ಶಿವಮೊಗ್ಗ: ವೈಚಾರಿಕ ದೀವಿಗೆಯನ್ನು ಜನ ಸಾಮಾನ್ಯರ ಮನದಲ್ಲಿ ಬೆಳಗಲು ಕುವೆಂಪು ಅವರ ಸಾಹಿತ್ಯದ ಕೊಡುಗೆ ಅಪಾರ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಶೈಕ್ಷಣಿಕ ಆಡಳಿತಾಧಿಕಾರಿ ಎ.ಎನ್.ರಾಮಚಂದ್ರ ಹೇಳಿದರು.
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ವತಿಯಿಂದ ಆಚಾರ್ಯ ತುಳಸಿ ರಾಷ್ಟ್ರೀಯ ವಾಣಿಜ್ಯ ಕಾಲೇಜಿನ ಸಹಯೋಗದಲ್ಲಿ ಸೋಮವಾರ ದೇವಂಗಿ ಆರ್. ರತ್ನಾಕರ್ ಅವರ ಸ್ಮಾರಕ ದತ್ತಿ ಅಂಗವಾಗಿ, ದತ್ತಿ ದಾನಿಗಳಾದ ಅಮರೇಂದ್ರ ಕಿರೀಟಿ ಅವರ ಆಶಯದಂತೆ ರಾಷ್ಟ್ರಕವಿ ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ವಿಶೇಷ ಉಪನ್ಯಾಸ ಹಾಗೂ ಆಯೇಶಭಿಯಾನೆ ಖಾಸಿಂಬಿ ಕೋಂ ಸಯದ್ ರಸೂಲ್ ಸಾಬ್ ಅಬ್ಬಲಗೆರೆ ಸ್ಮಾರಕ ದತ್ತಿ ಅಂಗವಾಗಿ, ದತ್ತಿ ದಾನಿಗಳಾದ ಅಬ್ಬಾಸ್ ಅಬ್ಬಲಗೆರೆ ಅವರ ಆಶಯದಂತೆ ಶಿಶುನಾಳ ಶರೀಫರ ಗೀತೆಗಳ ಗಾಯನ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಪ್ರಾಚೀನ ಕಾಲದಿಂದಲೂ ವಿಚಾರಗಳನ್ನು ಅಭಿವ್ಯಕ್ತಪಡಿಸುವ ಹಲವು ವಿಧಾನಗಳಲ್ಲಿ ದತ್ತಿ ಉಪನ್ಯಾಸಗಳು ಒಂದು. ವೈಚಾರಿಕ ನೆಲೆಯನ್ನು ಪಸರಿಸಲು ದತ್ತಿ ಕಾರ್ಯಕ್ರಮಗಳು ಪೂರಕವಾಗಿದೆ. ಹಿಂಜರಿಕೆಯಿಂದ ಯುವ ಸಮೂಹ ಹೊರಬರಬೇಕಿದೆ. ಇಂದಿನ ಜಾಗತಿಕ ಪರಿಸ್ಥಿತಿಯಲ್ಲಿ, ಯುದ್ಧಪೀಡಿತ ಪ್ರದೇಶದ ಯುವ ಸಮೂಹದ ತಲ್ಲಣಗಳು ಏನಾಗಿರಬಹುದು ಎಂಬುದು ವಿಮರ್ಶಿಸಬೇಕಿದೆ. ವೈಚಾರಿಕ ಪ್ರಜ್ಞೆ ಅಂತಹ ವಿಮರ್ಶಾತ್ಮಕ ಜ್ಞಾನವನ್ನು ನೀಡಲಿದೆ ಎಂದು ಹೇಳಿದರು.
ಇದನ್ನೂ ಓದಿ > ಜೆ.ಎನ್.ಎನ್.ಸಿ.ಇ ಕಾಲೇಜಿನಲ್ಲಿ ನಡೆದ ಎಐಸಿಟಿಇ ಬೂಟ್ ಕ್ಯಾಂಪ್’ ಹೇಗಿತ್ತು?, ಪ್ರಸ್ತುತಗೊಂಡ 50 ಕ್ಕೂ ಹೆಚ್ಚು ಯೋಜನೆಗಳು
ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಿ.ಮಂಜುನಾಥ ಮಾತನಾಡಿ, ಕನ್ನಡ ಭಾಷೆಯ ಜನರನ್ನು ಒಟ್ಟುಗೂಡಿಸುವ ಹಂಬಲವನ್ನು ಸಾರ್ಥಕಗೊಳಿಸುವ ಉದ್ದೇಶದಿಂದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರು ಕಸಾಪವನ್ನು ಸ್ಥಾಪಿಸಿದರು. ಹೊಸತಲೆಮಾರಿಗೆ ಸಾಹಿತ್ಯದ ಚಿಂತನೆಗಳ ಮೂಲಕ ಕ್ರೀಯಾಶೀಲತೆಯ ಬಿತ್ತುವ ಕಾರ್ಯವನ್ನು ದತ್ತಿಯ ಮೂಲಕ ಮಾಡುತ್ತಿದ್ದೇವೆ. ಭಾಷೆಯ ಬಗ್ಗೆ ಉದಾಸೀನ ಬೇಡ ಎಂದು ಹೇಳಿದರು.
ಇದನ್ನೂ ಓದಿ > ಎನ್ಇಎಸ್, ಕೋಣಂದೂರು ಪಿಯು ಕಾಲೇಜಿಗೆ 100% ಫಲಿತಾಂಶ
ಕುವೆಂಪು ಅವರ ವಿಚಾರ ಕ್ರಾಂತಿಗೆ ಆಹ್ವಾನ ಕುರಿತು ಸಹ್ಯಾದ್ರಿ ವಾಣಿಜ್ಯ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥರಾದ ಡಾ. ಪ್ರಕಾಶ್ ಮರ್ಗನಳ್ಳಿ ಮಾತನಾಡಿ, ಇಂದಿನ ತಲೆಮಾರು ಜನಸಮೂಹದ ಜೊತೆಗೆ ಸಂವಹನ ನಡೆಸಲು ನಿರಾಸಕ್ತರಾಗಿದ್ದಾರೆ. ಪರಂಪರೆಯ ಜ್ಞಾನವಿಲ್ಲದೆ, ಕೇವಲ ವರ್ತಮಾನದಲ್ಲಿ ಬದುಕಲು ಸಾಧ್ಯವಿಲ್ಲ. ಕುವೆಂಪು ಅವರನ್ನು ಹೊಗಳುವ ಬದಲು, ಅವರು ಪ್ರತಿಪಾದಿಸಿದ ಸಂಗತಿಗಳನ್ನು ಅರ್ಥೈಸಿಕೊಳ್ಳಬೇಕು. ವಾಟ್ಸ್ಆ್ಯಪ್ ವಿವಿಯ ಸಂಗತಿಗಳು ಸತ್ಯವಾಗಿ ಬದಲಾಗುತ್ತಿರುವ ಈ ಹೊತ್ತಿನಲ್ಲಿ, ಕುವೆಂಪು ಅವರ ವಿಚಾರಕ್ರಾಂತಿಗೆ ಆಹ್ವಾನ ಸದಾ ವಾಸ್ತವತೆಗೆ ಬಂದು ನಿಲ್ಲುತ್ತದೆ.
ಪರಕೀಯರಿಂದ ಮುಕ್ತಿ ಪಡೆಯುವುದು ಒಂದೇ ಭಾರತದ ಸ್ವಾತಂತ್ರ್ಯ ಚಳುವಳಿಯ ಆಶಯವಾಗಿರಲಿಲ್ಲ. ಬದಲಿಗೆ ಅತ್ಯುತ್ತಮ ಸಧೃಡ ಸಮಾಜ ನಿರ್ಮಾಣ ಮಾಡುವ ಕನಸು ಹೋರಾಟಗಾರರದಾಗಿತ್ತು. ಹಣ ಎಂದಿಗೂ ರಾಜಕೀಯ ವ್ಯವಸ್ಥೆಯನ್ನು ಆಳಬಾರದು ಎಂದು ಹೇಳುತ್ತಾ, ಆತ್ಮಶ್ರೀಗಾಗಿ ನಿರಂಕುಶಮತಿಗಳಾಗಿ ಎಂದು ಯುವ ಸಮೂಹಕ್ಕೆ ಕರೆ ನೀಡಿದವರು ಕುವೆಂಪು ಎಂದು ಹೇಳಿದರು.
ಸಂತ ಶಿಶುನಾಳ ಶರೀಫರ ಗೀತೆಗಳನ್ನು ಗಾಯಕಿ ನಳಿನಾಕ್ಷಿ ಹಾಡಿದರು. ಉಪನ್ಯಾಸಕರಾದ ಪ್ರವೀಣ್ ಬಿ.ಎನ್., ಗಾಯತ್ರಿ ಟಿ., ಚೈತ್ರಾ ಕೆ, ಕಸಾಪ ಪದಾಧಿಕಾರಿಗಳಾದ ಡಿ.ಗಣೇಶ್, ಅನುರಾಧ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು. ವಿದ್ಯಾರ್ಥಿನಿ ಅನನ್ಯ ನಿರೂಪಿಸಿದರು. ಉಪನ್ಯಾಸಕಿ ಶ್ರೀಲಲಿತ ಅಧ್ಯಕ್ಷತೆ ವಹಿಸಿದ್ದರು.














