ಶಿವಮೊಗ್ಗ: ತಂತ್ರಜ್ಞಾನ ಮತ್ತು ಎಐ ನೀಡುವ ಮಾಹಿತಿಯನ್ನು ಅಂಧತ್ವದಲ್ಲಿ ಸ್ವೀಕರಿಸದೆ, ವಾಸ್ತವತೆಯನ್ನು ವಿಮರ್ಶಾತ್ಮಕವಾಗಿ ವಿಶ್ಲೇಷಿಸಿ ಮನವರಿಕೆಯಾದ ವಿಚಾರಗಳನ್ನು ಸ್ವೀಕರಿಸುವ ಚಿಂತನಾ ಮನೋಭಾವ ಶಿಕ್ಷಕರಲ್ಲಿ ಅತ್ಯಗತ್ಯ ಎಂದು ರಾಷ್ಟ್ರೀಯ ಶಿಕ್ಷಣ ಸಮಿತಿ ಕಾರ್ಯದರ್ಶಿ ಎಸ್.ಎನ್.ನಾಗರಾಜ ಸಲಹೆ ಅಭಿಪ್ರಾಯಪಟ್ಟರು.
ನಗರದ ರಾಷ್ಟ್ರೀಯ ಔಷಧ ಮಹಾವಿದ್ಯಾಲಯದ ವತಿಯಿಂದ ಶನಿವಾರ ಕಾಲೇಜಿನ ಸಭಾಂಗಣದಲ್ಲಿ ಏರ್ಪಡಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ತಂತ್ರಜ್ಞಾನ ನೀಡಲಾಗದ ಮೌಲ್ಯಗಳನ್ನು ವಿದ್ಯಾರ್ಥಿಗಳಿಗೆ ನೀಡುವ ಜವಾಬ್ದಾರಿ ಶಿಕ್ಷಕರ ಮೇಲಿದೆ. ನೈತಿಕತೆ, ಸ್ಫೂರ್ತಿ ಮತ್ತು ಮಾನವೀಯತೆ ಯಂತಹ ಜೀವನ ಮೌಲ್ಯಗಳನ್ನು ಬೆಳೆಸುವ ಕೌಶಲ್ಯ ಶಿಕ್ಷಕರಲ್ಲಿ ಇರಬೇಕು. ಮಾಹಿತಿ ನೀಡುವುದು ಮಾತ್ರ ಶಿಕ್ಷಕರ ಕಾರ್ಯವಲ್ಲ, ವಿದ್ಯಾರ್ಥಿಗಳ ವ್ಯಕ್ತಿತ್ವವನ್ನು ರೂಪಿಸಿ, ಬದುಕಿನ ದಾರಿಯನ್ನು ತೋರಿಸುವುದು ಶಿಕ್ಷಕರ ನಿಜವಾದ ಕರ್ತವ್ಯ. ವಿದ್ಯಾರ್ಥಿಗಳ ಬದುಕಿನ ಅಂಧಕಾರವನ್ನು ಕಳೆಯುವ ಜ್ಞಾನದ ಬೆಳಕಾಗುವಂತಹ ವ್ಯಕ್ತಿತ್ವ ಶಿಕ್ಷಕರದಾಗಲಿ ಎಂದು ಹಾರೈಸಿದರು.
ಇದನ್ನೂ ಓದಿ > > ಜೀವ ಉಳಿಸುವ ಮಹಾಕಾರ್ಯಕ್ಕೆ ಪೊಲೀಸರ ಹೆಜ್ಜೆ, 73 ಮಂದಿ ರಕ್ತದಾನ
ತತ್ವಶಾಸ್ತ್ರದಲ್ಲಿ ಪಾಂಡಿತ್ಯ ಹೊಂದಿದ್ದ ಡಾ. ಸರ್ವಪಲ್ಲಿ ರಾಧಾಕೃಷ್ಣನ್ ಅವರು ಶ್ರೇಷ್ಠ ಶಿಕ್ಷಕರಾಗಿ ರೂಪುಗೊಂಡಿದ್ದರು. ಮೈಸೂರಿನಿಂದ ಅವರು ನಿರ್ಗಮಿಸುವ ಸಂದರ್ಭದಲ್ಲಿ ವಿದ್ಯಾರ್ಥಿಗಳೇ ಸಾರೋಟಿನ ನೊಗವನ್ನು ಎಳೆದು, ಅವರನ್ನು ಮೆರವಣಿಗೆಯಲ್ಲಿ ಬೀಳ್ಕೊಟ್ಟ ಸಂದರ್ಭ, ಅವರ ವ್ಯಕ್ತಿತ್ವ ವಿದ್ಯಾರ್ಥಿಗಳ ಮೇಲೆ ಬೀರಿದ್ದ ಪ್ರಭಾವಕ್ಕೆ ಸಾಕ್ಷಿಯಾಗಿದೆ. ರಾಷ್ಟ್ರಪತಿಯಾಗಿದ್ದ ಅವಧಿಯಲ್ಲಿಯೂ, ತಮ್ಮ ವೇತನದ ಬಹುಪಾಲು ಮೊತ್ತವನ್ನು ವಿದ್ಯಾರ್ಥಿಗಳ ಶೈಕ್ಷಣಿಕ ನೆರವಿಗಾಗಿ ಬಳಸಿದ ಅವರ ನಡೆ ಪ್ರೇರಣೀಯ ಎಂದು ಹೇಳಿದರು.
ಎನ್ಇಎಸ್ ಸಹ ಕಾರ್ಯದರ್ಶಿ ಡಾ.ಪಿ.ನಾರಾಯಣ್ ಮಾತನಾಡಿ, ಗುರುವನ್ನು ದೇವರಂತೆ ಪೂಜಿಸುವ ಸಂಸ್ಕಾರ ಮತ್ತು ಪರಂಪರೆ ನಮ್ಮದು. ಜ್ಞಾನವನ್ನು ಬೋಧಿಸುವುದರ ಜೊತೆಗೆ ಮನುಷ್ಯನೊಳಗಿನ ಮನುಷ್ಯತ್ವವನ್ನು ಜಾಗೃತಗೊಳಿಸಿ, ಸಮಾಜವನ್ನು ಕಟ್ಟುವ ಮಹತ್ತರ ಕಾರ್ಯವನ್ನು ಶಿಕ್ಷಕರು ನಿರಂತರವಾಗಿ ಮಾಡುತ್ತಿದ್ದಾರೆ. ಎಐ ಮನುಷ್ಯನ ಬುದ್ಧಿಮತ್ತೆಯನ್ನು ಬದಲಿಸುವ ತಂತ್ರಜ್ಞಾನವಾಗಿ ನೋಡುವ ಬದಲು, ಮಾನವನ ಸಾಮರ್ಥ್ಯವನ್ನು ವಿಸ್ತರಿಸಿ, ಜ್ಞಾನ ಮತ್ತು ಸೃಜನಶೀಲತೆಯನ್ನು ಮತ್ತಷ್ಟು ಪರಿಣಾಮಕಾರಿಯಾಗಿಸುವ ಸಹಾಯಕ ಶಕ್ತಿಯಾಗಿ ಬಳಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ > > ಹೊಳಲೂರಿನಲ್ಲಿ ಅಡಿಕೆ ಕಳ್ಳತನ, ಐವರು ಖದೀಮರು ಪೊಲೀಸ್ ಬಲೆಗೆ!
ಪ್ರಾಂಶುಪಾಲರಾದ ಡಾ.ಎಸ್.ಎನ್.ಶ್ರೀಹರ್ಷ ಮಾತನಾಡಿ, ತಂತ್ರಜ್ಞಾನ ಮತ್ತು ಡಿಜಿಟಲ್ ಸಾಧನಗಳು ಅಪಾರ ಪ್ರಮಾಣದ ಮಾಹಿತಿಯನ್ನು ಕ್ಷಣಾರ್ಧದಲ್ಲಿ ಒದಗಿಸುತ್ತಿದ್ದರೂ, ಶಿಕ್ಷಕರ ಸ್ಥಾನವನ್ನು ಅವು ಎಂದಿಗೂ ಸಂಪೂರ್ಣವಾಗಿ ಭರಿಸಲಾರವು ಎಂದರು.
ನಿವೃತ್ತ ಪ್ರಾಂಶುಪಾಲರಾದ ಡಾ.ಸಿ.ಎಸ್.ಶ್ರೀಧರ, ಡಾ.ಎ.ಸತೀಶ್ ಕುಮಾರ್ ಶೆಟ್ಟಿ, ಡಾ.ವಿಜಯಕುಮಾರ್, ಬಿಫಾರ್ಮ ವಿದ್ಯಾರ್ಥಿನಿ ಜ್ಯೋತಿ ಮಾತನಾಡಿದರು. ಇದೇ ವೇಳೆ ಉಪನ್ಯಾಸಕರು ಹಾಗೂ ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಿತು.














