಶಸ್ಸು ಕಂಡಿದೆ. ಸಾವಿರಾರು ಜನರು ಪಾದಯಾತ್ರೆಯಲ್ಲಿ ಧಣಿವರಿಯದೆ 25ಕಿ.ಮೀ. ನಡೆದು ಬಂದು ಏಸೂರು ಕೊಟ್ಟರೂ ಬೇಸೂರು ಕೊಡೆವು ಎಂದು ಘೋಷಣೆ ಕೂಗಿ ಅಣು ಸ್ಥಾವರ ಪ್ರಸ್ತಾವನೆಯನ್ನು ಲಿಖಿತ ರೂಪದಲ್ಲಿ ರದ್ದುಪಡಿಸಿದ್ದೇವೆ ಎಂದು ಆದೇಶ ಹೊರಡಿಸಲು ಒತ್ತಾಯಿಸಿದರು.
ಬೇಸೂರಿನಿಂದ ಪಾದಯಾತ್ರೆಗೆ ಚಾಲನೆ
ಬೇಸೂರು ಬಸವಣ್ಣ ದೇವಸ್ಥಾನದಿಂದ ಬೆಳಿಗ್ಗೆ 9ಕ್ಕೆ ಗಂಟೆಗೆ ಪಾದಯಾತ್ರೆಗೆ ತಾಳಗುಪ್ಪ ಕೂಡ್ಲಿಮಠದ ಶ್ರೀಗಳು ಮತ್ತು ಮೂಲೆಗದ್ದೆ ಮಠದ ಶ್ರೀಗಳು ಚಾಲನೆ ನೀಡಿ, ಯಾವುದೇ ಕಾರಣಕ್ಕೂ ಮಲೆನಾಡು ಭಾಗದಲ್ಲಿ ಅಣು ವಿದ್ಯುತ್ ಸ್ಥಾವರ ಬೇಡ. ಪ್ರಸ್ತಾಪಿತ ಯೋಜನೆಯನ್ನು ರದ್ದುಪಡಿಸಿ ಎಂದು ಒತ್ತಾಯಿಸಿದರು.
ಗ್ರಾಮಗಳಲ್ಲಿ ಅಭೂತಪೂರ್ವ ಸ್ವಾಗತ
ಪ್ರಸ್ತಾಪಿತ ಅಣು ವಿದ್ಯುತ್ ಸ್ಥಾವರ ಯೋಜನೆ ವಿರುದ್ದ ಹಮ್ಮಿಕೊಂಡಿದ್ದ ಪಾದಯಾತ್ರೆ ಸಾಗಿ ಬರುವ ಗ್ರಾಮಗಳಲ್ಲಿ ಅಭೂತಪೂರ್ವವಾದ ಬೆಂಬಲ ದೊರೆಯಿತು. ಗ್ರಾಮಸ್ಥರು ತಮ್ಮೂರಿಗೆ ಪಾದಯಾತ್ರೆ ಬಂದಾಗ ಘೋಷಣೆ ಮೂಲಕ ಸ್ವಾಗತಿಸಿ, ಪಾದಯಾತ್ರೆ ಜೊತೆ ಹೆಜ್ಜೆಹಾಕುತ್ತಿದ್ದ ದೃಶ್ಯ ಕಂಡು ಬಂದಿತ್ತು. ಕೆಲವು ಗ್ರಾಮಗಳಲ್ಲಿ ಮಕ್ಕಳು ಸಹ ಪಾದಯಾತ್ರೆ ಜೊತೆ ಸಾಗಿ ಬಂದಿದ್ದು ವಿಶೇಷವಾಗಿತ್ತು. ಪಾದಯಾತ್ರೆಯಲ್ಲಿ ಬರುತ್ತಿದ್ದವರಿಗೆ ಗ್ರಾಮಗಳಲ್ಲಿ ಕುಡಿಯುವ ನೀರು, ಮಜ್ಜಿಗೆ, ಉಪಹಾರ ಕೊಡುವ ಮೂಲಕ ಸಹಕಾರ ನೀಡಿದರು.
ಹೋರಾಟಕ್ಕೆ ಸಂಪೂರ್ಣ ಬೆಂಬಲ
ಲಿಂಗನಮಕ್ಕಿ ಜಲಾಶಯ ಸಂದರ್ಭದಲ್ಲಿ ಜಮೀನು ಕಳೆದುಕೊಂಡವರಿಗೆ ಇನ್ನೂ ಹಕ್ಕುಪತ್ರ ನೀಡಿಲ್ಲ. ಇದು ರೈತರ ಉಳಿವಿಗಾಗಿ ನಡೆಯುತ್ತಿರುವ ಪಕ್ಷಾತೀತ ಹೋರಾಟವಾಗಿದೆ. ಬೇಸೂರು ಅಣು ವಿದ್ಯುತ್ ಸ್ಥಾವರ ಬೇಡ ಎಂದು ಕೇಂದ್ರಕ್ಕೆ ನಾನು ಮನವಿ ಮಾಡುತ್ತೇನೆ. ಅದೇ ರೀತಿ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ರಾಜ್ಯದ ಮೇಲೆ ಒತ್ತಡ ತರಲಿ. ಯಾವುದೇ ಕಾರಣಕ್ಕೂ ಯೋಜನೆ ಜಾರಿಗೆ ತರದಂತೆ ನಿಮ್ಮ ಹೋರಾಟಕ್ಕೆ ಸಂಪೂರ್ಣ ಬೆಂಬಲ ನೀಡುತ್ತೇನೆ.
-ಬಿ.ವೈ.ರಾಘವೇಂದ್ರ, ಸಂಸದರು
ಬೇಸೂರಿನಲ್ಲಿ ಅಣು ಸ್ಥಾವರಕ್ಕೆ ಬಿಡಲ್ಲ
ಸಂಸದರು ಕೇಂದ್ರದ ಹಂತದಲ್ಲಿ ಅಣು ವಿದ್ಯುತ್ ಸ್ಥಾವರ ಮಾಡಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದ್ದಾರೆ. ರಾಜ್ಯ ಸರ್ಕಾರದ ಮೇಲೆ ಸಹ ನಾನು ಯೋಜನೆಗೆ ಒಪ್ಪಿಗೆ ನೀಡದಂತೆ ಮನವಿ ಮಾಡಿದ್ದು, ನನ್ನ ಶಾಸಕತ್ವ ಹೋದರೂ ಚಿಂತೆಯಿಲ್ಲ. ರೈತರ ಪರವಾಗಿ ಯೋಜನೆ ವಿರುದ್ದ ಹೋರಾಟ ಮಾಡುತ್ತೇನೆ. ಇಲ್ಲಿ ರಾಜಕೀಯ ಮುಖ್ಯವಲ್ಲ, ಪ್ರಸ್ತಾಪಿತ ಯೋಜನೆ ಜಾರಿಗೆ ತರಲು ಬಿಡುವುದಿಲ್ಲ.
-ಗೋಪಾಲಕೃಷ್ಣ ಬೇಳೂರು, ಶಾಸಕರು
ಸಂಘಟನಾ ಶಕ್ತಿ ಕಾಪಾಡಿಕೊಳ್ಳಬೇಕು
ಯಾವ ಕಾರಣಕ್ಕೂ ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಅವಕಾಶ ಕೊಡೋಣ ಎಂದು ಒಕ್ಕೊರಲಿನ ಧ್ವನಿ ಎತ್ತೋಣ. ನಾಡನ್ನು ಕಾಪಾಡಿಕೊಳ್ಳುವುದು ಎಲ್ಲರ ಕರ್ತವ್ಯ. ಸಂಕುಚಿತ ಭಾವನೆಗೆ ಅವಕಾಶ ಕೊಡದಂತೆ ಇಡೀ ಮಲೆನಾಡಿನ ಜನರು ಒಗ್ಗಟ್ಟಾಗಿ ವಿದ್ಯುತ್ ಸ್ಥಾವರ ವಿರುದ್ದದ ಕೂಗು, ಆತ್ಮ ನಿವೇದನೆಯನ್ನು ಸರ್ಕಾರಕ್ಕೆ ಮಾಡಿಕೊಳ್ಳಬೇಕು. ಜನರ ಹಿತಕ್ಕಾಗಿ ಯೋಜನೆ ಬೇಕೆ ವಿನಃ, ಜನೋಪಯೋಗಿ ಯೋಜನೆ ಬೇಕು. ಆದರೆ ಮಾರಕವಾಗಬಾರದು, ಪೂರಕವಾಗಿರಬೇಕು.
-ಮುರುಘಾಮಠದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮಿಗಳು
ಬೇಸೂರಿನಲ್ಲಿ ಅಣು ಸ್ಥಾವರಕ್ಕೆ ಒಪ್ಪಿಗೆ ನೀಡಿಲ್ಲ
ಬೇಸೂರಿನಲ್ಲಿ ಅಣು ವಿದ್ಯುತ್ ಸ್ಥಾವರಕ್ಕೆ ಜಿಲ್ಲಾಡಳಿತದಿಂದ ಯಾವುದೇ ಪರವಾನಿಗೆ ನೀಡಿಲ್ಲ. ಮೌಖಿಕ ಚರ್ಚೆ ನಡೆದಿದೆಯೆ ವಿನಃ, ಲಿಖಿತ ರೂಪದಲ್ಲಿ ಯಾರೂ ಕೇಳಿಲ್ಲ, ನಾವು ಕೊಟ್ಟಿಲ್ಲ. ಎನ್.ಟಿ.ಪಿ.ಸಿ. ಕೆಲವು ಪ್ರದೇಶಗಳ ಬಗ್ಗೆ ಮಾಹಿತಿ ಕ್ರೋಢಿಕರಣಕ್ಕಾಗಿ ಕಂದಾಯ ಇಲಾಖೆಯಿಂದ ಮಾಹಿತಿ ಕೇಳಿದ್ದರು ಬಿಟ್ಟರೇ ಸರ್ಕಾರದಿಂದ ಅಧಿಕೃತವಾಗಿ ಜಾಗ ಗುರುತಿಸಿ ಕಳಿಸಿ ಎಂದು ಕೇಳಿಲ್ಲ. ಸರ್ಕಾರದಲ್ಲಿ ಯಾವುದೇ ರೀತಿಯ ಪ್ರಸ್ತಾವನೆ ಇಲ್ಲ.
-ಪ್ರಭುಲಿಂಗ ಕವಳಿಕಟ್ಟಿ, ಜಿಲ್ಲಾಧಿಕಾರಿ
ಸಹಸ್ರಾರು ಸಂಖ್ಯೆಯಲ್ಲಿದ್ದೇವೆ
ಬೇಸೂರು ಅಣು ವಿದ್ಯುತ್ ಸ್ಥಾವರಕ್ಕೆ ಸಹಸ್ರಾರು ಜನರ ಬೆಂಬಲ ಸಿಕ್ಕಿದ್ದು ತುಂಬಾ ಸಂತೋಷ ತಂದಿದೆ. ಪಾದಯಾತ್ರೆ ನಂತರ ಸರಣಿ ಹೋರಾಟ ಹಮ್ಮಿಕೊಳ್ಳಲಾಗಿದೆ. ಸರ್ಕಾರ ಪ್ರಸ್ತಾಪಿತ ಯೋಜನೆ ಕೈಬಿಡದೆ ಹೋದಲ್ಲಿ ಮುಂದಿನ ದಿನಗಳಲ್ಲಿ ಹೋರಾಟ ಉಗ್ರ ಸ್ವರೂಪ ಪಡೆಯುತ್ತದೆ.
-ಬೇಸೂರು ಇಂದೂಧರ , ಹೋರಾಟ ಸಮಿತಿ ಅಧ್ಯಕ್ಷ
ಪ್ರತಿಭಟನೆಯಲ್ಲಿ ಮೂಲೆಗದ್ದೆ ಮಠದ ಅಭಿನವ ಚನ್ನಬಸವ ಸ್ವಾಮಿಗಳು, ವಿಧಾನ ಪರಿಷತ್ ಸದಸ್ಯ ಡಾ. ಧನಂಜಯ ಸರ್ಜಿ, ರಂಗಕರ್ಮಿ ಕೆ.ವಿ.ಅಕ್ಷರ, ಪ್ರಮುಖರಾದ ಪ್ರಸನ್ನ ಕೆರೆಕೈ, ತೀ.ನ.ಶ್ರೀನಿವಾಸ್, ಮಲ್ಲಿಕಾರ್ಜುನ ಹಕ್ರೆ, ಮೈತ್ರಿ ಪಾಟೀಲ್, ದಿನೇಶ್ ಶಿರವಾಳ, ಸೀತಾರಾಮ ಕುರುವರಿ, ನಾಗೇಂದ್ರ ಸಾಗರ್, ಕೆ.ಜಿ.ಪ್ರಶಾಂತ್, ನವೀನ್ ಕೆ.ವಿ., ಅಖಿಲೇಶ್ ಚಿಪ್ಪಳಿ, ಶ್ಯಾಮಲಾ ದೇವರಾಜ್, ನಾಗರಾಜ್ ಈ., ಅಶೋಕ ಬೇಳೂರು ಇನ್ನಿತರರು ಹಾಜರಿದ್ದರು.















