ಶಿವಮೊಗ್ಗ : ಜವಳಿ ಉದ್ಯಮವನ್ನು ಪ್ರೋತ್ಸಾಹಿಸುವ ಸಲುವಾಗಿ ಶಿವಮೊಗ್ಗದಲ್ಲಿ ಜವಳಿ ಪಾರ್ಕ್ ಸ್ಥಾಪಿಸುವ ಸಂಬಂಧ ಪ್ರಸಕ್ತ ಸಾಲಿನ ಬಜೆಟ್‌ನಲ್ಲಿ ಘೋಷಣೆ ಮಾಡಬೇಕು, ಅದಕ್ಕೆ ಅಗತ್ಯ ವಿರುವ ಅನುದಾನವನ್ನು ಕೈಮಗ್ಗ ಮತ್ತು ಜವಳಿ ಇಲಾಖೆಗೆ ಹಂಚಿಕೆ ಮಾಡಬೇಕೆಂದು ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ ಅವರು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿದ್ದಾರೆ.
ಈ ಸಂಬಂಧ ಅವರು ಮಾ.೨ರಂದು ಸೋಮವಾರ ಬೆಂಗಳೂರಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಭೇಟಿ ಮಾಡಿ, ಶಿವಮೊಗ್ಗ ತಾಲ್ಲೂಕಿನ ಸುತ್ತ-ಮುತ್ತಲಿನ ಪ್ರದೇಶಗಳಿಂದ ಮಹಿಳೆಯರು, ಪುರುಷರು, ಯುವ ಜನರು ಸಿದ್ದ ಉಡುಪು ಕಾರ್ಖಾನೆಗಳಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಶಿವಮೊಗ್ಗ ತಾಲ್ಲೂಕಿನಲ್ಲಿ ಇನ್ನೂ ಹೆಚ್ಚು ಸಿದ್ಧ ಉಡುಪು, ಜವಳಿ ಘಟಕಗಳು ಸ್ಥಾಪನೆಯಾದಲ್ಲಿ ಸ್ಥಳೀಯರಿಗೆ ಹೆಚ್ಚು ಉದ್ಯೋಗಾವಕಾಶ ಸೃಷ್ಟಿ ಮಾಡಿದಂತಾಗುತ್ತದೆ ಎಂದು ತಿಳಿಸಿದ್ದಾರೆ.
ರಾಜ್ಯ ಸರ್ಕಾರ ಮತ್ತು ಕೇಂದ್ರ ಸರ್ಕಾರದಿಂದ ಲಭ್ಯವಿರುವ ಯೋಜನೆಗಳನ್ನು ಬಳಸಿಕೊಂಡು ಶಿವಮೊಗ್ಗ ತಾಲ್ಲೂಕಿನಲ್ಲಿ ಜವಳಿ ಪಾರ್ಕ್ ಸ್ಥಾಪನೆ ಮಾಡುವುದು ಅವಶ್ಯವಾಗಿದ್ದು, ತಮ್ಮ ಮನವಿಯನ್ನು ಸರ್ಕಾರ ಗಂಭೀರವಾಗಿಯೂ ಪರಿಗಣಿಸುವಂತೆ ಅವರು ವಿನಂತಿಸಿಕೊಂಡಿದ್ದಾರೆ.
ಜವಳಿ ಪಾರ್ಕ್ ಸ್ಥಾಪನೆಯ ಸಂಬಂಧ ತಾವು ಸರ್ಕಾರಕ್ಕೆ ತಾವು ಮನವಿ ಸಲ್ಲಿಸಿರುವ ಕುರಿತು ರಾಜ್ಯ ಜವಳಿ ಮೂಲ ಸೌಲಭ್ಯ ಅಭಿವೃದ್ಧಿ ನಿಗಮದ ಅಧ್ಯಕ್ಷ ಚೇತನ್ ಕೆ.ಗೌಡ ಅವರು ಮಾಧ್ಯಮಕ್ಕೆ ಪ್ರತಿಕ್ರಿಯಿಸಿದ್ದು, ಜನರಿಗೆ ಉದ್ಯೋಗಾವಕಾಶ ಸೃಷ್ಟಿಸುವ ಹಿನ್ನೆಲೆಯಲ್ಲಿ ಶಿವಮೊಗ್ಗದಲ್ಲಿ ಜವಳಿಪಾರ್ಕ್ ಸ್ಥಾಪಿಸಬೇಕೆನ್ನುವುದು ನನ್ನ ಬೇಡಿಕೆಯಾಗಿದೆ. ಇದನ್ನು ಪ್ರಸಕ್ತ ಬಜೆಟ್‌ನಲ್ಲಿಯೇ ಸರ್ಕಾರ ಘೋಷಿಸಬೇಕೆನ್ನುವ ನಿಟ್ಟಿನಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಜವಳಿ ಸಚಿವ ಶಿವಾನಂದ ಪಾಟೀಲ್, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ ಅವರಿಗೂ ಮನವಿ ಸಲ್ಲಿಸಲಾಗಿದೆ. ಅವರಿಂದ ಸಕರಾತ್ಮಕ ಸ್ಪಂದನೆ ಸಿಕ್ಕಿದೆ. ಇದೇ ವೇಳೆ ಎಐಸಿಸಿ ಕಾರ್ಯದರ್ಶಿ ಬಿ.ವಿ. ಶ್ರೀನಿವಾಸ್ ಅವರೂ ಕೂಡ ನನ್ನ ಮನವಿಗೆ ಸ್ಪಂದಿಸಿದ್ದಾರೆ ಎಂದು ತಿಳಿಸಿದ್ದಾರೆ.
ಸುದ್ದಿ ಮತ್ತು ಜಾಹೀರಾತಿಗಾಗಿ ಸಂಪರ್ಕಿಸಿ: 7483162573, yuvadhwanismg@gmail.com













