ಭದ್ರಾವತಿ: ಭದ್ರಾವತಿಯಲ್ಲಿ ರೌಡಿಶೀಟರ್ ಒಬ್ಬಾತ ಪೊಲೀಸರಿಂದ ತಪ್ಪಿಸಿಕೊಳ್ಳಲು ದುರ್ಯೋಧನನ ಹಾದಿ ಹಿಡಿದಿದ್ದ. ಆದರೆ ನೀರಿನ ಅಡಿ ಅಡಗಿ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಬಹುದು ಎಂಬ ಆತನ ಲೆಕ್ಕಾಚಾರ ಉಲ್ಟಾ ಆಗಿದೆ.
ಭದ್ರಾವತಿಯ ರೌಡಿಶೀಟರ್ ದಿಲೀಪ್ ಅಲಿಯಾಸ್ ಕರಿಯಾ ಪೊಲೀಸರಿಂದ ತಪ್ಪಿಸಿಕೊಳ್ಳಲು ಹಳ್ಳದ ನೀರಿನಲ್ಲಿ ಅಡಿ ಅಡಗಿದ್ದ. ಈತನ ವಿರುದ್ಧ ಕಳ್ಳತನ, ಕೊಲೆ ಯತ್ನ ಸೇರಿ 16 ಪ್ರಕರಣಗಳಿವೆ. ಪ್ರಕರಣ ಒಂದರಲ್ಲಿ ಈತನ ವಿರುದ್ಧ ನ್ಯಾಯಾಲಯದಿಂದ ಮೂರು ಬಾರಿ ವಾರಂಟ್ ಜಾರಿಯಾಗಿತ್ತು. ಹೀಗಾಗಿ ಇಂದು ಅತನನ್ನು ಬಂಧಿಸಲು ನ್ಯೂ ಟೌನ್ ಪೊಲೀಸ್ ಠಾಣೆಯ ಸಿಬ್ಬಂದಿ ತೆರಳಿದ್ದರು.
ಇದನ್ನೂ ಓದಿ > > ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ
ಪೊಲೀಸರ ಬರುವಿಕೆ ತಿಳಿದು ದಿಲೀಪ್ ಪರಾರಿಯಾಗಿದ್ದ. ಭಂಡಾರಹಳ್ಳಿಯ ಹಳ್ಳದ ಬಳಿ ಈತ ಇರುವ ಕುರಿತು ಪೊಲೀಸರಿಗೆ ಮಾಹಿತಿ ಸಿಕ್ಕಿದ್ದರಿಂದ ಅಲ್ಲಿಗೆ ತೆರಳಿದರು. ಆದರೆ ಅಲ್ಲೆಲ್ಲು ರೌಡಿ ಶೀಟರ್ ದಿಲೀಪ್ ಕಾಣಿಸಲಿಲ್ಲ. ಹಾಗಾಗಿ ಆತನಿಗಾಗಿ ಹುಡುಕಾಟ ನಡೆಸಿದರು. ಈ ಸಂದರ್ಭ ಹಳ್ಳದಲ್ಲಿ ಕಳೆ ಸರಿದಿರುವುದು ಪೊಲೀಸರ ಗಮನಕ್ಕೆ ಬಂದಿತ್ತು. ಕೂಡಲೆ ಹಳ್ಳಕ್ಕೆ ಇಳಿದ ನ್ಯೂಟ್ ಟೌನ್ ಠಾಣೆ ಸಬ್ ಇನ್ಸ್ಪೆಕ್ಟರ್ ರಮೇಶ್ ಮತ್ತು ಸಿಬ್ಬಂದಿ ಪ್ರಸನ್ನ ಹುಡುಕಾಟ ನಡೆಸಿದರು.
ಈ ಸಂದರ್ಭ ನೀರಿನ ಅಡಿಯಿಂದ ಗುಳ್ಳೆ ಬರುವುದನ್ನು ಗಮನಿಸಿದ ಪೊಲೀಸರು ಸುತ್ತುವರೆದು, ರೌಡಿ ಶೀಟರ್ ದಿಲೀಪ್ ಅಲಿಯಾಸ್ ಕರಿಯಾನನ್ನು ಹಿಡಿದಿದ್ದಾರೆ. ನ್ಯೂ ಟೌನ್ ಠಾಣೆ ಪೊಲೀಸರ ಕಾರ್ಯಕ್ಕೆ ಜನ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ > >ಬ್ರೇಕ್ ಫೇಲ್, ರಿವರ್ಸ್ ಚಲಿಸಿದ ಬಸ್, 4 ಕಾರು 1 ಬೈಕ್ ಜಖಂ!













