ಶಿವಮೊಗ್ಗ : ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಬಳಿ ಬೈಕ್ ಡಿಕ್ಕಿಯಾಗಿ ಚಿರತೆಯೊಂದು ಸಾವನ್ನಪ್ಪಿರುವ ಘಟನೆ ಸಂಭವಿಸಿದೆ.
ಶಿವಮೊಗ್ಗ ಮಾರ್ಗದಿಂದ ತೀರ್ಥಹಳ್ಳಿ ಕಡೆಗೆ ಬೈಕ್ ಸವಾರ ಚಲಿಸುತ್ತಿದ್ದಾಗ, ಮಂಡಗದ್ದೆ ಸಮೀಪದ ಅರಣ್ಯ ಭಾಗದಿಂದ ಚಿರತೆಯು ಹಠಾತ್ತನೆ ರಸ್ತೆ ದಾಟಲು ಅಡ್ಡ ಬಂದಿದೆ. ಈ ವೇಳೆ ಸವಾರನಿಗೆ ಬೈಕ್ ನಿಯಂತ್ರಿಸಲು ಸಾಧ್ಯವಾಗದೆ ಚಿರತೆಗೆ ಡಿಕ್ಕಿ ಹೊಡೆದಿದ್ದಾನೆ. ಡಿಕ್ಕಿಯ ರಭಸಕ್ಕೆ ಚಿರತೆಯು ಗಂಭೀರವಾಗಿ ಗಾಯಗೊಂಡು ಸ್ಥಳದಲ್ಲೇ ಮೃತಪಟ್ಟಿದೆ. ಇದರ ಪರಿಣಾಮ ಬೈಕ್ ಸಮೇತ ಕೆಳಗೆ ಬಿದ್ದ ಸವಾರನಿಗೆ ಗಂಭೀರ ಗಾಯಗಳಾಗಿದ್ದು ಆತನನ್ನು ಹೆಚ್ಚಿನ ಚಿಕಿತ್ಸೆಗಾಗಿ ಶಿವಮೊಗ್ಗದ ಆಸ್ಪತ್ರೆಗೆ ದಾಖಲಿಸಲಾಗಿದೆ.
ಇದನ್ನೂ ಓದಿ > ಪ್ರೇಯಸಿಯೊಂದಿಗೆ ಸೇರಿ ಗಂಡನ ಕೊಲೆ, ಗಲ್ಲು ಶಿಕ್ಷೆ ವಿಧಿಸಿದ ಕೋರ್ಟ್
ವಿಷಯ ತಿಳಿದ ಕೂಡಲೇ ಸ್ಥಳಕ್ಕೆ ಗಾಜನೂರು ಆರ್ ಎಫ್ ಓ ವಿನಯ್ ಕುಮಾರ್ ಸೇರಿದಂತೆ ಅರಣ್ಯ ಇಲಾಖೆಯ ಅಧಿಕಾರಿಗಳು ಧಾವಿಸಿ ಪರಿಶೀಲನೆ ನಡೆಸಿದ್ದಾರೆ.














