ಸಾಗರ : ಪಟ್ಟಣದ ಜೆ.ಪಿ.ನಗರದಲ್ಲಿ ನಡೆದ ಪರಶುರಾಮ ಎಂಬ ವ್ಯಕ್ತಿಯ ಸಾವು ಆತ್ಮಹತ್ಯೆಯಲ್ಲ, ಕೊಲೆ ಎಂದು ಸಾಬೀತಾದ ಹಿನ್ನೆಲೆಯಲ್ಲಿ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಸೋಮವಾರ ಸ್ಥಳಕ್ಕೆ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಆಗಮಿಸಿ ಸ್ಥಳ ಪರಿಶೀಲನೆ ಸಹ ನಡೆಸಿದ್ದಾರೆ.
ಜೆ.ಪಿ.ನಗರದ ಪರಶುರಾಮ್ ಎಂಬುವವರು ಮೇ 15ರಂದು ಮೃತಪಟ್ಟಿದ್ದರು. ಈ ಸಂಬಂಧ ಆತ್ಮಹತ್ಯೆ ಎಂದು ಪ್ರಕರಣ ದಾಖಲಾಗಿತ್ತು. ಆದರೆ ಪರಶುರಾಮ್ ಅವರದ್ದು ಆತ್ಮಹತ್ಯೆಯಲ್ಲ, ಅದೊಂದು ಕೊಲೆ ಎಂದು ಸ್ಥಳೀಯವಾಗಿ ತೀವ್ರ ಚರ್ಚೆ ನಡೆದ ಹಿನ್ನೆಲೆಯಲ್ಲಿ ಪ್ರಕರಣವನ್ನು ಪುನರ್ ಪರಿಶೀಲನೆ ಮಾಡಿದಾಗ ಕೊಲೆ ನಡೆದಿರುವುದು ಬೆಳಕಿಗೆ ಬಂದಿದೆ.
ಮೃತ ಪರಶುರಾಮ್ ಪತ್ನಿ ಚೈತ್ರಾ ಮತ್ತು ಮಂಜುನಾಥ ಆಲಿಯಾಸ್ ಟೀಪುಡಿ ಮಂಜು ಎಂಬುವವರ ನಡುವೆ ಸಂಬಂಧವಿತ್ತು. ಈ ವಿಷಯ ತಿಳಿದಿದ್ದ ಪರಶುರಾಮ್ ಆಗಾಗ ಮನೆಯಲ್ಲಿ ಗಲಾಟೆ ಮಾಡುತ್ತಿದ್ದ ಎನ್ನಲಾಗಿದೆ. ಮೇ 15ರಂದು ಇದೇ ವಿಷಯಕ್ಕೆ ಮನೆಯಲ್ಲಿ ಜಗಳ ನಡೆಯುತಿತ್ತು. ಅದೇ ಸಮಯಕ್ಕೆ ಮನೆಗೆ ಬಂದ ಮಂಜುನಾಥ್ ಜೊತೆ ಪರಶುರಾಮ್ ಜಗಳಕ್ಕೆ ಇಳಿದಿದ್ದನು. ಪರಶುರಾಮ್ ಕುಡುಗೋಲು, ಮಂಜುನಾಥ ಚಾಕು ಹಿಡಿದುಕೊಂಡು ಪರಸ್ಪರ ಜಗಳ ಮಾಡುತ್ತಿದ್ದರು.
ಆಗ ಮಂಜುನಾಥ ಚಾಕುವಿನಿಂದ ಪರಶುರಾಮನನ್ನು ಚುಚ್ಚಿದ್ದಾನೆ. ತಕ್ಷಣ ಪರಶುರಾಮ ಕುಸಿದು ಬಿದಿದ್ದು, ರಕ್ತಸ್ರಾವದಿಂದ ನರಳುತ್ತಿದ್ದ ಪರಶುರಾಮನನ್ನು ಮಂಜುನಾಥ ಸಾಗರ ಉಪವಿಭಾಗೀಯ ಆಸ್ಪತ್ರೆಗೆ ಕರೆತಂದು ಚಿಕಿತ್ಸೆ ಕೊಡಿಸಿದ್ದಾನೆ. ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಚಿಕಿತ್ಸೆ ಫಲಕಾರಿಯಾಗದೆ ರಾತ್ರಿ 12ಕ್ಕೆ ಪರಶುರಾಮ ಮೃತಪಟ್ಟಿದ್ದಾನೆ.
-
ಇದನ್ನೂ ಓದಿ > ಶಿವಮೊಗ್ಗ ಜಿಲ್ಲೆಯಲ್ಲಿ 226 ಜನರಿಗೆ ಹಾವು ಕಡಿತ, 3 ಸಾವು!
-
ಇದನ್ನೂ ಓದಿ > ಶಿವಮೊಗ್ಗ, ಜಾನುವಾರುಗಳಿಗೆ ಸಿಟಿ ಬಸ್ ಡಿಕ್ಕಿ, ಕರು ಸಾವು, ಹಲವು ಕರುಗಳಿಗೆ ಗಾಯ!
ಪರಶುರಾಮನಿಗೆ ಚಾಕುವಿನಿಂದ ಇರಿದ ಮಂಜುನಾಥ ಯಾನೆ ಟೀಪುಡಿ ಮಂಜು ಹಾಗೂ ವಿಷಯ ಗೊತ್ತಿದ್ದು ಮಾಹಿತಿಯನ್ನು ಮುಚ್ಚಿಟ್ಟಿದ್ದ ಚೈತ್ರ ಪರಶುರಾಮ ಅವರ ವಿರುದ್ದ ಪೇಟೆ ಠಾಣೆ ಪಿಎಸ್‌ಐ ಶಾಂತರಾಜು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.














