ಶಿವಮೊಗ್ಗ : ಜಿಲ್ಲಾ ಕನ್ನಡ ಸಾಹಿತ್ಯ ಸಾಂಸ್ಕೃತಿಕ ವೇದಿಕೆ ನೇತೃತ್ವದಲ್ಲಿ ಪ್ರತಿ ಹುಣ್ಣಿಮೆಯಂದು ಏರ್ಪಡಿಸುವ ಮನೆ-ಮನ ಸಾಹಿತ್ಯ ಕಾರ್ಯಕ್ರಮದ 251 ನೇ ತಿಂಗಳ ಕಾರ್ಯಕ್ರಮವನ್ನು ಜೂ. 29 ರಂದು ಸೋಮವಾರ ಸಂಜೆ 5:300 ರಿಂದ ಕುವೆಂಪು ರಂಗಮಂದಿರದಲ್ಲಿ ಏರ್ಪಡಿಸಲಾಗಿದೆ ಎಂದು ಡಿ. ಮಂಜುನಾಥ ಸುದ್ದಿ ಗೋಷ್ಠಿಯಲ್ಲಿ ವಿವರಿಸಿದ್ದಾರೆ.
ಶ್ರೀಗಂಧ ಸಂಸ್ಥೆಯ ಅಧ್ಯಕ್ಷ ಹಾಗೂ ಮಾಜಿ ಉಪ ಮುಖ್ಯಮಂತ್ರಿಗಳಾದ ಕೆ. ಎಸ್. ಈಶ್ವರಪ್ಪ ಅವರ ಕುಟುಂಬದ ಆತಿಥ್ಯದಲ್ಲಿ ಈ ಬಾರಿಯ ಸಾಹಿತ್ಯ ಹುಣ್ಣಿಮೆ ನಡೆಯಲಿದೆ. ಅಂದು ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಪ್ರಾಧಾನ ಕಾರ್ಯದರ್ಶಿಗಳಾದ ಶ್ರೀ ಶ್ರೀ ಪ್ರಸನ್ನನಾಥ ಸ್ವಾಮೀಜಿ ಸಾನಿಧ್ಯ ವಹುಸಲಿದ್ದು, ಖ್ಯಾತ ಚಲನಚಿತ್ರ ನಟರ, ರಂಗಕರ್ಮಿ ಸುಚೇಂದ್ರ ಪ್ರಸಾದ್ ಉದ್ಘಾಟಿಸಲಿದ್ದಾರೆ.
ಇದನ್ನೂ ಓದಿ > ವೃದ್ಧೆಯ ಕೊಲೆ, ಸುತ್ತುಕೋಟೆ ವ್ಯಕ್ತಿಗೆ ಜೀವಾವಧಿ ಶಿಕ್ಷೆ!
ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಯುವ ನಾಯಕ ಕೆ.ಇ. ಕಾಂತೇಶ್ ಉಪಸ್ಥಿತರಿರಲಿದ್ದು, ಕನ್ನಡ ಸಾಹಿತ್ಯ ಪರಿಷತ್ತು ಜಿಲ್ಲಾ ಅಧ್ಯಕ್ಷರಾದ ಡಿ. ಮಂಜುನಾಥ ಅಧ್ಯಕ್ಷತೆ ವಹಿಸಲಿದ್ದಾರೆ. ಇದೇ ವೇಳೆ ಕಸಾಪ ಹಿರಿಯ ಸದಸ್ಯರಾದ ಟಿ. ಆರ್. ಅಶ್ವತ್ಥ ನಾರಾಯಣ ಶೆಟ್ಟಿ ಅವರನ್ನು ಸನ್ಮಾನಿಸಲಾಗುತ್ತಿದೆ.
250 ನೇ ತಿಂಗಳ ಸಾಹಿತ್ಯ ಹುಣ್ಣಿಮೆ ಆತಿಥ್ಯ ನೀಡಿದ್ದ ಆಕಾಶ್ ಇನ್ ಮಾಲೀಕರಾದ ಹೊಸತೋಟ ಸೂರ್ಯನಾರಾಯಣ, ಸನ್ ಸ್ಪೆಷಾಲಿಟಿ ಆಸ್ಪತ್ರೆಯ ವ್ಯವಸ್ಥಾಪಕ ನಿರ್ದೇಶಕರಾದ ಡಾ. ಆಕಾಶ್, ಉದ್ಯಮಿಗಳಾದ ಉಮೇಶ್ ಆರಾಧ್ಯ, ಶ್ರೀ ರಾಮಕೃಷ್ಣ ಶಿಕ್ಷಣ ಸಂಸ್ಥೆಗಳ ಕಾರ್ಯದರ್ಶಿಗಳಾದ ಶೋಭಾ ರಾಮಕೃಷ್ಣ ಅತಿಥಿಗಳಾಗಿ ಭಾಗವಹಿಸಲಿದ್ದಾರೆ.
ಇದೇ ವೇಳೆ ಶ್ರೀ ಬನ್ನಂಜೆ ಗೋವಿಂದಾಚಾರ್ಯರ ತಂದೆ ಪಡುಮುನ್ನೂರು ಶ್ರೀ ನಾರಾಯಣ ಆಚಾರ್ಯರ ಜೀವನ ಚರಿತ್ರೆ ಆಧರಿಸಿದ ‘ನನ್ನ ಪಿತಾಮಹ’ ನಾಟಕ ಪ್ರದರ್ಶನ ಗೊಳ್ಳಲಿದೆ. ವೀಣಾ ಬನ್ನಂಜೆರವರ ಕೃತಿ ಆಧಾರಿತ ನಾಟಕದ ಮುಖ್ಯ ಪಾತ್ರ ಮತ್ತು ನಿರ್ದೇಶನವನ್ನು ಚಲನಚಿತ್ರ ನಟರಾದ ಸುಚೇಂದ್ರ ಪ್ರಸಾದ್ ಅಭಿನಯಿಸಲಿದ್ದಾರೆ. ವಿವಿಧ ಚಲನಚಿತ್ರ ಹಾಗೂ ರಂಗಭೂಮಿ ಕಲಾವಿದರು ನಾಟಕದಲ್ಲಿ ನಟಿಸಲಿದ್ದಾರೆ.
ನಗರದ ಬೇರೆ ಬೇರೆ ಬಡಾವಣೆಗಳಿಂದ 250 ಕ್ಕೂ ಹೆಚ್ಚು ಗಾಯಕರು ಭಾವಗೀತೆ, ಭಕ್ತಿಗೀತೆ, ವಚನ, ತತ್ವಪದ, ದಾಸರಪದ, ಜನಪದ ಗೀತೆಗಳನ್ನು ಹಾಡುವ ಕಾರ್ಯಕ್ರಮ ರೂಪಿಸಲಾಗಿದೆ. ಆರಂಭದಲ್ಲಿ ಒಟ್ಟಿಗೆ ನಾಡಗೀತೆ ಹಾಡಿದರೆ, ಆ ನಂತರ ಐವತ್ತು ಗಾಯಕಿಯರ ಒಂದು ತಂಡ ಎರಡು ಗೀತೆಗಳನ್ನು ಹಾಡಲಿದ್ದಾರೆ.ಗಾಯಕಿಯರಾದ ನಳಿನಾಕ್ಷಿ, ಲಲಿತಮ್ಮ ವಿಠಲದಾಸ್, ಲಕ್ಷ್ಮೀ ಮಹೇಶ್, ಸುಶ್ಮಾ, ಡಾ. ನೇತ್ರಾವತಿ, ಸುಶೀಲಾ ಷಣ್ಮುಗಂ, ಕೆ. ಎಸ್. ಮಂಜಪ್ಪ ನಿರ್ದೇಶನದಲ್ಲಿ ನಡೆಯಲಿದೆ.
ನೂರು ಮಕ್ಕಳು ಎರಡು ಕವನಗಳನ್ನು ಹಾಡಲಿದ್ದಾರೆ. ವಿದೂಷಿ ಉಮಾ ದಿಲೀಪ್ ಅವರು ತಾವೇ ರಚಿಸಿದ ಕವನಗಳಿಗೆ ರಾಗಸಂಯೋಜನೆ, ನೃತ್ಯ ಸಂಯೋಜನೆ ಮಾಡಿದ್ದಾರೆ. ಶ್ರೀ ರಾಮಕೃಷ್ಣ ವಿದ್ಯಾಸಂಸ್ಥೆ ನೃತ್ಯ ವಿದ್ಯಾರ್ಥಿಗಳು ಪ್ರದರ್ಶನ ನೀಡಿಲಿದ್ದಾರೆ.
ವಿದೂಷಿ ಪುಷ್ಪಾ ಅವರ ನಿರ್ದೇಶನದಲ್ಲಿ ಜನಪದ ಹಾಡು, ನೃತ್ಯ ಕಾರ್ಯಕ್ರಮವನ್ನು ಪುಷ್ಪಾ ಫರ್ ಫಾರ್ಮಿಂಗ್ ಆರ್ಟ್ಸ್ ಕಲಾವಿದರು ನಡೆಸಿಕೊಡಲಿದ್ದಾರೆ. ಜಿಲ್ಲೆಯ ಹೊಸ ಪ್ರತಿಭೆಗಳಿಗೆ ಅವಕಾಶ ನೀಡುವ ಕಾರಣ ಹೊಸನಗರದ ಬಾಲಕಿ ಆರ್ವಿ, ಶಿಕಾರಿಪುರದ ಸ್ಕಂದ ಡಿ. ಎಸ್., ಶಿವಮೊಗ್ಗದ ನೇಹಾ ರಾಜಪ್ಪ, ಸೊರಬದ ಸಂಗೀತ ಚೌವ್ಹಾಣ್ ಅವರುಗಳು ಒಂದೊಂದು ಹಾಡು ಹೇಳಲಿದ್ದಾರೆ.

ದೂರದರ್ಶನ ಹರಟೆ ಖ್ಯಾತಿಯ ಭದ್ರಾವತಿ ಉಮೇಶ್ ಗೌಡರು ಕನ್ನಡ ಸಾಹಿತಿಗಳ ಬದುಕಿನ ಹಾಸ್ಯ ಪ್ರಸಂಗ ಕುರಿತು ಮಾತನಾಡಲಿದ್ದಾರೆ. ಶಿಕ್ಷಕಿ ಕವಿತಾ ಉಂಬಳೇಬೈಲು ಕಥೆ ಹೇಳುತ್ತಾರೆ. ಕವಿಗಳಾದ ಬಿ. ಟಿ. ಅಂಬಿಕಾ, ಲೀಲಾವತಿ ಯುವರಾಜ್, ಶಂಕರಘಟ್ಟ ಕೆ. ಎನ್. ರಮೇಶ್ ಕವನ ವಾಚಿಸುವರು. ಕವಿಗಳಾದ ಡಾ. ನಿವೇದಿತಾ ಹೆಗಡೆ, ಡಾ. ವಿನಯ ಶ್ರೀನಿವಾಸ್, ಶಶಿಧರ ಅವರು ಹನಿಗವನ ವಾಚಿಸಲಿದ್ದಾರೆ.
ಕಾರ್ಯಕ್ರಮದ ನಂತರ ರಂಗಮಂದಿರದಿಂದ ದೂರದ ಬಡಾವಣೆಗೆ ತೆರಳಲಿರುವ ಗಾಯಕರು, ಕಲಾವಿದರಿಗೆ ನಗರ ಸಾರಿಗೆ ಬಸ್ಸುಗಳ ವ್ಯವಸ್ಥೆ ಮಾಡಲಾಗಿದೆ.
ಶಿವಮೊಗ್ಗ ಜಿಲ್ಲೆಯ ಪ್ರತಿಷ್ಠಿತ ಕಾರ್ಯಕ್ರಮಗಳಲ್ಲಿ ಸಾಹಿತ್ಯ ಹುಣ್ಣಿಮೆಯೂ ಒಂದಾಗಿದೆ. ಕಳೆದ ಇಪ್ಪತ್ತೊಂದು ವರ್ಷ ಪೂರೈಸಿ ಮುಂದು ವರಿಯುತ್ತಿರುವ ಈ ಕಾರ್ಯಕ್ರಮ ಸಾವಿರಾರು ಪ್ರತಿಭೆಗಳಿಗೆ ವೇದಿಕೆಯಾಗಿದೆ. ನಗರದಲ್ಲಿ ಮಾತ್ರವಲ್ಲದೆ ಜಿಲ್ಲೆಯ ಬೇರೆ ಬೇರೆ ತಾಲ್ಲೂಕು ಗಳು, ಗ್ರಾಮಾಂತರ ಸ್ಥಳದಲ್ಲೂ ಆಯೋಜನೆ ಮಾಡಿದ್ದೇವೆ. ಆತಿಥ್ಯ ನೀಡಿದ ಮಹನೀಯರು, ನೆರವಾದ ಸಹೃದಯಿಗಳು, ಭಾಗವಹಿಸಿದ್ದ ಗಾಯಕರು, ಕಥೆಗಾರರು, ಕವಿಗಳು, ಹನಿಗವನ ವಾಚಿಸಿದವರು, ಹಾಸ್ಯ ಕಾರ್ಯಕ್ರಮ ನಡೆಸಿಕೊಟ್ಟ ನಾಡಿನ ಪ್ರಸಿದ್ಧರಿಗೆ, ಹೊಸಬರಿಗೆ, ಹಿರಯರಿಗೆ ಎಲ್ಲರಿಗೂ ಡಿ. ಮಂಜುನಾಥ ಕೃತಜ್ಞತೆ ಸಲ್ಲಿಸಿದರು. ಮುಂದೆಯೂ ಹೆಚ್ಚಿನ ಸಹಕಾರಕೊಡಿ ಆ ಮೂಲಕ ಸಹೃದಯಿ ಸಮಾಜ ಕಟ್ಟೋಣ ಎಂದು ವಿನಂತಿಸಿದರು.
ಸಾಹಿತ್ಯ ಹುಣ್ಣಿಮೆಗೆ ಮೊದಲ ಆತಿಥ್ಯ ನೀಡಿದವರು ಕೆ. ಎಸ್. ಈಶ್ವರಪ್ಪನವರ ಕುಟುಂಬ. ಆ ನಂತರ ಪ್ರಮುಖ ಘಟ್ಟದಲ್ಲಿ ಅದಕ್ಕೆ ಶಕ್ತಿತುಂಬಿ ಜನಾಕರ್ಶಕ ಗೊಳ್ಳುವಂತೆ ಪ್ರೇರಣೆ ನೀಡಿದ್ದನ್ನು ಡಿ. ಮಂಜುನಾಥ ಕೃತಜ್ಞತೆಯಿಂದ ಸ್ಮರಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್.ಈಶ್ವರಪ್ಪ, ಯುವ ನಾಯಕರಾದ ಕೆ.ಈ.ಕಾಂತೇಶ್, ಉಮೇಶ್ ಆರಾಧ್ಯ, ಯು.ಮಧುಸೂದನ್ ಐತಾಳ್, ಶ್ರೀಕಾಂತ್, ಎಂ.ನವೀನ್ ಕುಮಾರ್, ಡಿ.ಗಣೇಶ್ ಉಪಸ್ಥಿತರಿದ್ದರು.














