ಶಿವಮೊಗ್ಗ: ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯ ಬೊಮ್ಮನಕಟ್ಟೆ ಚಾನಲ್ ಏರಿಯಾದ ಬಳಿ ಏಪ್ರಿಲ್ 24ರ ರಾತ್ರಿ ಮಂಗಳಮುಖಿಯೊಬ್ಬರನ್ನು ಅಪರಿಚಿತರು ಆಟೋದಲ್ಲಿ ಕರೆದುಕೊಂಡು ಬಂದು ಬೆದರಿಸಿ 4,000 ನಗದು, ಮೊಬೈಲ್, ಬಂಗಾರದ ಚೈನ್ ಮತ್ತು ಉಂಗುರಗಳನ್ನು ದೋಚಿದ್ದ ಪ್ರಕರಣಕ್ಕೆ ಸಂಬಂಧಿಸಿದ ಆರೋಪಿಯನ್ನು ಪ್ರಕರಣ ದಾಖಲಾಗಿ 12 ಗಂಟೆಯೊಳಗೆ ಪೊಲೀಸರು ಬಂಧಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗ, ಬಿರುಗಾಳಿ ಮಳೆಗೆ ಗ್ರಾಮಾಂತರದ ಹಲವೆಡೆ ಭಾರೀ ಹಾನಿ
ಈ ಸಂಬಂಧ ಏಪ್ರಿಲ್ 25ರಂದು ವಿನೋಬನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಆರೋಪಿ ಪತ್ತೆಗೆ ಜಿಲ್ಲಾ ಪೊಲೀಸ್ ಅಧೀಕ್ಷಕ ನಿಖಿಲ್ ಬಿ. ಮತ್ತು ಎಎಸ್ಪಿ ಕಾರಿಯಪ್ಪ ಅವರ ಮಾರ್ಗದರ್ಶನದಲ್ಲಿ, ಡಿವೈಎಸ್ಪಿ ಸಂಜೀವ್ ಕುಮಾರ್ ಹಾಗೂ ಇನ್ಸ್‌ಪೆಕ್ಟರ್ ಸುರೇಶ್ ಅವರ ಉಸ್ತುವಾರಿಯಲ್ಲಿ ಪಿಎಸ್‌ಐ ತಿರುಮಲೇಶ್ ಜಿ ಮತ್ತು ಸಿಬ್ಬಂದಿಯ ತಂಡ ರಚಿಸಲಾಗಿತ್ತು. ಈ ತಂಡ ಕಾರ್ಯಾಚರಣೆ ನಡೆಸಿ ಹಳೆ ಮಂಡ್ಲಿಯ ನಿವಾಸಿ ದೇವರಾಜ (27) ಎಂಬಾತನನ್ನು ಬಂಧಿಸಿದೆ.
ಇದನ್ನೂ ಓದಿ > ಗೋವರ್ಧನ ಟ್ರಸ್ಟ್‌ನಿಂದ ಗೋವುಗಳ ಸೇವೆಗೆ ಆಂಬುಲೆನ್ಸ್ ಸಮರ್ಪಣೆ, ಕೆ.ಈ. ಕಾಂತೇಶ್
ಬಂಧಿತ ದೇವರಾಜ್‌ನಿಂದ ಕೃತ್ಯಕ್ಕೆ ಬಳಸಿದ 3 ಲಕ್ಷ ಮೌಲ್ಯದ ಆಟೋ, 20,000 ಮೌಲ್ಯದ ಮೊಬೈಲ್ ಹಾಗೂ ಕೃತ್ಯಕ್ಕೆ ಬಳಸಿದ್ದ ಚಾಕುವನ್ನು ವಶಕ್ಕೆ ಪಡೆಯಲಾಗಿದೆ. ದರೋಡೆ ನಡೆದ ಕೆಲವೇ ಗಂಟೆಗಳಲ್ಲಿ ಆರೋಪಿಯನ್ನು ಪತ್ತೆಹಚ್ಚಲಾಗಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಕಾರ್ಯಾಚರಣೆಯಲ್ಲಿ ಸಿಬ್ಬಂದಿ ರಾಜು.ಕೆ.ಆರ್, ಚಂದ್ರಾನಾಯ್ಕ.ಬಿ, ವಿಜಯಕುಮಾರ್, ಮನುಶಂಕರ ಪಾಲ್ಗೊಂಡಿದ್ದರು.
ತನಿಖಾ ತಂಡದ ಉತ್ತಮ ಕಾರ್ಯವನ್ನು ಜಿಲ್ಲಾ ರಕ್ಷಣಾಧಿಕಾರಿ ಪ್ರಶಂಸಿಸಿ ಅಭಿನಂದಿಸಿದ್ದಾರೆ.














