ಯುವಧ್ವನಿ ನ್ಯೂಸ್ | ಶಿವಮೊಗ್ಗ
ಕೇಂದ್ರ ಬಿಜೆಪಿ ಸರ್ಕಾರ ತನ್ನ ಆಡಳಿತ ವೈಫಲ್ಯಕ್ಕಾಗಿ ಪೆಟ್ರೋಲ್ ಮತ್ತು ಡೀಸೆಲ್ ದರಗಳನ್ನು ತಲಾ 3 ರೂ. ಏರಿಕೆ ಮಾಡುವ ಮೂಲಕ ದೇಶದ ಜನಸಾಮಾನ್ಯರ ಬದುಕಿನ ಮೇಲೆ ಬರೆ ಎಳೆದಿದೆ ಎಂದು ಪತ್ರಿಕಾ ಪ್ರಕಟಣೆಯಲ್ಲಿ ಪಂಚ ಗ್ಯಾರಂಟಿ ಪ್ರಾಧಿಕಾರ ಸದಸ್ಯ ಎಸ್.ಕುಮರೇಶ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಇದು ಬೆಲೆ ಏರಿಕೆಯಲ್ಲ, ಭಾರತದ ಸಾಮಾನ್ಯ ಜನರ ದೈನಂದಿನ ಬದುಕಿನ ಮೇಲೆ ನಡೆಸಿದ ಜನವಿರೋಧಿ ನೀತಿ ಕೇಂದ್ರ ಸರ್ಕಾರವು ತನ್ನ ವಿದೇಶಾಂಗ ನೀತಿಯ ವೈಫಲ್ಯ, ಕಳಪೆ ಆರ್ಥಿಕ ನಿರ್ವಹಣೆ ಮತ್ತು ಅಜಾಗರೂಕ ಹಣದುಬ್ಬರದ ನಿರ್ವಹಣೆಯ ಪರಿಣಾಮಗಳನ್ನು ಬಲವಂತವಾಗಿ ದೇಶದ ಜನತೆಯ ತಲೆಯ ಮೇಲೆ ಹೇರುತ್ತಿದೆ. ದೇಶದ ಜನತೆಯ ಹಿತಾಸಕ್ತಿಗಳನ್ನು ಕಾಪಾಡುವ ಬದಲು ಅವರಿಂದಲೇ ಹಣ ಕಿತ್ತುಕೊಂಡು ತನ್ನ ವೈಫಲ್ಯದ ನಷ್ಟ ಭರಿಸುತ್ತಿದೆ.
ಪೆಟ್ರೋಲ್ ದರ ಲೀ. ಒಂದಕ್ಕೆ 107 ರೂ. ದಾಟಿದೆ. ಡೀಸೆಲ್ ದರವು 94 ರೂ. ಆಗಿದೆ. ಈ ಏರಿಕೆಯು ಕೇವಲ ಬಂಕ್‍ಗಳಿಗೆ ಸೀಮಿತಗೊಳ್ಳುವುದಿಲ್ಲ. ಇದರೊಂದಿಗೆ ಸಾರ್ವಜನಿಕ ಸಾರಿಗೆ ವೆಚ್ಚ, ತರಕಾರಿ, ಹಣ್ಣು, ಹಾಲು, ಸೇರಿದಂತೆ ಪ್ರತಿಯೊಂದು ದಿನಬಳಕೆ ವಸ್ತುಗಳ ದರ ಏರಿಕೆಯಾಗುತ್ತದೆ. ಇದರಿಂದ ಕಾರ್ಮಿಕರು, ರೈತರು, ಸಣ್ಣ ವ್ಯಾಪಾರಿಗಳು, ಮನೆಯ ಜವಾಬ್ದಾರಿ ಹೊತ್ತ ಮಹಿಳೆಯರು ಹಾಗೂ ಮಧ್ಯಮ ವರ್ಗದವರು ದೈನಂದಿನ ಬದುಕು ನಡೆಸುವುದು ಮತ್ತಷ್ಟು ದುಸ್ತರವಾಗಲಿದೆ ಎಂದಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಬಿಜೆಪಿ ಸರ್ಕಾರವು ಹಣದುಬ್ಬರ ನಿಯಂತ್ರಣ ಮಾಡುವಲ್ಲಿ, ಡಾಲರ್ ಎದುರು ರೂಪಾಯಿ ಮೌಲ್ಯದ ಕುಸಿತವನ್ನು ತಡೆಯುವಲ್ಲಿ, ದೇಶದ ಆರ್ಥಿಕ ನಿರ್ವಹಣೆಯಲ್ಲಿ ಹಾಗೂ ಒಟ್ಟಾರೆ ಸಾಮಾನ್ಯ ಜನರ ಹಿತ ಕಾಪಾಡುವಲ್ಲಿ ಸಂಪೂರ್ಣ ವಿಫಲವಾಗಿದೆ. ನರೇಂದ್ರ ಮೋದಿ ತನ್ನ ಉದ್ಯಮಿ ಮಿತ್ರರ ರಕ್ಷಣೆಗೆ ತೋರುವ ಆತುರ, ಕಾಳಜಿ ಹಾಗೂ ಬದ್ಧತೆಯಲ್ಲಿ ಸ್ವಲ್ಪವಾದರೂ ದೇಶದ ಜನತೆಯ ಮೇಲೆ ತೋರಿಸಲಿ ಎಂದಿದ್ದಾರೆ.















