ಶಿಕಾರಿಪುರ: ಶಿವಮೊಗ್ಗ-ಶಿಕಾರಿಪುರ-ಹಾನಗಲ್ ರಾಜ್ಯ ಹೆದ್ದಾರಿಯಲ್ಲಿ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕಾರು ಚಾಲಕ ಸೇರಿದಂತೆ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ಶಿಕಾರಿಪುರ ತಾಲ್ಲೂಕಿನ ತರಲಘಟ್ಟ ಕ್ಯಾಂಪ್ ಬಳಿ ನಡೆದಿದೆ.
ಇದನ್ನೂ ಓದಿ > >ಶಿವಮೊಗ್ಗ ದಸರಾ ಆನೆ ಅವಘಡದ ಬೆನ್ನಲ್ಲೇ ಅರಣ್ಯ ಇಲಾಖೆ ಅಲರ್ಟ್: ಜಂಬೂಸವಾರಿಗೆ ಹೊಸ ರೂಲ್ಸ್!
ಮೃತ ದುರ್ದೈವಿಗಳನ್ನು ಶಿಕಾರಿಪುರ ತಾಲ್ಲೂಕಿನ ಶಿರಾಳಕೊಪ್ಪ ಸಮೀಪದ ಮುತ್ತಿಗೆ ಗ್ರಾಮದ ನಿವಾಸಿಗಳಾದ ಕಾರು ಚಾಲಕ ಸಿದ್ದು (34) ಹಾಗೂ ಲಲಿತಮ್ಮ (65) ಎಂದು ಗುರುತಿಸಲಾಗಿದೆ.
ಅಪಘಾತದಲ್ಲಿ ಉಜ್ಜಪ್ಪ (74), ಹನುಮಂತಪ್ಪ (65) ಹಾಗೂ ಜಯಮ್ಮ (55) ಎಂಬುವವರು ಗಾಯಗೊಂಡಿದ್ದಾರೆ. ಈ ಪೈಕಿ ಜಯಮ್ಮ ಅವರ ಸ್ಥಿತಿ ಗಂಭೀರವಾಗಿದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ > >ಶಿವಮೊಗ್ಗ ಮಹಾನಗರ ಪಾಲಿಕೆ ಮಾಜಿ ಸದಸ್ಯೆ ನಿಧನ, ಜಿಲ್ಲಾ ಬಿಜೆಪಿ ಸಂತಾಪ
ಮುತ್ತಿಗೆ ಗ್ರಾಮದ ಐವರು ಶಿವಮೊಗ್ಗದ ಆಸ್ಪತ್ರೆಗೆ ಕಾರಿನಲ್ಲಿ ಬಂದು, ವಾಪಸ್ ಶಿಕಾರಿಪುರಕ್ಕೆ ತೆರಳುತ್ತಿದ್ದರು. ಈ ವೇಳೆ ಅಡಿಕೆ ತುಂಬಿಕೊಂಡು ಶಿವಮೊಗ್ಗದತ್ತ ಬರುತ್ತಿದ್ದ ಕ್ಯಾಂಟರ್ ಹಾಗೂ ಕಾರಿನ ಮಧ್ಯೆ ತರಲಘಟ್ಟ ಕ್ಯಾಂಪ್ ಸಮೀಪ ಮುಖಾಮುಖಿ ಢಿಕ್ಕಿಯಾಗಿದೆ. ಅಪಘಾತದ ರಭಸಕ್ಕೆ ಇಬ್ಬರು ಸ್ಥಳದಲ್ಲೇ ಕೊನೆಯುಸಿರೆಳೆದಿದ್ದಾರೆ.
ಗಾಯಾಳುಗಳನ್ನು ತಕ್ಷಣವೇ ಶಿಕಾರಿಪುರ ತಾಲ್ಲೂಕು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ವಿಷಯ ತಿಳಿದು ಘಟನಾ ಸ್ಥಳಕ್ಕೆ ಶಿಕಾರಿಪುರ ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ, ಪರಿಶೀಲನೆ ನಡೆಸಿದ್ದಾರೆ.














