ಶಿವಮೊಗ್ಗ : ಮೇ 20ರಿಂದ 24 ಗಂಟೆಗಳ ಕಾಲ ಔಷಧಿ ಅಂಗಡಿಗಳನ್ನು ಮುಚ್ಚಿ ಮುಷ್ಕರ ಹಮ್ಮಿಕೊಳ್ಳಲಾಗಿದೆ ಎಂದು ಶಿವಮೊಗ್ಗ ಜಿಲ್ಲಾ ಔಷಧ ವ್ಯಾಪಾರಿಗಳ ಸಂಘದ ಅಧ್ಯಕ್ಷ ಎಸ್.ಪಿ. ಮಧುಕರ್ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಆನ್ಲೈನ್ ಔಷಧ ಮಾರಾಟವನ್ನು ವಿರೋಧಿಸಿ ಔಷಧಿ ವ್ಯಾಪಾರಿಗಳ ಸಮಸ್ಯೆಗಳ ಬಗೆಹರಿಸುವಂತೆ ಒತ್ತಾಯಿಸಿ ಈ ಮುಷ್ಕರವನ್ನು ಹಮ್ಮಿಕೊಳ್ಳಲಾಗಿದೆ. ಆಲ್ ಇಂಡಿಯಾ ಆರ್ಗನೈಜೇಷನ್ ಆಫ್ ಕೆಮಿಸ್ಟ್ ಅಂಡ್ ಡ್ರಗ್ಗಿಸ್ಟ್ ಸಂಸ್ಥೆ ಮತ್ತು ರಾಜ್ಯಘಟಕದ ಸಹಭಾಗಿತ್ವದಲ್ಲಿ ಈ ಮುಷ್ಕರಕ್ಕೆ ಕರೆ ನೀಡಲಾಗಿದೆ. ಮೇ20ರಿಂದ 24 ಗಂಟೆಗಳ ಕಾಲ ಮುಷ್ಕರ ಮುಂದುವರೆಯುತ್ತದೆ ಎಂದರು.
-
ಇದನ್ನೂ ಓದಿ > ಶಿವಮೊಗ್ಗ, ಮಳೆಗಾಳಿಗೆ ಉರುಳಿದ ಮರ, ಗಂಟೆಗಟ್ಟಲೇ ರೈಲು ಸಂಚಾರದಲ್ಲಿ ವ್ಯತ್ಯಯ!
-
ಇದನ್ನೂ ಓದಿ >ಮೇ.20ರಂದು ಶಿವಮೊಗ್ಗ ಗ್ರಾಮೀಣ ಪ್ರದೇಶಗಳಲ್ಲಿ ಕರೆಂಟ್ ಇರಲ್ಲ, ಎಲ್ಲೇಲ್ಲಿ?
ಆನ್ಲೈನ್ ಔಷಧ ಮಾರಾಟವನ್ನು ನಮ್ಮ ಸಂಘವು ತೀವ್ರವಾಗಿ ವಿರೋಧಿಸುತ್ತದೆ. ಔಷಧಿಗಳು ಸಾಮಾನ್ಯ ವಾಣಿಜ್ಯ ವಸ್ತುಗಳಲ್ಲ. ಅವುಗಳಿಗೆ ಕಟ್ಟುನಿಟ್ಟಿನ ನಿಯಂತ್ರಣ ಮತ್ತು ಜವಾಬ್ದಾರಿಯುತ ವಿತರಣೆ ಅಗತ್ಯವಿದೆ. ಆದರೆ ಆನ್ಲೈನ್ನಲ್ಲಿ ಇದು ಸಾಧ್ಯವಾಗುವುದಿಲ್ಲ. ಔಷಧಿಗಳ ದುರುಪಯೋಗವಾಗುತ್ತಿದೆ. ಎ.ಐ. ಬಳಸಿ ನಕಲಿ ಪ್ರಿಸ್ಕ್ರಿಪ್ಷೆನ್ಗಳನ್ನು ಬಳಸಬಹುದಾಗಿದೆ. ಅಲ್ಲದೆ ಅಸುರಕ್ಷಿತ ಔಷಧಿಗಳ ಬಳಕೆಯಾಗುವ ಸಾಧ್ಯತೆಯೂ ಇದೆ. ಆದ್ದರಿಂದ ಆನ್ಲೈನ್ ಔಷಧ ಮಾರಾಟ ರದ್ದಾಗಬೇಕು ಎಂಬುದು ನಮ್ಮ ಪ್ರಮುಖ ಬೇಡಿಕೆಯಾಗಿದೆ ಎಂದರು.
ಈಗಾಗಲೇ ಕೇಂದ್ರ ಸರ್ಕಾರಕ್ಕೂ ನಾವು ಅನೇಕ ಬಾರಿ ಮನವಿ ಸಲ್ಲಿಸಿದ್ದೇವೆ. ಆದರೆ ನಮಗೆ ಪರಿಹಾರ ದೊರೆತ್ತಿಲ್ಲ. ಆದ್ದರಿಂದ ಜಿಎಸ್ಆರ್ 817 ದಿನಾಂಕ 20-08-2018ನ್ನು ಹಿಂತೆಗೆದುಕೊಳ್ಳಬೇಕು. ಮತ್ತು ಜಿಎಸ್ಆರ್-220 ದಿನಾಂಕ 26-03-2020ನ್ನು ರದ್ದಪಡಿಸಬೇಕು ಎಂದು ಆಗ್ರಹಿಸಿದರು.
ಎಸ್.ಚಂದ್ರಶೇಖರ್ ಮಾತನಾಡಿ, ಜನೌಷಧಿ ಕೇಂದ್ರಗಳಲ್ಲೂ ಕೂಡ ಬೇರೆ ಔಷಧಿಗಳು ಮಾರಾಟವಾಗುತ್ತಿವೆ. ಇದು ತಪ್ಪಬೇಕು. ಆನ್ಲೈನ್ ಔಷಧ ಮಾರಾಟ ಸಂಪೂರ್ಣ ಬಂದ್ ಆಗಬೇಕು. ಆನ್ಲೈನ್ ಮೂಲಕ ಮಾದಕ ಔಷಧಿಗಳು ಕೂಡ ಸರಬರಾಜಾಗುವ ಸಾಧ್ಯತೇಯೇ ಹೆಚ್ಚಿದೆ. ಆದ್ದರಿಂದ ನಾವು ಜಿಲ್ಲೆಯಲ್ಲಿ ಮೇ20ರಂದು ಔಷಧಿ ಅಂಗಡಿಗಳನ್ನು ಬಂದ್ಮಾಡಿ, ಸರ್ಕಾರದ ಗಮನ ಸೆಳೆಯುತ್ತಿದ್ದೇವೆ. ಇದರಿಂದ ಸಾರ್ವಜನಿಕರಿಗೆ ಉಂಟಾಗುವ ತೊಂದರೆಗೆ ಸಂಘ ವಿಷಾದ ವ್ಯಕ್ತಪಡಿಸುತ್ತದೆ. ಆದರೆ ಆಸ್ಪತ್ರೆಯಲ್ಲಿರುವ ಒಳರೋಗಿಗಳಿಗೆ ಯಾವುದೇ ತೊಂದರೆ ಆಗುವುದಿಲ್ಲ ಎಂದ ಅವರು, ಅಪೆಲೋ ಔಷಧಿ ವ್ಯಾಪಾರಿಗಳು ಹಾಗೂ ಮೆಡ್ಪ್ಲಸ್ ಔಷಧಿ ಕಂಪನಿಗಳು ನಮ್ಮ ಮುಷ್ಕರಕ್ಕೆ ಬೆಂಬಲ ನೀಡಲಿದ್ದಾರೆ ಎಂದರು.
ಪತ್ರಿಕಾಗೋಷ್ಠಿಯಲ್ಲಿ ಔಷಧಿ ವ್ಯಾಪಾರಿಗಳ ಸಂಘದ ಕಾರ್ಯದರ್ಶಿ ವೆಂಕಟೇಶ್ ಇ.ಜಿ., ಮಂಜುನಾಥ್ ಎಂ.ಎಲ್. ವಿವೇಕಾನಂದ್ ನಾಯಕ್, ಎಂ.ಶಂಕರ್, ಮಹಮ್ಮದ್ ಕೈಮ್, ರಮೇಶ್, ಪ್ರಕಾಶ್, ಉಮೇಶ್, ಸತೀಶ್, ಅನಿಲ್, ಭವಾನಿ ಮುಂತಾದವರು ಉಪಸ್ಥಿತರಿದ್ದರು.















