ಶಿವಮೊಗ್ಗ: ನಶಾಮುಕ್ತ ಭಾರತವು ಕೇವಲ ಸರ್ಕಾರದ ಯೋಜನೆಯಲ್ಲ, ಪ್ರತಿಯೊಬ್ಬ ನಾಗರಿಕನ ಜವಾಬ್ದಾರಿಯಾಗಿದೆ. ಯುವಕರು ಮಾದಕ ವ್ಯಸನಗಳಿಂದ ದೂರವಿದ್ದಾಗ ಮಾತ್ರ ಆರೋಗ್ಯವಂತ, ಶಕ್ತಿಶಾಲಿ ಹಾಗೂ ಅಭಿವೃದ್ಧಿ ಹೊಂದಿದ ರಾಷ್ಟ್ರ ನಿರ್ಮಾಣ ಸಾಧ್ಯ ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಬಿ. ಹೇಳಿದರು.
ನಗರದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನಲ್ಲಿ ಗುರುವಾರ ಐಕ್ಯೂಎಸಿ, ಎನ್‌ಎಸ್‌ಎಸ್ ಹಾಗೂ ರೆಡ್ ಕ್ರಾಸ್ ಘಟಕಗಳ ಸಹಯೋಗದಲ್ಲಿ ಅಂತರರಾಷ್ಟ್ರೀಯ ಯುವ ದಿನ ಅಂಗವಾಗಿ ಆಯೋಜಿಸಿದ್ದ ‘ನಶಾ ಮುಕ್ತ ಭಾರತ ಅಭಿಯಾನ’ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಇದನ್ನೂ ಓದಿ > > ಶಿವಮೊಗ್ಗ ಬಸ್ ನಿಲ್ದಾಣದಲ್ಲಿ ವ್ಯಕ್ತಿ ನೇಣಿಗೆ ಶರಣು!
ಮಾದಕ ವಸ್ತುಗಳ ಸೇವನೆಯು ವ್ಯಕ್ತಿಯ ಆರೋಗ್ಯ, ಶಿಕ್ಷಣ, ಉದ್ಯೋಗ, ಆರ್ಥಿಕ ಸ್ಥಿರತೆ ಹಾಗೂ ಕುಟುಂಬದ ನೆಮ್ಮದಿಯನ್ನು ಹಾಳುಮಾಡುವುದಲ್ಲದೆ, ಅಪರಾಧ ಮತ್ತು ರಸ್ತೆ ಅಪಘಾತಗಳಿಗೂ ಕಾರಣವಾಗುತ್ತದೆ. ಕಳೆದ ವರ್ಷ ಜಿಲ್ಲೆಯಲ್ಲಿ 350ಕ್ಕೂ ಹೆಚ್ಚು ಗಾಂಜಾ ಪ್ರಕರಣಗಳು ದಾಖಲಾಗಿದ್ದು, ನಗರ ಪ್ರದೇಶಗಳಲ್ಲಿಯೇ ಹೆಚ್ಚಿನ ಪ್ರಕರಣಗಳು ವರದಿಯಾಗಿವೆ. ವಯೋಸಹಜ ವ್ಯಾಮೋಹಗಳಿಂದ ಆರಂಭವಾಗುವ ದುಶ್ಚಟಗಳು, ವ್ಯಕ್ತಿಯ ಬದುಕನ್ನು ಅಧೋಗತಿಗೆ ತಳ್ಳುತ್ತವೆ. ಆದ್ದರಿಂದ ವಿದ್ಯಾರ್ಥಿಗಳು ಯಾವುದೇ ಒತ್ತಡಗಳಿಗೆ ಮಣಿಯದೆ ಮಾದಕ ವ್ಯಸನಗಳಿಗೆ ಸ್ಪಷ್ಟವಾಗಿ ‘ಇಲ್ಲ’ ಎಂದು ಹೇಳುವ ಧೈರ್ಯ ಬೆಳೆಸಿಕೊಳ್ಳಬೇಕು ಎಂದು ಸಲಹೆ ನೀಡಿದರು.
ಇದನ್ನೂ ಓದಿ > >ಸಾಲಗಾರರ ಕಾಟಕ್ಕೆ ಬೇಸತ್ತು ಆಟೋ ಚಾಲಕ ಆತ್ಮಹತ್ಯೆ!
ಕ್ರೀಡೆ, ಯೋಗ, ಓದು, ಸಾಂಸ್ಕೃತಿಕ ಚಟುವಟಿಕೆ ಹಾಗೂ ಸಮಾಜ ಸೇವೆಯಂತಹ ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡು ಅಮೂಲ್ಯವಾದ ಬದುಕನ್ನು, ಸಮಾಜಮುಖಿ ಕಾರ್ಯಗಳಿಗೆ ಮೀಸಲಿಡಿ. ಸಮಾಜದ ಪ್ರತಿಯೊಬ್ಬರೂ ನಶಾಮುಕ್ತ ವಾತಾವರಣ ನಿರ್ಮಾಣಕ್ಕೆ ಕೈಜೋಡಿಸಬೇಕು. ವ್ಯಸನದ ವಿರುದ್ಧ ಜಾಗೃತಿ ಮೂಡಿಸುವುದರ ಜೊತೆಗೆ, ವ್ಯಸನಕ್ಕೆ ಒಳಗಾದವರಿಗೆ ಸೂಕ್ತ ಚಿಕಿತ್ಸೆ ಮತ್ತು ಪುನರ್ವಸತಿ ಕಲ್ಪಿಸುವ ಅಗತ್ಯವಿದೆ ಎಂದು ಹೇಳಿದರು.
ಇದನ್ನೂ ಓದಿ > > ಶಿವಮೊಗ್ಗ, ಜೈಲಿಗೆ ಕರೆದೊಯ್ಯುವಾಗ ಆರೋಪಿ ಎಸ್ಕೇಪ್ !
ಕಾರ್ಯಕ್ರಮದಲ್ಲಿ ರಾಷ್ಟ್ರೀಯ ಶಿಕ್ಷಣ ಸಮಿತಿಯ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್. ರಾಮಚಂದ್ರ ಮಾತನಾಡಿದರು. ಕಾಲೇಜಿನ ಪ್ರಾಂಶುಪಾಲರಾದ ಪಿ.ಆರ್.ಮಮತಾ ಅಧ್ಯಕ್ಷತೆ ವಹಿಸಿದ್ದರು. ಕಾಲೇಜಿನ ವಿಶೇಷಾಧಿಕಾರಿ ಡಾ.ಆರ್.ಎಂ.ಜಗದೀಶ್, ಎನ್‌ಎಸ್‌ಎಸ್ ಅಧಿಕಾರಿಗಳಾದ ಪ್ರವೀಣ್ ಬಿ.ಎನ್, ಘನಶ್ಯಾಮ್, ಯುವ ರೆಡ್ ಕ್ರಾಸ್ ಘಟಕದ ಸಂಚಾಲಕರಾದ ಸೌಪರ್ಣಿಕ ಉಮೇಶ್, ರೋವರ್ಸ್ ರೇಂಜರ್ಸ್ ಘಟಕದ ಸಂಚಾಲಕರಾದ ಸತಿ ಭಾರತಿ ದಯಾನಂದ, ನವೀನ್ ತೇಲ್ಕರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.














