ಶಿವಮೊಗ್ಗ: ವಿದ್ಯಾರ್ಥಿಗಳ ಸಮಸ್ಯೆಗಳನ್ನು ಬಗೆಹರಿಸುವಂತೆ ಹಲವು ಬಾರಿ ಮನವಿ ಮಾಡಿದರು ಸಹ ಕುವೆಂಪು ವಿಶ್ವವಿದ್ಯಾಲಯದಲ್ಲಿ ನಿರಂತರವಾಗಿ ನಡೆಯುತ್ತಿರುವ ವಿದ್ಯಾರ್ಥಿ ವಿರೋಧಿ ಧೋರಣೆ ಹಾಗೂ ಆಡಳಿತಾತ್ಮಕ ವೈಫಲ್ಯಗಳನ್ನು ಖಂಡಿಸಿ ಇಂದು ಬೆಳಗ್ಗೆ ಎನ್.ಎಸ್.ಯು.ಐ ಕಾರ್ಯಕರ್ತರು ಬೃಹತ್ ಪ್ರತಿಭಟನೆ ನಡೆಸಿದರು.
ವಿದ್ಯಾರ್ಥಿಗಳ ಪ್ರತಿಭಟನೆಯು ತೀವ್ರ ಸ್ವರೂಪ ಪಡೆದಿದ್ದು, ಕುಲಪತಿಗಳಾದ ಶರತ್ ಅನಂತಮೂರ್ತಿ ಅವರ ಕಚೇರಿಗೆ ಮುತ್ತಿಗೆ ಹಾಕಿದ ಕಾರ್ಯಕರ್ತರು, ಕಚೇರಿಯ ನಾಮಫಲಕಗಳಿಗೆ ಮಸಿ ಬಳಿದು, ಪೀಠೋಪಕರಣ, ಪಾಟ್‌ಗಳನ್ನು ಹೊಡೆದು ಹಾಕುವ ಮೂಲಕ ಆಕ್ರೋಶ ವ್ಯಕ್ತಪಡಿಸಿದರು.
ಕುವೆಂಪು ವಿಶ್ವವಿದ್ಯಾಲಯದಲ್ಲಿ ಇತ್ತೀಚೆಗೆ ನಿರಂತರವಾಗಿ ವಿದ್ಯಾರ್ಥಿ ವಿರೋಧಿ ನಡೆ ಅನುಸರಿಸುತ್ತಿದ್ದು, ವಿದ್ಯಾರ್ಥಿಗಳ ಭವಿಷ್ಯದ ಜೊತೆಗೆ ಚೆಲ್ಲಾಟವಾಡುತ್ತಿರುವ ವಿಶ್ವವಿದ್ಯಾಲಯದ ನಡೆಯನ್ನು ಶಿವಮೊಗ್ಗ ಜಿಲ್ಲಾ ಎನ್.ಎಸ್.ಯು.ಐ. ಖಂಡಿಸಿತು.
ಇದನ್ನೂ ಓದಿ > ಶಿವಮೊಗ್ಗ, ಪಿಯುಸಿ ಟಾಪರ‍್ಸ್‌ಗೆ ಸದ್ಭಾವನ ಟ್ರಸ್ಟ್‌ನಿಂದ ಅಭಿನಂದನೆ
ಕಳೆದ ಐದು ತಿಂಗಳ ಹಿಂದೆ ನಡೆದ 1, 3 ಮತ್ತು 5ನೇ ಸೆಮಿಸ್ಟರ್ ಪರೀಕ್ಷೆಗಳ ಫಲಿತಾಂಶ ಪ್ರಕಟಿಸದಿರುವುದು ಮತ್ತು ಕಳೆದ ಮೂರು ವರ್ಷಗಳಿಂದ ಪದವಿ ಅಂಕಪಟ್ಟಿಗಳನ್ನು ವಿತರಿಸದಿರುವುದು ವಿದ್ಯಾರ್ಥಿಗಳ ಆತಂಕಕ್ಕೆ ಕಾರಣವಾಗಿದೆ. ಅಂಕಪಟ್ಟಿ ಇಲ್ಲದೆ ಪದವೀಧರರು ಉನ್ನತ ವ್ಯಾಸಂಗಕ್ಕೆ ಹಾಗೂ ಉದ್ಯೋಗಕ್ಕೆ ಸೇರಲು ಪರದಾಡುವಂತಾಗಿದೆ. ಈ ಬಗ್ಗೆ ಹಲವು ಬಾರಿ ಮನವಿ ಮಾಡಿದರೂ ಕುಲಪತಿಗಳು ಸ್ಪಂದಿಸದೆ, ಕೇವಲ ಅಧಿಕಾರಿಗಳ ಆಂತರಿಕ ಕಚ್ಚಾಟದಲ್ಲಿ ಕಾಲಹರಣ ಮಾಡುತ್ತಿದ್ದಾರೆ ಎಂದು ಪ್ರತಿಭಟನಾಕಾರರು ಗಂಭೀರವಾಗಿ ಆರೋಪಿಸಿದರು.
ಇದನ್ನೂ ಓದಿ > ಶಿವಮೊಗ್ಗ, ಡ್ರೋಣ್ ಹಾರಿಸಿ 19 ಜನರ ವಿರುದ್ಧ ಎಫ್ಐಆರ್ ದಾಖಲಿಸಿದ ಪೊಲೀಸರು
ವಿಶ್ವವಿದ್ಯಾಲಯವು ಏಕಾಏಕಿ ಪರೀಕ್ಷಾ ಶುಲ್ಕ ಹಾಗೂ ಪ್ರವೇಶ ಶುಲ್ಕವನ್ನು ಸಾವಿರಾರು ರೂಪಾಯಿಗಳಷ್ಟು ಹೆಚ್ಚಿಸಿರುವುದು ಬಡ ಹಾಗೂ ಮಧ್ಯಮ ವರ್ಗದ ವಿದ್ಯಾರ್ಥಿಗಳ ಪಾಲಿಗೆ ಮರಣಶಾಸನವಾಗಿದೆ. ಇದರ ಜೊತೆಗೆ ಡಿಜಿಟಲ್ ಮೌಲ್ಯಮಾಪನದಲ್ಲಿನ ತಾಂತ್ರಿಕ ಲೋಪಗಳಿಂದಾಗಿ ಫಲಿತಾಂಶಗಳಲ್ಲಿ ಗೊಂದಲ ಏರ್ಪಟ್ಟಿದ್ದು, ಪಾಸ್ ಆದವರು ಫೇಲ್ ಎಂದು ತೋರಿಸುತ್ತಿರುವುದು ವಿದ್ಯಾರ್ಥಿಗಳ ನಿದ್ದೆ ಗೆಡಿಸಿದೆ. ಈ ಅವ್ಯವಸ್ಥೆಯನ್ನು ಸರಿಪಡಿಸಲು ವಿಫಲರಾಗಿರುವ ಕುಲಪತಿಗಳನ್ನು ಕೂಡಲೇ ವಜಾಗೊಳಿಸಬೇಕೆಂದು ಆಗ್ರಹಿಸಲಾಯಿತು.
ಈ ಸಂದರ್ಭದಲ್ಲಿ ಜಿಲ್ಲಾಧ್ಯಕ್ಷ ವಿಜಯ್, ಕಾರ್ಯಧ್ಯಕ್ಷ ರವಿ ಕಟಿಕೆರೆ, ನಗರಾಧ್ಯಕ್ಷ ರವಿ, ನಗರ ಉಪಾಧ್ಯಕ್ಷ ಆದಿತ್ಯ, ಸುಭಾನ್, ಪ್ರಧಾನ ಕಾರ್ಯದರ್ಶಿಗಳಾದ ಚಂದ್ರೋಜಿ ರಾವ್, ವರುಣ್ ವಿ ಪಂಡಿತ್ ಸೇರಿದಂತೆ ನೂರಾರು ಕಾರ್ಯಕರ್ತರು ಈ ಹೋರಾಟದಲ್ಲಿ ಪಾಲ್ಗೊಂಡಿದರು.














