ಶಿವಮೊಗ್ಗ : ನಗರದ ದೊಡ್ಡಪೇಟೆ ಪೊಲೀಸ್ ಠಾಣಾ ಆವರಣದಲ್ಲಿ ಸಾರ್ವಜನಿಕರಿಗಾಗಿ ನಿರ್ಮಿಸಿರುವ ಸಂದರ್ಶಕರ ಕೊಠಡಿಯನ್ನು ಜಿಲ್ಲಾ ಪೊಲೀಸ್ ಅಧೀಕ್ಷಕರಾದ ನಿಖಿಲ್ ಬಿ. ಅವರು ಉದ್ಘಾಟಿಸಿದರು.
ಇದೇ ಸಂದರ್ಭದಲ್ಲಿ ಸಿಇಐಆರ್ ಪೋರ್ಟಲ್ ಬಳಸಿ ಪತ್ತೆಮಾಡಲಾದ 100 ಮೊಬೈಲ್ ಫೋನ್‍ಗಳನ್ನು ದೊಡ್ಡಪೇಟೆ ಪೊಲೀಸ್ ಠಾಣಾ ಆವರಣದಲ್ಲಿಯೇ ವಾರಸುದಾರರಿಗೆ ಹಿಂತಿರುಗಿಸಲಾಯಿತು.
ಇದನ್ನೂ ಓದಿ > ಎರಡು ಕಾರುಗಳ ನಡುವೆ ಭೀಕರ ಅಪಘಾತ, ವಾಹನಗಳು ಜಖಂ!
ಈ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಪೊಲೀಸ್ ಅಧೀಕ್ಷಕ ಬಿ.ನಿಖಿಲ್ ಅವರು, ರಾಜ್ಯ ಪೊಲೀಸ್ ಮಹಾನಿರ್ದೇಶಕರ ಆದೇಶದಂತೆ ಸಂದರ್ಶಕರ ಕೊಠಡಿಯನ್ನು ವ್ಯವಸ್ಥಿತವಾಗಿ ನಿರ್ಮಿಸಲಾಗಿದೆ. ಇದರಿಂದ ದೂರುದಾರರಿಗೆ ಅನುಕೂಲವಾಗಲಿದೆ. ಅಲ್ಲದೆ ಜನವರಿ 2026ರಿಂದ ಇದೂವರೆಗೆ ಜಿಲ್ಲೆಯ ವಿವಿಧ ಠಾಣಾ ವ್ಯಾಪ್ತಿಗಳಲ್ಲಿ ಇದುವರೆಗೆ 1000ಕ್ಕೂ ಹೆಚ್ಚು ಮೊಬೈಲ್‍ಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದು, ವಾರಸುದಾರರಿಗೆ ವಿತರಿಸಲಾಗಿದೆ. ದೊಡ್ಡಪೇಟೆ ಠಾಣಾ ವ್ಯಾಪ್ತಿಯಲ್ಲಿ ಸುಮಾರು 100 ಮೊಬೈಲ್‍ಗಳನ್ನು ವಶಪಡಿಸಿಕೊಂಡಿದ್ದು ವಾರಸುದಾರರಿಗೆ ಮೊಬೈಲ್‍ಗಳನ್ನು ನೀಡಲಾಯಿತು.
ಮೊಬೈಲ್ ಕಳೆದುಕೊಂಡ ಸಾರ್ವಜನಿಕರು ಸಿಇಐಆರ್ ಪೋರ್ಟಲ್ ಮೂಲಕ ತಮ್ಮ ಮನೆಯಿಂದಲೇ ದೂರು ದಾಖಲಿಸಬಹುದು. ಅದು ಸಿಕ್ಕಿದಾಗ ಸಂಬಂಧಪಟ್ಟ ಠಾಣೆಯಿಂದಲೇ ಅವರಿಗೆ ಮೇಸೇಜ್ ಬರುತ್ತದೆ. ಇದೊಂದು ದೊಡ್ಡ ಸಾಧನೆಯಾಗಿದೆ. ಸಾವಿರಾರು ಸಾರ್ವಜನಿಕರಿಗೆ ಇದರಿಂದ ಅನುಕೂಲವಾಗಿದೆ ಎಂದರು.
ಈ ಸಂದರ್ಭದಲ್ಲಿ ಪೊಲೀಸ್ ಉಪಾಧೀಕ್ಷಕರಾದ ಗಂಗಾಧರ್, ದೊಡ್ಡಪೇಟೆ ಪೊಲೀಸ್ ಠಾಣೆಯ ಇನ್ಸ್‍ಪೆಕ್ಟರ್ ಸತ್ಯನಾರಾಯಣ್, ಕೋಟೆ ಪಿಐ ಹರೀಶ್ ಕೆ. ಪಾಟೀಲ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮತ್ತು ಸಿಬ್ಬಂದಿಗಳು ಉಪಸ್ಥಿತರಿದ್ದರು.:














