ಸಾಗರ : ವಿದ್ಯುತ್ ಖಾಸಗೀಕರಣ ವಿರೋಧಿಸಿ ಸೋಮವಾರ ಕರ್ನಾಟಕ ರಾಜ್ಯ ರೈತ ಸಂಘ ಶಿವಮೊಗ್ಗ ಜಿಲ್ಲಾ ಘಟಕ ನೀಡಿದ ಸಾಗರ ಬಂದ್ ಭಾಗಶಃ ಯಶಸ್ಸು ಕಂಡಿದೆ. ಸಾಗರ ಬಂದ್ ಹಿನ್ನೆಲೆಯಲ್ಲಿ ರೈತ ಸಂಘದ ಪ್ರಮುಖರು ಬೆಳಿಗ್ಗೆ ಪಟ್ಟಣದ ಪ್ರಮುಖ ಬೀದಿಗಳಲ್ಲಿ ಸಂಚರಿಸಿ ಅಂಗಡಿ ಮುಂಗಟ್ಟು, ಹೋಟೆಲ್ ಮಾಲೀಕರ ಬಳಿ ತಮ್ಮ ವಹಿವಾಟು ನಿಲ್ಲಿಸುವ ಮೂಲಕ ಬಂದ್‌ಗೆ ಬೆಂಬಲ ನೀಡುವಂತೆ ಮನವಿ ಮಾಡಿದ್ದರು. ಇನ್ನು ಕೆಲವರು ಬಂದ್ ಮಾಡಲು ನಿರಾಕರಿಸಿದಾಗ ರೈತರು ನಿಮ್ಮ ಅಂಗಡಿಗಳಲ್ಲಿ ಮುಂದಿನ ದಿನಗಳಲ್ಲಿ ಯಾವುದೇ ವಸ್ತುಗಳನ್ನು ಖರೀದಿಸುವುದಿಲ್ಲ ಎನ್ನುವ ಎಚ್ಚರಿಕೆ ಸಹ ನೀಡಿದ್ದು ಕಂಡು ಬಂದಿತು.
ಇದನ್ನೂ ಓದಿ > ಸಿಇಟಿಯಲ್ಲಿ ಕಡಿಮೆ ಅಂಕ, ವಿಷ ಸೇವಿಸಿದ್ದ ಯುವಕ ಸಾವು!
ನಗರದ ಪ್ರಮುಖ ಬೀದಿಗಳಲ್ಲಿ ಬಹುತೇಕ ಅಂಗಡಿ ಮುಂಗಟ್ಟುಗಳು ಬಾಗಿಲು ಮುಚ್ಚಿದ್ದರೇ, ಬಸ್ ಸೌಲಭ್ಯ, ಸರ್ಕಾರಿ ಕಚೇರಿ, ಬ್ಯಾಂಕ್, ಶಾಲಾಕಾಲೇಜು ಎಂದಿನಂತೆ ಕಾರ್ಯನಿರ್ವಹಿಸಿವೆ. ಸಾಗರದ ಮಹಾಗಣಪತಿ ದೇವಸ್ಥಾನದ ಬಳಿ ಮೆರವಣಿಗೆಗೆ ಜಿಲ್ಲಾ ಪಂಚಾಯ್ತಿ ಮಾಜಿ ಸದಸ್ಯ ಬಿ.ಆರ್. ಜಯಂತ್ ಹಸಿರು ಬಾವುಟ ತೋರಿಸುವ ಮೂಲಕ ಚಾಲನೆ ನೀಡಿದರು. ಪ್ರತಿಭಟನೆಯಲ್ಲಿ ಸಾವಿರಾರು ರೈತರು ಪಾಲ್ಗೊಂಡಿದ್ದರೇ, ಗ್ರಾಮೀಣ ಭಾಗದಿಂದ ರೈತರು ನೂರಾರು ಟ್ಯಾಕ್ಟರ್‌ಗಳಲ್ಲಿ ಆಗಮಿಸಿ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಮೆರವಣಿಗೆಯು ಗಣಪತಿ ದೇವಸ್ಥಾನದಿಂದ ಹೊರಟು ನಗರದ ಪ್ರಮುಖ ಬೀದಿಗಳಲ್ಲಿ ಸಂಚರಿಸುತ್ತಿರುವ ಸಂದರ್ಭದಲ್ಲಿ ಅಶೋಕ ರಸ್ತೆಯಲ್ಲಿದ್ದಾಗ ಭಾರೀ ಮಳೆ ಸುರಿದರೂ ಮಳೆಯ ನಡುವೆಯೂ ರೈತರು ವಿದ್ಯುತ್ ಖಾಸಗೀಕರಣದ ವಿರುದ್ದ ಘೋಷಣೆ ಕೂಗಿ, ಉಪವಿಭಾಗಾಧಿಕಾರಿಗಳ ಕಚೇರಿಗೆ ಆಗಮಿಸಿ ಮನವಿ ಸಲ್ಲಿಸಿದರು.

ಇದನ್ನೂ ಓದಿ > ಸಿಇಟಿಯಲ್ಲಿ ಕಡಿಮೆ ಅಂಕ, ವಿಷ ಸೇವಿಸಿದ್ದ ಯುವಕ ಸಾವು!
ಮೆರವಣಿಗೆಗೆ ಚಾಲನೆ ನೀಡಿ ಮಾತನಾಡಿದ ಮಾಜಿ ಸದಸ್ಯ ಬಿ.ಆರ್.ಜಯಂತ್, ಕೇಂದ್ರ ಅಥವಾ ರಾಜ್ಯ ಸರ್ಕಾರಗಳು ಸರ್ಕಾರಿ ಸ್ವಾಮ್ಯದ ಸಂಸ್ಥೆಗಳನ್ನು ಖಾಸಗೀಕರಣದ ತೆಕ್ಕೆಗೆ ತಳ್ಳುವುದನ್ನು ನಾವು ಖಡಾಖಂಡಿತವಾಗಿ ವಿರೋಧಿಸಬೇಕು. ಈಗಾಗಲೆ ಕೇಂದ್ರ ಸರ್ಕಾರ ಬಿಎಸ್‌ಎನ್‌ಎಲ್ ಸೇರಿ ಅನೇಕ ಸಂಸ್ಥೆಗಳನ್ನು ಖಾಸಗೀಕರಣ ಮಾಡಲು ಮುಂದಾಗಿದ್ದು, ಅಂತಹ ಸಂಸ್ಥೆಗಳು ವಿನಾಶದ ಅಂಚನ್ನು ತಲುಪಿದೆ. ಖಾಸಗೀಕರಣ ಜನವಿರೋಧಿ ಕೃತ್ಯ. ರಾಜ್ಯ ಸರ್ಕಾರ ಟಾಟಾ ಕಂಪನಿಗೆ ವಿದ್ಯುತ್ ಸಂಸ್ಥೆ ಮಾರುವುದನ್ನು ನಾವು ಉಗ್ರವಾಗಿ ಖಂಡಿಸಬೇಕು. ಸರ್ಕಾರ ಯಾವುದೇ ಆಗಿದ್ದರೂ ಜನವಿರೋಧಿನೀತಿ ಜಾರಿಗೆ ತಂದಾಗ ಎಲ್ಲರೂ ಖಂಡಿಸಬೇಕು. ಖಾಸಗಿ ಕಂಪನಿಗಳು ಜನಸಾಮಾನ್ಯರ ಹಿತವನ್ನು ಕಾಪಾಡುವುದಿಲ್ಲ. ಆದ್ದರಿಂದ ಮುಖ್ಯಮಂತ್ರಿಗಳು ಖಾಸಗೀಕರಣ ಮಾಡುವುದನ್ನು ಕೈಬಿಡಬೇಕು. ಖಾಸಗೀಕರಣದಿಂದ ಸರ್ಕಾರೀಕರಣವಾಗಬೇಕೆ ವಿನಃ, ಸರ್ಕಾರಿ ಸಂಸ್ಥೆಗಳನ್ನು ಖಾಸಗೀಕರಣ ಮಾಡಬಾರದು ಎಂದು ಒತ್ತಾಯಿಸಿದರು.
ರೈತ ಸಂಘದ ಜಿಲ್ಲಾಧ್ಯಕ್ಷ ದಿನೇಶ್ ಶಿರವಾಳ, ರೈತ ಸಂಘದ ತಾಲ್ಲೂಕು ಅಧ್ಯಕ್ಷ ಡಾ. ರಾಮಚಂದ್ರಪ್ಪ ಮನೆಘಟ್ಟ, ಪ್ರಮುಖರಾದ ಬಿ.ಎ.ಇಂದೂಧರ ಬೇಸೂರು, ಕುಂಟಗೋಡು ಸೀತಾರಾಮ್, ವ.ಶಂ.ರಾಮಚಂದ್ರ ಭಟ್,ಕುಮಾರಸ್ವಾಮಿ ಕೊಪ್ಪ, ಹನುಮಂತಪ್ಪ, ಹಿತಕರ ಜೈನ್, ಜಮೀಲ್ ಸಾಗರ್, ಸಂತೋಷ್, ಚಂದ್ರು ಪೂಜಾರಿ, ಶಿವು ಮೈಲಾರಿಕೊಪ್ಪ, ರಾಚಪ್ಪ, ಸೋಮಶೇಖರ್, ಉಮೇಶ್ ಪಾಟೀಲ್, ಮಂಜುನಾಥ್ ಇನ್ನಿತರರು ಹಾಜರಿದ್ದರು.














