ಶಿವಮೊಗ್ಗ: ತಂತ್ರಜ್ಞಾನ ಬದಲಾವಣೆಯ ವೇಗ ಹೆಚ್ಚುತ್ತಿರುವ ಇಂದಿನ ಯುಗದಲ್ಲಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಕೇವಲ ಯಂತ್ರಗಳ ಅಧ್ಯಯನಕ್ಕೆ ಸೀಮಿತವಾಗದೆ, ಉತ್ಪನ್ನ ಆಧಾರಿತ, ಸುಸ್ಥಿರ ಅಭಿವೃದ್ಧಿ ಹಾಗೂ ಸಮಾಜಮುಖಿ ಆವಿಷ್ಕಾರಗಳ ಕೇಂದ್ರಬಿಂದುವಾಗಿ ರೂಪುಗೊಳ್ಳುತ್ತಿದೆ ಎಂದು ಐಐಟಿ ಧಾರವಾಡದ ಸಂಶೋಧನಾ ಡೀನ್ ಡಾ.ಎಂ.ಎ ಸೋಮಶೇಖರ್ ಹೇಳಿದರು.
ನಗರದ ಜೆ.ಎನ್.ಎನ್ ಇಂಜಿನಿಯರಿಂಗ್ ಕಾಲೇಜಿನಲ್ಲಿ ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ವತಿಯಿಂದ ಎಲ್.ಅಂಡ್.ಟಿ ಎಜುಟೆಕ್, ಯುನಿಮೆಕ್ ಹಾಗೂ ಇನ್ಸ್ಟಿಟ್ಯೂಟ್ ಆಫ್ ಫೌಂಡ್ರಿಮ್ಯಾನ್ ಸಂಸ್ಥೆಗಳ ಸಂಯುಕ್ತಾಶಯದಲ್ಲಿ ಗುರುವಾರ ಆಯೋಜಿಸಿದ್ದ ಮೆಕ್ಯಾನಿಕಲ್ ಇಂಜಿನಿಯರಿಂಗ್ನಲ್ಲಿನ ನವೀನ ಪ್ರಗತಿಗಳು ಕುರಿತ ಅಂತರಾಷ್ಟ್ರೀಯ ವಿಚಾರ ಸಂಕಿರಣ ಉದ್ಘಾಟಿಸಿ ಮಾತನಾಡಿದರು.
ಮೆಕ್ಯಾನಿಕಲ್ ಇಂಜಿನಿಯರಿಂಗ್ ಎನ್ನುವುದು ವಸ್ತುಗಳನ್ನು ಹೇಗೆ ಕಾಣಬೇಕು, ದೋಷಗಳನ್ನು ಹೇಗೆ ಗುರುತಿಸಬೇಕು ಮತ್ತು ಅವನ್ನು ಇನ್ನಷ್ಟು ಉತ್ತಮ ಉತ್ಪನ್ನಗಳಾಗಿ ಹೇಗೆ ರೂಪಿಸಬೇಕು ಎಂಬ ಚಿಂತನಾ ಪ್ರಕ್ರಿಯೆಯಾಗಿದೆ. ಮುಂದಿನ ದಿನಗಳಲ್ಲಿ ಯಂತ್ರಗಳು ಪರಸ್ಪರ ಸಂವಹನ ನಡೆಸುವ ಪ್ರಕ್ರಿಯೆ ಹೆಚ್ಚಾಗಲಿದ್ದು, ರೋಬೋಟ್ಗಳು ಅನೇಕ ಕಾರ್ಯಗಳನ್ನು ನಿರ್ವಹಿಸಲಿವೆ.
ಆಭರಣ ಕ್ಷೇತ್ರದಲ್ಲಿಯೂ ತ್ರಿಡಿ ಮುದ್ರಣ ತಂತ್ರಜ್ಞಾನ ವೇಗವಾಗಿ ಪ್ರವೇಶಿಸುತ್ತಿದ್ದು, ಉತ್ಪಾದನಾ ಕ್ಷೇತ್ರದಲ್ಲಿ ಹೊಸ ಅವಕಾಶಗಳು ಮೂಡುತ್ತಿವೆ. ಅಂತಹ ತಂತ್ರಜ್ಞಾನ ಪರಿಸರದಲ್ಲಿ ಮತ್ತಷ್ಟು ವೇಗ ಪಡೆಯಲು ಸಂಶೋಧನಾರ್ಥಿಗಳು ಮೆಕ್ಯಾನಿಕಲ್ ಇಂಜಿನಿಯರಿಂಗ್ನ ಮೂಲಭೂತ ತತ್ವಗಳಲ್ಲಿ ದೃಢವಾದ ಕಲಿತು ಮುಂದರ ಸಾಗಬೇಕಿದೆ ಎಂದು ಹೇಳಿದರು.

ಮುಖ್ಯ ಅತಿಥಿಗಳಾದ ರಾಷ್ಟ್ರೀಯ ಶಿಕ್ಷಣ ಸಮಿತಿ ಅಧ್ಯಕ್ಷರಾದ ಜಿ.ಎಸ್.ನಾರಾಯಣ ರಾವ್ ಮಾತನಾಡಿ, ಕೃತಕ ಬುದ್ಧಿಮತ್ತೆ ಕುರಿತು ಸಮಾಜದಲ್ಲಿ ಭೀತಿ ಮತ್ತು ಆತಂಕ ಕಂಡುಬರುತ್ತಿದ್ದರೂ, ಬದಲಾವಣೆಯನ್ನು ಸ್ವೀಕರಿಸುವ ಮತ್ತು ಹೆಚ್ಚು ವಿಕಸನಗೊಳ್ಳುವ ಮನೋಭಾವ ಅಗತ್ಯ. ಸಿವಿಲ್, ಮೆಕ್ಯಾನಿಕಲ್ ಮತ್ತು ಎಲೆಕ್ಟ್ರಾನಿಕ್ಸ್ ವಿಭಾಗಗಳು, ಇಂಜಿನಿಯರಿಂಗ್ ಶಿಕ್ಷಣದ ಮೂಲ ಬೇರುಗಳಾಗಿದ್ದು, ಸ್ವಯಂ ಉದ್ಯೋಗ ಸೃಷ್ಟಿಗೆ ಸದಾ ಶಕ್ತಿ ತುಂಬಲಿವೆ.
ಕಲಿಕೆಗೆ ವಯಸ್ಸಿನ ಮಿತಿಯಿಲ್ಲ. ಜ್ಞಾನ ನಿರಂತರವಾಗಿ ಹರಿತವಾಗಲು ಇಂತಹ ವಿಚಾರ ಸಂಕಿರಣಗಳು ಪ್ರೇರಣೆಯಾಗುತ್ತವೆ. ಸಂಶೋಧನೆ ಎಂಬುದು ಸ್ವಯಂಪ್ರೇರಿತ, ಸತ್ವಭರಿತ ಹಾಗೂ ಸಮಾಜಮುಖಿಯಾಗಿರಬೇಕು ಎಂದು ಹೇಳಿದರು.
ಎನ್ಇಎಸ್ ಕಾರ್ಯದರ್ಶಿ ಎಸ್.ಎನ್.ನಾಗರಾಜ ಮಾತನಾಡಿ, ಮೆಕ್ಯಾನಿಕಲ್ ಇಂಜಿನಿಯರಿಂಗ್ ಇಂದು ಬಹುಶಾಖೀಯ ಸ್ವರೂಪ ಪಡೆದುಕೊಂಡಿದ್ದು, ಕೈಗಾರಿಕೆಗಳ ಅವಶ್ಯಕತೆಗಳನ್ನು ಪೂರೈಸಲು ತಂತ್ರಜ್ಞಾನ ಮತ್ತು ಹೊಸ ಆವಿಷ್ಕಾರಗಳೊಂದಿಗೆ ಹೆಜ್ಜೆ ಹಾಕಬೇಕಾಗಿದೆ.
ಕೃಷಿ ಪ್ರಧಾನ ದೇಶವಾಗಿರುವ ಭಾರತದಲ್ಲಿ ಉತ್ಪಾದಕತೆ ಹೆಚ್ಚಿಸಲು ಮೆಕ್ಯಾನಿಕಲ್ ತಂತ್ರಜ್ಞಾನ ಪ್ರಮುಖ ಪಾತ್ರವಹಿಸಬೇಕು. ಸಮಾಜದ ಸಮಸ್ಯೆಗಳಿಗೆ ತಾಂತ್ರಿಕ ಪರಿಹಾರಗಳನ್ನು ನೀಡುವತ್ತ ಸಂಶೋಧನೆಗಳು ಸಾಗಬೇಕು. ತ್ಯಾಜ್ಯ ಉತ್ಪಾದನೆ ಕಡಿಮೆ ಮಾಡಿ, ಮರುಬಳಕೆ ಆಧಾರಿತ ವಲಯದ ಆರ್ಥಿಕತೆಯ ನಿರ್ಮಾಣವೇ ಭವಿಷ್ಯದ ಬೆಳವಣಿಗೆಯ ದಿಕ್ಕಾಗಬೇಕು ಎಂದು ಅಭಿಪ್ರಾಯಪಟ್ಟರು.
ಕಾಲೇಜಿನ ಪ್ರಾಂಶುಪಾಲರಾದ ಡಾ.ವೈ.ವಿಜಯಕುಮಾರ್ ಮಾತನಾಡಿದರು. ಮೆಕ್ಯಾನಿಕಲ್ ಇಂಜಿನಿಯರಿಂಗ್ ವಿಭಾಗದ ಮುಖ್ಯಸ್ಥರಾದ ಡಾ.ಈ.ಬಸವರಾಜ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಎನ್ಇಎಸ್ ನಿರ್ದೇಶಕರಾದ ಟಿ.ಆರ್.ಅಶ್ವತ್ಥನಾರಾಯಣ ಶೆಟ್ಟಿ, ಎಚ್.ಸಿ.ಶಿವಕುಮಾರ್, ಸಂಶೋಧನಾ ಡೀನ್ ಡಾ.ಎಸ್.ವಿ.ಸತ್ಯನಾರಾಯಣ, ವಿಚಾರ ಸಂಕಿರಣದ ಸಂಯೋಜಕರಾದ ಡಾ.ಸತ್ಯಪ್ರೇಮ, ಡಾ.ಅಮಿತ್ ಕುಮಾರ್ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ಪರಮೇಶ್ವರ.ಎಸ್ ನಿರೂಪಿಸಿದರು. ಇದೇ ವೇಳೆ ವಿಚಾರಸಂಕಿರಣದ ಕಿರುಹೊತ್ತಿಗೆಯನ್ನು ಅತಿಥಿಗಳು ಬಿಡುಗಡೆಗೊಳಿಸಿದರು.














