ಶಿವಮೊಗ್ಗ : ತಾಲೂಕಿನ ಲಕ್ಕಿನಕೊಪ್ಪದಲ್ಲಿ ಜೋಕಾಲಿ ಆಡುವಾಗ ಆಕಸ್ಮಿಕವಾಗಿ ಕುತ್ತಿಗೆಗೆ ಕುಣಿಕೆ ಬಿಗಿದುಕೊಂಡು ಒಂಬತ್ತು ವರ್ಷದ ಬಾಲಕಿಯೊಬ್ಬಳು ಸಾವನ್ನಪ್ಪಿರುವ ದಾರುಣ ಘಟನೆ ಸಂಭವಿಸಿದೆ.
ಶಿವಮೊಗ್ಗದ ವಿದ್ಯಾನಗರದ ನಿವಾಸಿಯಾಗಿರುವ 9 ವರ್ಷದ ಪ್ರಣಮ್ಯ ಮೃತ ದುರ್ದೈವಿ. ಈ ಘಟನೆಯು ಮೂರು ದಿನಗಳ ಹಿಂದೆ ನಡೆದಿದ್ದು, ಪ್ರಕರಣವು ತಡವಾಗಿ ಬೆಳಕಿಗೆ ಬಂದಿದೆ.
ಬೇಸಿಗೆಯ ರಜೆ ಕಳೆಯುವ ಉದ್ದೇಶದಿಂದ ಪ್ರಣಮ್ಯ ಶಿವಮೊಗ್ಗ ತಾಲೂಕಿನ ಲಕ್ಕಿನಕೊಪ್ಪದಲ್ಲಿರುವ ತನ್ನ ಚಿಕ್ಕಮ್ಮನ ಮನೆಗೆ ತೆರಳಿದ್ದಳು. ಈ ವೇಳೆ ಮನೆಯ ಒಳಗಡೆ ಕೋಣೆಯ ಬಾಗಿಲನ್ನು ಹಾಕಿಕೊಂಡು, ಪಂಚೆಯನ್ನು ಬಳಸಿ ಜೋಕಾಲಿಯನ್ನು ಕಟ್ಟಿಕೊಂಡು ಆಟವಾಡುತ್ತಿದ್ದಳು. ಹೀಗೆ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಕಸ್ಮಿಕವಾಗಿ ಪಂಚೆಯು ಕುತ್ತಿಗೆಗೆ ಬಿಗಿದುಕೊಂಡು ಈ ಅವಘಡ ಸಂಭವಿಸಿದೆ.
ಇದನ್ನೂ ಓದಿ > ಶಿವಮೊಗ್ಗ, ಬಸ್ ನಿಲ್ದಾಣದಲ್ಲಿ ವಿಷ ಸೇವಿಸಿದ ಯುವಕ, ಆಸ್ಪತ್ರೆಯಲ್ಲಿ ಸಾವು!
ಚಿಕ್ಕಮ್ಮನ ಮನೆಯಲ್ಲಿ ರಜೆಯ ದಿನಗಳನ್ನು ಕಳೆಯಬೇಕಿದ್ದ ಬಾಲಕಿಯು ಆಟವಾಡುತ್ತಿದ್ದಾಗಲೇ ಸಾವನ್ನಪ್ಪಿರುವುದು ಕುಟುಂಬದಲ್ಲಿ ಶೋಕವನ್ನುಂಟುಮಾಡಿದೆ. ಇನ್ನೂ ಘಟನೆ ಸಂಬಂಧ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.
ಇದನ್ನೂ ಓದಿ > ಎಸ್.ಎಸ್.ಎಲ್.ಸಿ: ಎನ್ಇಎಸ್ ಶಾಲೆಗಳಿಗೆ ಉತ್ತಮ ಫಲಿತಾಂಶ















