ಶಿವಮೊಗ್ಗ: ಆಶ್ರಯ ಯೋಜನೆಯಡಿ ಬಡವರಿಗೆ ಮನೆಗಳನ್ನು ಸಮರ್ಪಕವಾಗಿ ಹಂಚಿಕೆ ಮಾಡಿಲ್ಲ ಹಾಗೂ ಮನೆಗಳ ವಿತರಣೆಯಲ್ಲಿ ವಿಳಂಬವಾಗುತ್ತಿದೆ ಎಂದು ಆರೋಪಿಸಿ, ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ ಮತ್ತು ಅವರ ಪುತ್ರ ಕಾಂತೇಶ್ ನೇತೃತ್ವದಲ್ಲಿ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಶಿವಮೊಗ್ಗ ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿ ಪ್ರತಿಭಟನೆ ನಡೆಸಿದರು.
ನಗರದ ರಾಮಣ್ಣ ಶ್ರೇಷ್ಠಿ ಪಾರ್ಕ್‌ನಿಂದ ಮಹಾನಗರ ಪಾಲಿಕೆಯವರೆಗೆ ಪಾದಯಾತ್ರೆ ನಡೆಸಿದ ಪ್ರತಿಭಟನಾಕಾರರು, ಆಶ್ರಯ ಯೋಜನೆಯಡಿ ನಿರ್ಮಿಸಲಾಗುತ್ತಿರುವ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ಶೀಘ್ರವಾಗಿ ಹಂಚಿಕೆ ಮಾಡಬೇಕು ಎಂದು ಒತ್ತಾಯಿಸಿದರು. ಬಳಿಕ ಪಾಲಿಕೆ ಆಯುಕ್ತ ಮಾಯಣ್ಣಗೌಡ ಅವರನ್ನು ಪ್ರತಿಭಟನಾ ಸ್ಥಳಕ್ಕೆ ಕರೆಸಿ, ಮನೆಗಳ ಹಂಚಿಕೆ ವಿಳಂಬದ ಕುರಿತು ಪ್ರಶ್ನಿಸಿದರು.
ಇದನ್ನೂ ಓದಿ > > ಶಿವಮೊಗ್ಗ, 72 ದ್ವಿಚಕ್ರ ವಾಹನಗಳು ವಶಕ್ಕೆ, ಮಾಲೀಕರಿಗೆ ದಂಡ, ಪೊಲೀಸರ ಎಚ್ಚರಿಕೆ!, ಕಾರಣವೇನು?
6 ಸಾವಿರ ಮನೆಗಳಲ್ಲಿ 450 ಮಾತ್ರ ಹಂಚಿಕೆ?
ಆಶ್ರಯ ಯೋಜನೆಯಡಿ ಒಟ್ಟು 6,000 ಮನೆಗಳಿದ್ದು, ಈ ಪೈಕಿ ಕೇವಲ 450 ಮನೆಗಳನ್ನು ಮಾತ್ರ ಹಂಚಿಕೆ ಮಾಡಲಾಗಿದೆ. ಉಳಿದ ಮನೆಗಳನ್ನು ಅರ್ಹ ಫಲಾನುಭವಿಗಳಿಗೆ ವಿತರಿಸಲು ವಿಳಂಬವಾಗುತ್ತಿರುವುದಕ್ಕೆ ಕಾರಣವೇನು ಎಂದು ರಾಷ್ಟ್ರಭಕ್ತರ ಬಳಗದ ಸದಸ್ಯರು ಪ್ರಶ್ನಿಸಿದರು.
ಬಡವರಿಗೆ ಸೂರು ಕಲ್ಪಿಸುವ ಉದ್ದೇಶದಿಂದ ರೂಪಿಸಿರುವ ಯೋಜನೆಯ ಮನೆಗಳು ಅರ್ಹ ಫಲಾನುಭವಿಗಳಿಗೆ ತಲುಪಬೇಕು. ಆದರೆ, ಮನೆಗಳ ಹಂಚಿಕೆ ನಿರೀಕ್ಷಿತ ವೇಗದಲ್ಲಿ ನಡೆಯುತ್ತಿಲ್ಲ. ಹೀಗಾಗಿ ಬಾಕಿ ಉಳಿದಿರುವ ಮನೆಗಳ ಹಂಚಿಕೆಗೆ ಸ್ಪಷ್ಟ ಕಾಲಮಿತಿ ನಿಗದಿಪಡಿಸಬೇಕು ಎಂದು ಪ್ರತಿಭಟನಾಕಾರರು ಆಗ್ರಹಿಸಿದರು.
ಇದಕ್ಕೆ ಪ್ರತಿಕ್ರಿಯಿಸಿದ ಪಾಲಿಕೆ ಆಯುಕ್ತ ಮಾಯಣ್ಣಗೌಡ, ಕೆಲವು ಫಲಾನುಭವಿಗಳು ಹಣ ಪಾವತಿಸಿಲ್ಲ. ಅಲ್ಲದೆ, ಗುತ್ತಿಗೆದಾರರಿಗೆ ಪಾವತಿಸಬೇಕಾದ ಹಣವೂ ಬಾಕಿ ಉಳಿದಿದೆ ಎಂದು ತಿಳಿಸಿದರು. ಬಾಕಿ ಹಣ ಪಾವತಿಸಿ ಮನೆಗಳ ನಿರ್ಮಾಣ ಹಾಗೂ ಹಂಚಿಕೆ ಪ್ರಕ್ರಿಯೆಯನ್ನು ಮುಂದುವರಿಸಲಾಗುವುದು. ಜನವರಿಯಲ್ಲಿ ಹಾಗೂ ಮುಂದಿನ ಆರು ತಿಂಗಳ ಅವಧಿಯಲ್ಲಿ ಉಳಿದ 1,200 ಮನೆಗಳನ್ನು ಹಂಚಿಕೆ ಮಾಡಲು ಕ್ರಮ ಕೈಗೊಳ್ಳಲಾಗುವುದು. ಮನೆಗಳ ನಿರ್ಮಾಣ ಕಾಮಗಾರಿ ಈಗಾಗಲೇ ಆರಂಭವಾಗಿದೆ ಎಂದರು.
ಇದನ್ನೂ ಓದಿ > >ಬಟ್ಟೆ ಇಸ್ತ್ರಿ ಮಾಡುವಾಗ ವಿದ್ಯುತ್ ಆಘಾತ, ಬಾಲಕ ಸಾವು!
ನವೆಂಬರ್ 15ರಂದು ಮತ್ತೆ ಸಭೆ
ಆಯುಕ್ತರ ಉತ್ತರದಿಂದ ಸಮಾಧಾನಗೊಳ್ಳದ ರಾಷ್ಟ್ರಭಕ್ತರ ಬಳಗದ ಸದಸ್ಯರು, ಮನೆಗಳ ಹಂಚಿಕೆಗೆ ಸಂಬಂಧಿಸಿದಂತೆ ಅಧಿಕಾರಿಗಳು ಸ್ಪಷ್ಟ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು.
ಮನೆಗಳ ನಿರ್ಮಾಣ ಕಾಮಗಾರಿ ಆರಂಭವಾಗಿದೆ ಎಂದು ಆಯುಕ್ತರು ಹೇಳುತ್ತಿದ್ದರೆ, ಮತ್ತೊಂದೆಡೆ ಸಚಿವ ಮಧು ಬಂಗಾರಪ್ಪ ಅವರು ಗುತ್ತಿಗೆದಾರರು ಓಡಿಹೋಗಿದ್ದಾರೆ ಎಂದು ಹೇಳಿರುವುದಾಗಿ ಪ್ರತಿಭಟನಾಕಾರರು ಉಲ್ಲೇಖಿಸಿದರು. ಹೀಗಾಗಿ ಗೋವಿಂದಾಪುರ ಮತ್ತು ಗೋಪಿಶೆಟ್ಟಿಕೊಪ್ಪ ಪ್ರದೇಶಗಳಲ್ಲಿ ಮನೆಗಳ ನಿರ್ಮಾಣ ಕಾಮಗಾರಿ ನಿಜವಾಗಿಯೂ ಆರಂಭವಾಗಿದೆಯೇ ಎಂಬುದನ್ನು ಪರಿಶೀಲಿಸುವ ಅಗತ್ಯವಿದೆ ಎಂದು ಹೇಳಿದರು.
ದೀಪಾವಳಿ ಹಬ್ಬದ ಬಳಿಕ ನವೆಂಬರ್ 15ರಂದು ತಮ್ಮ ಮನೆಯಲ್ಲಿ ಸಭೆ ನಡೆಸಿ, ನಂತರ ಸಂಬಂಧಿಸಿದ ಪ್ರದೇಶಗಳಿಗೆ ತೆರಳಿ ಕಾಮಗಾರಿಯ ಪ್ರಗತಿಯನ್ನು ಪರಿಶೀಲಿಸುವುದಾಗಿ ತಿಳಿಸಿದರು. ಅಂದು ಪಾಲಿಕೆ ಆಯುಕ್ತರು ಮನೆಗಳ ಹಂಚಿಕೆ ಯಾವಾಗ ಪೂರ್ಣಗೊಳ್ಳಲಿದೆ ಎಂಬುದರ ಕುರಿತು ಲಿಖಿತ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಇಂದಿನ ಪಾಲಿಕೆ ಮುತ್ತಿಗೆ ಸಾಂಕೇತಿಕವಾಗಿದ್ದು, ಇದು ಮುಂದಿನ ಹೋರಾಟದ ಆರಂಭ ಮಾತ್ರ ಎಂದು ರಾಷ್ಟ್ರಭಕ್ತರ ಬಳಗದ ಸದಸ್ಯರು ಎಚ್ಚರಿಕೆ ನೀಡಿದರು.
ಈಶ್ವರಪ್ಪ, ಕಾಂತೇಶ್ ಪೊಲೀಸ್ ವಶಕ್ಕೆ
ಪ್ರತಿಭಟನೆಯ ಬಳಿಕ ರಾಷ್ಟ್ರಭಕ್ತರ ಬಳಗದ ಕಾರ್ಯಕರ್ತರು ಮಹಾನಗರ ಪಾಲಿಕೆಗೆ ಮುತ್ತಿಗೆ ಹಾಕಿದರು. ಈ ಸಂದರ್ಭದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ, ಅವರ ಪುತ್ರ ಕಾಂತೇಶ್, ಇ. ವಿಶ್ವಾಸ್ ಸೇರಿದಂತೆ ಹಲವರನ್ನು ಪೊಲೀಸರು ವಶಕ್ಕೆ ಪಡೆದರು.
ಆಶ್ರಯ ಮನೆಗಳ ಹಂಚಿಕೆಯಲ್ಲಿ ಆಗುತ್ತಿರುವ ವಿಳಂಬವನ್ನು ಖಂಡಿಸಿದ ರಾಷ್ಟ್ರಭಕ್ತರ ಬಳಗ, ಅರ್ಹ ಬಡವರಿಗೆ ಮನೆಗಳನ್ನು ಶೀಘ್ರವಾಗಿ ಹಂಚಿಕೆ ಮಾಡಬೇಕು ಹಾಗೂ ಬಾಕಿ ಉಳಿದಿರುವ ಕಾಮಗಾರಿಗಳನ್ನು ನಿಗದಿತ ಕಾಲಮಿತಿಯೊಳಗೆ ಪೂರ್ಣಗೊಳಿಸಬೇಕು ಎಂದು ಒತ್ತಾಯಿಸಿದೆ.













