ಶಿವಮೊಗ್ಗ : ಹೂಡಿಕೆ ಹೆಸರಿನಲ್ಲಿ ಅಧಿಕ ಲಾಭದ ಆಮಿಷ ಒಡ್ಡಿ ಜಿಲ್ಲೆಯ ಕುಟುಂಬವೊಂದಕ್ಕೆ ಲಕ್ಷಾಂತರ ರೂಪಾಯಿ ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ.
ಆನ್‌ಲೈನ್ ಹೂಡಿಕೆ ಹೆಸರಿನಲ್ಲಿ ಟೈಲರ್ ವೃತ್ತಿ ಮಾಡುವ ವ್ಯಕ್ತಿಯೊಬ್ಬರಿಗೆ ಲಿಂಕ್ ಕಳುಹಿಸಿ ಅಧಿಕ ಲಾಭದ ಆಮಿಷ ಒಡ್ಡಲಾಗಿದೆ. ವಾಟ್ಸಾಪ್ ಮೂಲಕ ಮೊಬೈಲ್‌ಗೆ ಮೆಸೇಜ್ ಕಳುಹಿಸಿ ತಾವು ಕಂಪನಿಯೊಂದರ ಪ್ರತಿನಿಧಿಗಳು ಎಂದು ಪರಿಚಯಿಸಿಕೊಂಡು ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ನಂಬಿಸಿ, ನಂತರ ವೆರಿಫಿಕೇಷನ್, ಪ್ರೋಸೆಸ್ ಚಾರ್ಜಸ್, ಸರ್ವೀಸ್ ಚಾರ್ಜಸ್ ಹಾಗೂ ಟ್ಯಾಕ್ಸ್ ಹೆಸರಿನಲ್ಲಿ ಹಂತ ಹಂತವಾಗಿ ಹಣ ವರ್ಗಾಯಿಸಿಕೊಂಡಿದ್ದರು.
ಇದನ್ನೂ ಓದಿ > ಏಸೂರು ಕೊಟ್ಟರೂ ಬೇಸೂರು ಕೊಡೆವು, ಪಾದಯಾತ್ರೆ ಅಭೂತಪೂರ್ವ ಯಶಸ್ಸು! ಯಾರೆಲ್ಲಾ ಭಾಗವಹಿಸಿದ್ದರು?
ವಂಚಕರ ಮಾತನ್ನು ನಂಬಿದ ಟೈಲರ್, ಕುಟುಂಬದ ಸದಸ್ಯರು, ಹಂತ ಹಂತವಾಗಿ ದೊಡ್ಡ ಮೊತ್ತದ ಹಣ ವರ್ಗಾಯಿಸಿದ್ದಾರೆ. ಹೂಡಿಕೆ ಮಾಡಿದ ವ್ಯಕ್ತಿ, ಅವರ ತಮ್ಮ, ತಂದೆ ಹಾಗೂ ತಾಯಿಯ ಒಟ್ಟು 11 ಬ್ಯಾಂಕ್ ಖಾತೆಗಳನ್ನು ಬಳಸಿ 33,14,600 ರೂ ಹಣವನ್ನು ಅಪರಿಚಿತರ ಬ್ಯಾಂಕ್ ಖಾತೆಗಳಿಗೆ ವರ್ಗಾವಣೆ ಮಾಡಿದ್ದಾರೆ. ಹಣ ಪಡೆದ ಬಳಿಕ ಯಾವುದೇ ಲಾಭಾಂಶ ನೀಡಿಲ್ಲ. ಪುನಃ ಹಣ ಹೂಡಿಕೆ ಮಾಡುವಂತೆ ಕೇಳಿದಾಗ ಕುಟುಂಬ ಸದಸ್ಯರಿಗೆ ಆನ್‌ಲೈನ್ ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ. ತಕ್ಷಣ ಶಿವಮೊಗ್ಗದ ಸೈಬರ್‌ಕ್ರೈಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಪ್ರಕರಣ ದಾಖಲಾಗಿದೆ.















