ಆನಂದಪುರ: ಮದ್ಲೆಸರ ಗ್ರಾಮಕ್ಕೆ ತೆರಳುವ ರಸ್ತೆ ಮಾರ್ಗದಲ್ಲಿ ಇಂದು ವಿದ್ಯುತ್ ಅವಘಡ ಸಂಭವಿಸಿದ್ದು, 11 ಕೆ.ವಿ. ವಿದ್ಯುತ್ ಲೈನ್ ಕಂಬದಲ್ಲಿ ವಿದ್ಯುತ್ ಪ್ರವಹಿಸಿ, ಅದನ್ನು ಸ್ಪರ್ಶಿಸಿದ ಮೂರು ಜಾನುವಾರುಗಳು ಸ್ಥಳದಲ್ಲೇ ಸಾವು ಕಂಡಿರುವ ಘಟನೆ ನಡೆದಿದೆ.
ಇದನ್ನೂ ಓದಿ > ಹಾಲಿನ ಬಾಟಲ್ ಇಟ್ಟು, ನವಜಾತ ಶಿಶುವನ್ನು ಚೀಲದಲ್ಲಿ ಬಿಟ್ಟ ಹೋದ ಹೆತ್ತವರು!
ಮದ್ಲೆಸರ ರಸ್ತೆಯ ಬದಿಯಲ್ಲಿ ಹಾದುಹೋಗುವ 11 ಕೆ.ವಿ. ವಿದ್ಯುತ್ ಸಂಪರ್ಕದ ಕಂಬದ ಮೇಲ್ಭಾಗದಲ್ಲಿ ಅಳವಡಿಸಲಾಗಿದ್ದ ಇನ್ಸುಲೇಟರ್, ಹೆಚ್ಚಿನ ವಿದ್ಯುತ್ ಪ್ರಸಾರದಿಂದಾಗಿ ಸಂಪೂರ್ಣ ಕರಗಿ ಹೋಗಿದೆ. ಇದರಿಂದಾಗಿ ನೇರ ವಿದ್ಯುತ್ ತಂತಿಯು ಕಬ್ಬಿಣದ ಕಂಬಕ್ಕೆ ತಾಗಿ ಇಡೀ ಕಂಬದಲ್ಲೇ ಭಾರಿ ಪ್ರಮಾಣದ ವಿದ್ಯುತ್ ಸಂಚಾರವಾಗಿದೆ. ಈ ವೇಳೆ ಕಂಬದ ಸಮೀಪ ಮೇಯುತ್ತಿದ್ದ ಜಾನುವಾರುಗಳು ಕಂಬವನ್ನು ಸ್ಪರ್ಶಿಸುತ್ತಿದ್ದಂತೆಯೇ ವಿದ್ಯುತ್ ಆಘಾತಕ್ಕೊಳಗಾಗಿ ಸ್ಥಳದಲ್ಲೇ ಒದ್ದಾಡಿ ಪ್ರಾಣಬಿಟ್ಟಿವೆ.
ಇದೇ ಸಮಯದಲ್ಲಿ ಮದ್ಲೆಸರ ರಸ್ತೆ ಮಾರ್ಗವಾಗಿ ಬೈಕ್‌ನಲ್ಲಿ ಬರುತ್ತಿದ್ದ ಸವಾರರು, ಹಸುಗಳು ವಿದ್ಯುತ್ ಸ್ಪರ್ಶದಿಂದ ಒದ್ದಾಡುತ್ತಿರುವುದನ್ನು ದೂರದಿಂದಲೇ ಗಮನಿಸಿದ್ದಾರೆ. ಅಪಾಯದ ಮುನ್ಸೂಚನೆ ಅರಿತ ಅವರು ತಕ್ಷಣವೇ ತಮ್ಮ ಬೈಕನ್ನು ದೂರದಲ್ಲೇ ನಿಲ್ಲಿಸಿದ್ದರಿಂದ ಭಾರಿ ಅನಾಹುತವೊಂದು ತಪ್ಪಿದಂತಾಗಿದೆ.
ಇದನ್ನೂ ಓದಿ > ಪಡಿತರ ಚೀಟಿದಾರರಿಗೆ ಮಾಹಿತಿ, ಕ್ಯಾಸ್ಟ್ ಮ್ಯಾಪಿಂಗ್‌ಗೆ ಸೂಚನೆ
ಜಾನುವಾರುಗಳು ವಿದ್ಯುತ್ ಸ್ಪರ್ಶದಿಂದ ಒದ್ದಾಡುವುದನ್ನು ಕಂಡ ಸ್ಥಳೀಯರು ತಕ್ಷಣವೇ ಜಾಗೃತರಾಗಿ ಮೆಸ್ಕಾಂ ಇಲಾಖೆಯ ಅಧಿಕಾರಿಗಳಿಗೆ ದೂರವಾಣಿ ಕರೆ ಮಾಡಿ ಲೈನ್ ಕಡಿತಗೊಳಿಸುವಂತೆ ತಿಳಿಸಿದರು. ಕರೆಗೆ ಸ್ಪಂದಿಸಿದ ಸಿಬ್ಬಂದಿ ತಕ್ಷಣವೇ ವಿದ್ಯುತ್ ಸಂಪರ್ಕ ಕಡಿತಗೊಳಿಸಿದ್ದರಿಂದ, ಕಂಬದ ಸಮೀಪದಲ್ಲೇ ಇದ್ದ ಇನ್ನು ಮೂರು ಜಾನುವಾರುಗಳನ್ನು ಸ್ಥಳೀಯರು ಯಶಸ್ವಿಯಾಗಿ ರಕ್ಷಿಸಿದ್ದಾರೆ.
ಇದನ್ನೂ ಓದಿ > ನ್ಯಾಷನಲ್ ಗೋಲ್ಡ್ & ಡೈಮಂಡ್‌ಗೆ 18ರ ಸಂಭ್ರಮ, 70 ಲಕ್ಷದ ಬಹುಮಾನ ಗೆಲ್ಲುವ ಅವಕಾಶ!















