ಶಿವಮೊಗ್ಗ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ತಟ್ಟೆಕೊಡ್ಲು ಗ್ರಾಮದಲ್ಲಿ ಮಧ್ಯರಾತ್ರಿ 1.30 ರ ವೇಳೆಗೆ ಬಂದೂಕಿನಿಂದ ಗುಂಡು ಹಾರಿಸಿಕೊಂಡು ರಾಮಚಂದ್ರ ರಾವ್ (85) ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ.
ಈ ವ್ಯಕ್ತಿ ತಾವೇ ಸಿಂಗಲ್ ಬ್ಯಾರಲ್ ಬಂದೂಕಿನಿಂದ ತನ್ನ ಕುತ್ತಿಗೆ ಸಮೀಪ ಗುಂಡು ಹಾರಿಸಿಕೊಂಡು ಸಾವನ್ನಪ್ಪಿದ್ದಾರೆ ಎಂದು ಶಂಕಿಸಲಾಗಿದ್ದು, ಮೃತದೇಹದ ತಲೆ ಭಾಗ ಸಂಪೂರ್ಣವಾಗಿ ಛಿದ್ರವಾಗಿದೆ.
ರಾಮಚಂದ್ರ ರಾವ್ ಕಳೆದ ಮೂರು ದಿನಗಳ ಹಿಂದೆ ಬಿದ್ದು ತಲೆಗೆ ಗಾಯಗೊಂಡಿದ್ದರು. ಅವರು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದರೂ, ಗಾಯದಿಂದ ಉಂಟಾದ ನೋವು ಕಡಿಮೆಯಾಗಿರಲಿಲ್ಲ. ಇದರಿಂದಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಸಾಧ್ಯತೆ ಇದೆ ಎನ್ನಲಾಗಿದೆ.
ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಬಂದೂಕಿಗೆ ಪರವಾನಗಿ ಇದೆಯೋ ಇಲ್ಲವೋ ಎಂಬುದರ ಪರಿಶೀಲನೆ ಸೇರಿದಂತೆ, ಟ್ರಿಗರ್ ಹೇಗೆ ಪ್ರೆಸ್ ಆಗಿದೆ ಎಂಬ ವಿಚಾರಗಳನ್ನೂ ತಪಾಸಣೆ ಮಾಡಲಾಗುತ್ತಿದೆ.














