ಶಿವಮೊಗ್ಗ: ಶಿವಮೊಗ್ಗ ತಾಲ್ಲೂಕು ಕಛೇರಿಯ ಪಡಸಾಲೆಯಲ್ಲಿ ಇತ್ತೀಚಿನ ದಿನಗಳಲ್ಲಿ ಕಾಣಿಸುತ್ತಿರುವ ದೃಶ್ಯ ಒಂದೇ ಮಾತಿನಲ್ಲಿ ಹೇಳಬೇಕಾದರೆ — ಜನವೋ… ಜನ..!. ಜಾತಿ ಹಾಗೂ ಆದಾಯ ಪ್ರಮಾಣಪತ್ರಕ್ಕಾಗಿ ಜನರು ಮುಗಿಬಿದ್ದು, ಬೆಳಗ್ಗೆ 9 ಗಂಟೆ ಹೊತ್ತಿಗೆಲೇ ಉದ್ದನೆಯ ಸರತಿ ಸಾಲುಗಳು ರೂಪುಗೊಳ್ಳುತ್ತಿರುವುದು ಸಾಮಾನ್ಯ ದೃಶ್ಯವಾಗಿದೆ.
ರಾಜ್ಯ ಸರ್ಕಾರ ಜಾರಿಗೊಳಿಸಿರುವ ಒಳಮೀಸಲಾತಿ ವ್ಯವಸ್ಥೆ, ಜೊತೆಗೆ ಪಡಿತರ ಮತ್ತು ಇತರೆ ಸರ್ಕಾರಿ ಯೋಜನೆಗಳ ಪ್ರಯೋಜನ ಪಡೆಯಲು ಹೊಸದಾಗಿ ಪ್ರಮಾಣಪತ್ರ ಸಲ್ಲಿಕೆ ಕಡ್ಡಾಯವಾಗಿರುವ ಹಿನ್ನೆಲೆಯಲ್ಲಿ ಜನರು ನಾಡಕಛೇರಿಗಳತ್ತ ಧಾವಿಸುತ್ತಿದ್ದಾರೆ. ಕೂಲಿ ಕಾರ್ಮಿಕರು, ಬಡವರು ತಮ್ಮ ದೈನಂದಿನ ಕೆಲಸಗಳನ್ನು ಬಿಟ್ಟು ಕಚೇರಿಗಳ ಮುಂದೆ ಗಂಟೆಗಳ ಕಾಲ ನಿಂತು ಕಾಯುತ್ತಿರುವುದು ಸಾಮಾಜಿಕ-ಆರ್ಥಿಕ ಸಂಕಷ್ಟವನ್ನು ತೆರೆದಿಡುತ್ತದೆ.
ಒಳಮೀಸಲಾತಿ, ಪಡಿತರ ನಿಯಮಗಳ ಗೊಂದಲ
ಒಳಮೀಸಲಾತಿಯ ಹೊಸ ನಿಯಮಗಳ ಪ್ರಕಾರ ಪರಿಶಿಷ್ಟ ಜಾತಿಯೊಳಗಿನ ವರ್ಗೀಕರಣವನ್ನು ಮರುಹಂಚಿಕೆ ಮಾಡಲಾಗಿದೆ. ಎಡಗೈ, ಬಲಗೈ ಸಮುದಾಯಗಳು ಹಾಗೂ ಲಂಬಾಣಿ, ಭೋವಿ ಸೇರಿದಂತೆ ಇತರೆ ಸಮುದಾಯಗಳಿಗೆ ಪ್ರತ್ಯೇಕ ಪ್ರವರ್ಗಗಳನ್ನು ನಿಗದಿಪಡಿಸಲಾಗಿದೆ. ಇದರ ಪರಿಣಾಮವಾಗಿ ಹಳೆಯ ಜಾತಿ ಪ್ರಮಾಣಪತ್ರಗಳು ಅನೇಕ ಸಂದರ್ಭಗಳಲ್ಲಿ ಅನರ್ಹವಾಗುತ್ತಿದ್ದು, ‘ಪ್ರವರ್ಗ ಎ’, ‘ಬಿ’, ‘ಸಿ’ ಎಂಬ ನವೀಕೃತ ವಿವರಗಳೊಂದಿಗೆ ಹೊಸ ಪ್ರಮಾಣಪತ್ರ ಪಡೆಯುವುದು ಅನಿವಾರ್ಯವಾಗಿದೆ.
ಶಾಲಾ–ಕಾಲೇಜು ವಿದ್ಯಾರ್ಥಿಗಳು, ಉದ್ಯೋಗಾಕಾಂಕ್ಷಿಗಳು ಹಾಗೂ ವಿವಿಧ ಯೋಜನೆಗಳ ಫಲಾನುಭವಿಗಳು ಈ ಪ್ರಮಾಣಪತ್ರಗಳಿಗಾಗಿ ಪಡಸಾಲೆ ಹಾಗೂ ನಾಡಕಛೇರಿಗಳ ಸುತ್ತ ಸುತ್ತುತ್ತಿದ್ದಾರೆ. ಶಿವಮೊಗ್ಗ ತಾಲ್ಲೂಕು ಕಛೇರಿಯಲ್ಲಿ ಅರ್ಜಿ ಸಲ್ಲಿಕೆಗೆ ಎರಡು ಕೌಂಟರ್‌ಗಳಿದ್ದರೂ, ಜನರ ಸಂಖ್ಯೆಗೆ ಅದು ಸಾಲುತ್ತಿಲ್ಲ. ಕಳೆದ ಒಂದು ವಾರದಿಂದ ದಿನದಿಂದ ದಿನಕ್ಕೆ ಜನಸಂದಣಿ ಹೆಚ್ಚುತ್ತಲೇ ಇದೆ.
“ಸರ್ವರ್ ಬ್ಯುಸಿ” ಎಂಬ ಸಂದೇಶ
ಸರ್ಕಾರ ಡಿಜಿಟಲ್ ವ್ಯವಸ್ಥೆಯನ್ನು ಜಾರಿಗೆ ತಂದಿದ್ದರೂ, ನಾಡಕಛೇರಿ ವೆಬ್‌ಸೈಟ್‌ನಲ್ಲಿ ಸರ್ವರ್ ಸಮಸ್ಯೆಗಳು ಸಾಮಾನ್ಯವಾಗಿವೆ. “ಸರ್ವರ್ ಬ್ಯುಸಿ” ಎಂಬ ಸಂದೇಶ ಕಾಣಿಸಿಕೊಳ್ಳುವುದರಿಂದ ಆನ್‌ಲೈನ್ ಅರ್ಜಿ ಸಲ್ಲಿಕೆ ಕೂಡ ಜನರಿಗೆ ಸವಾಲಾಗಿದೆ. ಇದರ ಪರಿಣಾಮವಾಗಿ ಜನರು ಕಚೇರಿಗಳನ್ನೇ ಅವಲಂಬಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಿದೆ.
ಜಿಲ್ಲಾಡಳಿತ ಗಮನಿಸದಿದ್ದರೆ ಜನರ ಉಗ್ರ ಪ್ರತಿಭಟನೆ!
ಇದಲ್ಲದೆ, ಪಡಿತರ ಪಡೆಯಲು ಜಾತಿ ಮತ್ತು ಆದಾಯ ಪ್ರಮಾಣಪತ್ರ ಕಡ್ಡಾಯ ಎಂದು ಕೆಲವು ಪಡಿತರ ಅಂಗಡಿಗಳಲ್ಲಿ ತಿಳಿಸಲಾಗುತ್ತಿದೆ ಎಂಬ ಮಾತು ಜನರಲ್ಲಿ ಗೊಂದಲ ಹುಟ್ಟಿಸಿದೆ. ಸರ್ಕಾರದಿಂದ ಇದುವರೆಗೆ ಈ ಕುರಿತು ಸ್ಪಷ್ಟ ಆದೇಶ ಹೊರಬಂದಿಲ್ಲದಿದ್ದರೂ, ಜನರು ಆತಂಕದಿಂದ ಪ್ರಮಾಣಪತ್ರ ಪಡೆಯಲು ಓಡಾಡುತ್ತಿದ್ದಾರೆ.
ಬೆಳಗ್ಗೆ 6 ಗಂಟೆಯಿಂದಲೇ ಕಚೇರಿಗಳ ಮುಂದೆ ಸಾಲಿನಲ್ಲಿ ನಿಂತು ಕಾಯುತ್ತಿರುವ ಜನರ ಸ್ಥಿತಿ ಕಳವಳಕಾರಿಯಾಗಿದೆ. ದಿನಗೂಲಿ ಕೆಲಸಗಾರರು ತಮ್ಮ ಆದಾಯವನ್ನು ಕಳೆದುಕೊಂಡು ಕಚೇರಿಗಳ ಸುತ್ತಲೇ ತಿರುಗಾಡಬೇಕಾದ ಅನಿವಾರ್ಯತೆ ಎದುರಾಗಿದೆ.
ಈ ಹಿನ್ನೆಲೆಯಲ್ಲಿ ಸಾರ್ವಜನಿಕರು ಜಿಲ್ಲಾಡಳಿತದ ಗಮನವನ್ನು ಸೆಳೆಯುತ್ತಿದ್ದು, ಸಮಸ್ಯೆಗೆ ತಕ್ಷಣ ಸ್ಪಷ್ಟನೆ ಮತ್ತು ಪರಿಹಾರ ನೀಡಬೇಕೆಂದು ಒತ್ತಾಯಿಸಿದ್ದಾರೆ. ಪಡಿತರ ನಿಯಮಗಳ ಬಗ್ಗೆ ಗೊಂದಲ ನಿವಾರಣೆ, ಆನ್‌ಲೈನ್ ವ್ಯವಸ್ಥೆ ಸುಧಾರಣೆ ಹಾಗೂ ಹೆಚ್ಚುವರಿ ಕೌಂಟರ್‌ಗಳ ವ್ಯವಸ್ಥೆ ಮಾಡದಿದ್ದರೆ ಜನರ ಆಕ್ರೋಶ ಪ್ರತಿಭಟನೆಗೆ ತಿರುಗುವ ಸಾಧ್ಯತೆ ಇದೆ ಎಂಬ ಎಚ್ಚರಿಕೆಯೂ ಕೇಳಿಬರುತ್ತಿದೆ.














