ಶಿವಮೊಗ್ಗ: ನಗರದಲ್ಲಿ ನಂಬರ್ ಪ್ಲೇಟ್ ಇಲ್ಲದೇ ಸುತ್ತಾಡುತ್ತಿದ್ದ 74 ದ್ವಿಚಕ್ರ ವಾಹನಗಳನ್ನು ಪೊಲೀಸರು ವಿಶೇಷ ಕಾರ್ಯಾಚರಣೆ ನಡೆಸುವ ಮೂಲಕ ವಶಕೆ ಪಡೆದು ದಂಡ ವಿಧಿಸಿ ಬಿಡುಗಡೆ ಮಾಡಲಾಗಿದೆ.
ಇತ್ತೀಚೆಗೆ ನಗರದಲ್ಲಿ ಇ-ಚಲನ್ ಸೇರಿದಂತೆ ಸಂಚಾರ ನಿಯಮ ಉಲ್ಲಂಘನೆಗಳಿಂದ ತಪ್ಪಿಸಿಕೊಳ್ಳುವ ಉದ್ದೇಶದಿಂದ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ (ಡಿಫೆಕ್ಟಿವ್) ನಂಬರ್ ಪ್ಲೇಟ್ ಅಳವಡಿಸಿ ಕೆಲವರು ವಾಹನಗಳಲ್ಲಿ ಸಂಚರಿಸುತ್ತಿದ್ದರು.
ಇದನ್ನೂ ಓದಿ > ಸಿಇಟಿಯಲ್ಲಿ ಕಡಿಮೆ ಅಂಕ, ವಿಷ ಸೇವಿಸಿದ್ದ ಯುವಕ ಸಾವು!
ಪೂರ್ವ ಸಂಚಾರಿ ಪೊಲೀಸ್ ಠಾಣೆಯಲ್ಲಿ ನಂಬರ್ ಪ್ಲೇಟ್ ಇಲ್ಲದೆ ಅಥವಾ ನಿಯಮಬಾಹಿರ (ಡಿಫೆಕ್ಟಿವ್) 74 ದ್ವಿಚಕ್ರ ವಾಹನಗಳ ತಪಾಸಣೆ ನಡೆಸಿದ ಜಿಲ್ಲಾ ರಕ್ಷಣಾಧಿಕಾರಿ ನಿಖಿಲ್ ಬಿ ಅವರು, ವಾಹನ ಸವಾರರಿಗೆ ಖಡಕ್ ಎಚ್ಚರಿಕೆ ನೀಡಿದರು.
ಇದು ಕೊನೆಯ ಎಚ್ಚರಿಕೆ. ಸದ್ಯಕ್ಕೆ ವಾಹನ ಮಾಲೀಕರಿಗೆ ದಂಡ ವಿಧಿಸಿ, ನೋಟಿಸ್ ನೀಡಿ ವಾಹನಗಳನ್ನು ಹಿಂತಿರುಗಿಸಲಾಗಿದೆ. ಆದರೆ ಮುಂದಿನ ದಿನಗಳಲ್ಲಿ ಇದೇ ರೀತಿಯ ಉಲ್ಲಂಘನೆ ಕಂಡುಬಂದರೆ ನೇರವಾಗಿ ಎಫ್ಐಆರ್ ದಾಖಲಿಸಿ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ > ಸಾಗರ ಬಂದ್, ಟ್ರ್ಯಾಕ್ಟರ್ಗಳ ರ್ಯಾಲಿ, ಹೇಗಿತ್ತು ಬಂದ್?
ನಂಬರ್ ಪ್ಲೇಟ್ ಇಲ್ಲದ ಅಥವಾ ನಿಯಮಬಾಹಿರ ನಂಬರ್ ಪ್ಲೇಟ್ ಹೊಂದಿರುವ ವಾಹನಗಳು ಅಪರಾಧ ಕೃತ್ಯಗಳಲ್ಲಿ ಹೆಚ್ಚಾಗಿ ಬಳಕೆಯಾಗುವ ಸಾಧ್ಯತೆ ಇರುವುದರಿಂದ ಈ ಕಾರ್ಯಾಚರಣೆ ನಡೆಸಲಾಗಿದೆ ಎಂದರು.
ಟ್ರಾಫಿಕ್ ಪೊಲೀಸ್ ಠಾಣೆಯ ಇನ್ಸ್ಪೆಕ್ಟರ್ಗಳು, ಸಬ್ಇನ್ಸ್ಪೆಕ್ಟರ್ಗಳು, ಸಿಬ್ಬಂದಿ ಸೇರಿದಂತೆ ಎಲ್ಲಾ ಪೊಲೀಸ್ ಸಿಬ್ಬಂದಿ ಉತ್ತಮವಾಗಿ ಕಾರ್ಯನಿರ್ವಹಿಸಿದ್ದಾರೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.















