ಯುವಧ್ವನಿ ನ್ಯೂಸ್ | ಆನಂದಪುರ
ಆನಂದಪುರದ ಮುಖ್ಯ ರಸ್ತೆಯಲ್ಲೇ ಕೆಎಸ್‌ಆರ್‌ಟಿಸಿ ಬಸ್‌ಗಳನ್ನು ನಿಲ್ಲಿಸಿ ಪ್ರಯಾಣಿಕರನ್ನು ಇಳಿಸುವುದು ಹಾಗೂ ಹತ್ತಿಸುವುದರಿಂದ ವಾಹನ ಸಂಚಾರಕ್ಕೆ ತೀವ್ರ ಅಡಚಣೆ ಉಂಟಾಗುತ್ತಿದ್ದು, ಈ ಹಿನ್ನಲೆಯಲ್ಲಿ ಕೆಎಸ್‌ಆರ್‌ಟಿಸಿ ಬಸ್ ಚಾಲಕ ಹಾಗೂ ನಿರ್ವಾಹಕರಿಗೆ ಪೊಲೀಸ್ ತಿಳಿವಳಿಕೆ ಪತ್ರ ವನ್ನು ಆನಂದಪುರ ಪೊಲೀಸ್ ಠಾಣಾ ಪಿಎಸ್‌ಐ ಪ್ರವೀಣ್ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಮುಖ್ಯ ರಸ್ತೆಯಲ್ಲಿ ಅಡ್ಡಾದಿಡ್ಡಿಯಾಗಿ ಬಸ್‌ಗಳನ್ನು ನಿಲ್ಲಿಸುತ್ತಿರುವುದರಿಂದ ಅಪಘಾತಗಳಿಗೆ ಪ್ರಮುಖ ಕಾರಣವಾಗುತ್ತಿದೆ. ಈ ಕುರಿತು ಸಾರ್ವಜನಿಕರಿಂದ ಅನೇಕ ದೂರುಗಳು ಬಂದಿದ್ದು, ಈ ಬಗ್ಗೆ ಈಗಾಗಲೇ ಶಿವಮೊಗ್ಗ ಹಾಗೂ ಸಾಗರ ಕೆಎಸ್‌ಆರ್‌ಟಿಸಿ ಡಿಪೊ ಅಧಿಕಾರಿಗಳಿಗೆ ಪತ್ರದ ಮೂಲಕ ಹಾಗೂ ಮೌಖಿಕವಾಗಿ ಮಾಹಿತಿ ನೀಡಲಾಗಿದೆ. ಆದರೂ ಚಾಲಕರು ರಸ್ತೆಯಲ್ಲೇ ಬಸ್ ನಿಲ್ಲಿಸುತ್ತಿದ್ದಾರೆ’ ಎಂದು ದೂರಿದ್ದಾರೆ.
‘ಮುಖ್ಯ ರಸ್ತೆಯಲ್ಲಿ ಬಸ್ ನಿಲ್ಲಿಸದೇ ಆನಂದಪುರದ ನಿಲ್ದಾಣದೊಳಗೆ ಕಡ್ಡಾಯವಾಗಿ ಬಸ್ ಕೊಂಡೊಯ್ಯಬೇಕು ಎಂದು ಸೂಚಿಸಲಾಗಿದೆ. ಇದನ್ನು ಉಲ್ಲಂಘಿಸಿ ಮುಖ್ಯ ರಸ್ತೆಯಲ್ಲಿ ಬಸ್ ನಿಲ್ಲಿಸಿದರೆ ಅಥವಾ ಇದರಿಂದ ಅಪಘಾತ ಸಂಭವಿಸಿದರೆ ಸಂಬಂಧಪಟ್ಟ ಚಾಲಕರು ಹಾಗೂ ನಿರ್ವಾಹಕರ ವಿರುದ್ಧ ಕಾನೂನಿನಡಿ ಕಠಿಣ ಕ್ರಮ ಜರುಗಿಸಲಾಗುವುದು.
-ಪ್ರವೀಣ್, ಆನಂದಪುರ ಪೊಲೀಸ್ ಠಾಣಾ ಪಿಎಸ್‌ಐ















