ಶಿವಮೊಗ್ಗ : ಬೇಡಿದ ವರವ ಕರುಣಿಸುವ ದೇವಿ ಎಂದೇ ಭಕ್ತರಿಂದ ಪೂಜಿಸಲ್ಪಡುವ ಶ್ರೀ ಕ್ಷೇತ್ರ ಸಿಗಂದೂರು ಚೌಡಮ್ಮ ದೇವಿಯ ಸಂಕ್ರಾಂತಿ ಜಾತ್ರ ಮಹೋತ್ಸವ ಬುಧವಾರ ಸಂಭ್ರಮದಿಂದ ಆರಂಭವಾಯಿತು. ಚೌಡಮ್ಮ ದೇವಿಯ ಮೂಲಸ್ಥಾನ ಶರಾವತಿ ಹಿನ್ನೀರಿನಲ್ಲಿ ಮುಳುಗಡೆಯಾಗಿರುವ ಸೀಗೆ ಕಣಿವೆಯಲ್ಲಿ ಬೆಳಗ್ಗೆಯಿಂದ ಚಂಡಿಕಾ ಹೋಮ, ರುದ್ರಾಭಿಷೇಕ ಸೇರಿದಂತೆ ವಿವಿಧ ಪೂಜಾ ವಿಧಿವಿಧಾನಗಳು ಜರುಗಿದವು.
ಸೀಗೆ ಕಣಿವೆಯ ಮೂಲ ಸ್ಥಳದಲ್ಲಿ ಹಿನ್ನೀರು ಇಳಿದಿದ್ದು, ಮೂಲ ಸ್ಥಳದಲ್ಲಿ ನಿರ್ಮಾಣ ಮಾಡಿರುವ ಶಿಲಾ ಮಂಟಪದೊಳಗೆ ಮೂಲ ಮೂರ್ತಿಗೆ ಅಭಿಷೇಕ ಪೂಜೆಗಳನ್ನು ನಡೆಸಲಾಯಿತು. ಇದಕ್ಕೂ ಮುನ್ನ ಅನುವಂಶಿಕ ಧರ್ಮದರ್ಶಿ ಡಾ.ಎಸ್. ರಾಮಪ್ಪ ,ಮೀನಾಕ್ಷಮ್ಮ ದಂಪತಿ ಹಾಗೂ ಅವರ ಪುತ್ರರಾದ ರವಿಕುಮಾರ್ ದಂಪತಿ ಅವರು ಚಂಡಿಕಾ ಹೋಮದಲ್ಲಿ ಭಾಗಿಯಾಗಿ ನಾಡಿಗೆ ಒಳಿತಾಗಲಿ ಎಂದು ಪ್ರಾರ್ಥಿಸಿದರು. ಈ ಸಂದರ್ಭ ರಾಜ್ಯದ ವಿವಿಧೆಡೆಯಿಂದ ಬಂದಿದ್ದ ಭಕ್ತರು ಹಾಗೂ ಕರೂರು ಮತ್ತು ಬಾರಂಗಿ ಹೋಬಳಿಯ ಜನರು ಭಾಗಿಯಾಗಿ ಪೂಜಾ ಕಾರ್ಯಕ್ರಮ ವೀಕ್ಷಿಸಿದರು. ಇದಾದ ಬಳಿಕ ಶರಾವತಿ ಹಿನ್ನೀರಲ್ಲಿಯೇ ನಿರ್ಮಾಣ ಮಾಡಿರುವ ಶಿಲಾಮಂಟಪದಲ್ಲಿ ಅಭಿಷೇಕ ಹಾಗೂ ವಿವಿಧ ಧಾರ್ಮಿ ವಿಧಿವಿಧಾನಗಳನ್ನು ಧರ್ಮದರ್ಶಿಗಳ ಕುಟುಂಬದ ಸಮ್ಮುಖದಲ್ಲಿ ಅರ್ಚಕರು ನೆರವೇರಿಸಿದರು. ಶರಾವತಿ ನದಿ ತಟದಲ್ಲಿ ನಡೆದ ಈ ಉತ್ಸವಕ್ಕೆ ಅಪಾರ ಸಂಖ್ಯೆಯಲ್ಲಿ ನೆರೆದಿದ್ದ ಮಹಿಳೆಯರೂ ಸೇರಿದಂತೆ ಸಹಸ್ರಾರು ಜನರು ಸಾಕ್ಷಿಯಾದರು.
ದೇವಿಯ ಮೂಲ ಸ್ಥಾನದಲ್ಲಿ ನಡೆದ ಪೂಜೆಯ ಬಳಿಕ ಜ್ಯೋತಿಯೊಂದಿಗೆ ದೇವಿಯ ಉತ್ಸವ ಮೂರ್ತಿಯನ್ನು ಮೆರವಣಿಗೆ ಮೂಲಕ ಸಿಗಂದೂರು ದೇವಸ್ಥಾನಕ್ಕೆ ಕರೆತರಲಾಯಿತು. ಶಾಸಕ ಬೇಳೂರು ಗೋಪಾಲಕೃಷ್ಣ ಅವರು, ಜ್ಯೋತಿ ಬೆಳಗುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು.
ಪೂಜೆಯ ಸಂದರ್ಭ ಶಿಕಾರಿಪುರ ತಾಲೂಕು ಕಡೇನಂದಿಹಳ್ಳಿ ಮಠದ ರೇವಣಸಿದ್ದೇಶ್ವರ ಶಿವಾಚಾರ್ಯ ಸ್ವಾಮೀಜಿ, ಶಿವಮೊಗ್ಗ ಗ್ರಾಮಾಂತರ ಶಾಸಕರಾದ ಶ್ರೀಮತಿ ಶಾರದಾ ಪೂರ್ಯನಾಯ್ಕ, ಎಂಎಡಿಬಿ ಅಧ್ಯಕ್ಷ ಆರ್.ಎಂ.ಮಂಜುನಾಥ ಗೌಡ, ಡಿಸಿಸಿ ಬ್ಯಾಂಕ್ ನಿರ್ದೇಶಕ ಹಾಗೂ ಸಮಾಜ ಸೇವಕ ಎಂ.ಶ್ರೀಕಾಂತ್, ಹೊಳೆಕೊಪ್ಪ ಬೀರಪ್ಪ ದಂಪತಿ, ನಿರಂಜನ್ ಕುಪ್ಪಗಡ್ಡೆ ದಂಪತಿ ಮತ್ತು ಕುಟುಂಬದವರು ಭಾಗವಹಿಸಿದ್ದರು. ಕಲಸೆ ಚಂದ್ರಪ್ಪ, ಅನಿತಾಕುಮಾರಿ, ಹೊಳೆಯಪ್ಪ, ನಾಗರಾಜ್ ಕೈಸೋಡಿ, ಜಾಕಿ ಗಣೇಶ್ ಸೇರಿದಂತೆ ಅನೇಕರು ಭಾಗವಹಿಸಿದ್ದರು.













