ಶಿವಮೊಗ್ಗ: ಕಾವೇರಿ ನದಿ ನೀರಿನ ಹಂಚಿಕೆ ವಿಚಾರದಲ್ಲಿ ರಾಜ್ಯ ಸರ್ಕಾರದ ವೈಫಲ್ಯವನ್ನು ಖಂಡಿಸಿ ಜುಲೈ 31ರಂದು ಮಂಡ್ಯದಲ್ಲಿ ಭಾರತೀಯ ಜನತಾ ಪಕ್ಷದ ವತಿಯಿಂದ ಭಾರೀ ಪ್ರತಿಭಟನೆ ನಡೆಸಲಾಗುತ್ತದೆ ಎಂದು ಶಾಸಕ ಹಾಗೂ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ತಿಳಿಸಿದ್ದಾರೆ.
ಇಂದು ಶಿವಮೊಗ್ಗದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಈ ಪ್ರತಿಭಟನೆಯನ್ನು ತಮ್ಮ ನೇತೃತ್ವದಲ್ಲಿ ಹಾಗೂ ವಿಪಕ್ಷ ನಾಯಕ ಆರ್. ಅಶೋಕ್ ಅವರ ಸಹಭಾಗಿತ್ವದಲ್ಲಿ ನಡೆಸಲಾಗುವುದು ಎಂದು ತಿಳಿಸಿದರು. ರೈತ ಸಂಘಟನೆಗಳು ಹಾಗೂ ವಿವಿಧ ಸಂಘ-ಸಂಸ್ಥೆಗಳು ಈ ಹೋರಾಟದಲ್ಲಿ ಭಾಗವಹಿಸಿ, ಸಂಕಷ್ಟದಲ್ಲಿರುವ ರೈತರ ಪರವಾಗಿ ಧ್ವನಿಯಾಗಬೇಕೆಂದು ಮನವಿ ಮಾಡಿದರು.
ರಾಜ್ಯ ಸರ್ಕಾರದ ವಿರುದ್ಧ ಟೀಕೆ
ಕಾವೇರಿ ನೀರಿನ ವಿಷಯದಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಸಂಪೂರ್ಣವಾಗಿ ವಿಫಲರಾಗಿದ್ದಾರೆ ಎಂದು ಆರೋಪಿಸಿದ ವಿಜಯೇಂದ್ರ, ಸಿಡಬ್ಲ್ಯುಆರ್‌ಸಿ (Cauvery Water Regulation Committee) ಮುಂದೆ ವಾದ ಮಂಡಿಸಲು ನಿಯೋಜಿತ ವಕೀಲರು ಮತ್ತು ಅಧಿಕಾರಿಗಳು ರಾಜ್ಯದ ನೀರಿನ ಲಭ್ಯತೆ ಕುರಿತು ಸಮಗ್ರ ಮಾಹಿತಿ ನೀಡುವಲ್ಲಿ ವಿಫಲರಾಗಿದ್ದಾರೆ ಎಂದು ಹೇಳಿದರು.
ಕರ್ನಾಟಕದ ರೈತರು ಈಗಾಗಲೇ ಮಳೆಯ ಕೊರತೆಯಿಂದ ಸಂಕಷ್ಟದಲ್ಲಿದ್ದಾರೆ. ವಿಶೇಷವಾಗಿ ಕಾವೇರಿ ಕಣಿವೆಯ ರೈತರು ಬೆಳೆ ಬಿತ್ತನೆಗೂ ಅಸಮರ್ಥರಾಗಿರುವ ಪರಿಸ್ಥಿತಿ ನಿರ್ಮಾಣವಾಗಿದೆ. ಇಂತಹ ಸಮಯದಲ್ಲಿ ಸಿಡಬ್ಲ್ಯುಆರ್‌ಸಿ ಸೂಚನೆಗೂ ಮುನ್ನವೇ ತಮಿಳುನಾಡಿಗೆ ನೀರು ಬಿಡುಗಡೆ ಮಾಡಿರುವುದು ರಾಜ್ಯ ಸರ್ಕಾರದ ನಿರ್ಲಕ್ಷ್ಯವನ್ನು ತೋರಿಸುತ್ತದೆ ಎಂದು ಅವರು ಕಿಡಿಕಾರಿದರು.
ಇದನ್ನೂ ಓದಿ > > ಹೊಯ್ಸಳ, ಕೆಳದಿ ಚೆನ್ನಮ್ಮ ಶೌರ್ಯ ಪ್ರಶಸ್ತಿಗೆ ಅರ್ಜಿ ಆಹ್ವಾನ, ಯಾರೆಲ್ಲ ಅರ್ಜಿ ಸಲ್ಲಿಸಬಹುದು?
“ವಾಸ್ತವಾಂಶವನ್ನು ತಿಳಿಸಬೇಕಿತ್ತಲ್ಲವೇ?”
ರಾಜ್ಯದ ವಾಸ್ತವ ಪರಿಸ್ಥಿತಿಯನ್ನು ಸಿಡಬ್ಲ್ಯುಆರ್‌ಸಿಗೆ ಸರಿಯಾಗಿ ತಿಳಿಸಬೇಕಾಗಿತ್ತು. ಆದರೆ ಅದನ್ನು ಮಾಡಲು ಸರ್ಕಾರ ವಿಫಲವಾಗಿದೆ ಎಂದು ಅವರು ಪ್ರಶ್ನಿಸಿದರು. ಕಾವೇರಿ ಕಣಿವೆಯ ಜನರು ಕುಡಿಯುವ ನೀರಿಗೂ ತೊಂದರೆ ಅನುಭವಿಸುತ್ತಿರುವ ಸಂದರ್ಭದಲ್ಲಿ, ರೈತರು ಬಿತ್ತನೆ ಮಾಡಬಾರದು ಎಂದು ಮುಖ್ಯಮಂತ್ರಿ ನೀಡಿರುವ ಹೇಳಿಕೆ ಮತ್ತಷ್ಟು ಆತಂಕಕ್ಕೆ ಕಾರಣವಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಸರ್ಕಾರವು ರಾಜ್ಯದ ರೈತರಿಗೆ ಮೋಸ ಮಾಡಿದ್ದು, ಯುಪಿಎ ಮೈತ್ರಿ ಪಾಲುದಾರರಾದ ತಮಿಳುನಾಡು ಮುಖ್ಯಮಂತ್ರಿಯನ್ನು ಸಂತೋಷಪಡಿಸಲು ಈ ಕ್ರಮ ಕೈಗೊಂಡಿದೆ ಎಂದು ಆರೋಪಿಸಿದರು.
“ಮೊದಲು ಕರ್ನಾಟಕಕ್ಕೆ ನೀರು, ಬಳಿಕ ತಮಿಳುನಾಡು”
ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ರಾಜ್ಯದ ರೈತರ ಸಂಕಷ್ಟವನ್ನು ಅರ್ಥಮಾಡಿಕೊಂಡು ಕ್ರಮ ಕೈಗೊಳ್ಳಬೇಕು. ಕರ್ನಾಟಕದಲ್ಲಿ ನೀರಿನ ಲಭ್ಯತೆ ಸಮರ್ಪಕವಾಗಿದ್ದರೆ ಮಾತ್ರ ತಮಿಳುನಾಡಿಗೆ ನೀರು ಬಿಡುಗಡೆ ಮಾಡುವ ನಿರ್ಧಾರ ಕೈಗೊಳ್ಳಬೇಕು ಎಂದು ವಿಜಯೇಂದ್ರ ಆಗ್ರಹಿಸಿದರು.
ಇದನ್ನೂ ಓದಿ > > ವಿಮಾನ ಟಿಕೆಟ್ ಕೊಡುವುದಾಗಿ ಹೇಳಿ 11 ಲಕ್ಷ ರೂ. ವಂಚನೆ!
ಕಾಂಗ್ರೆಸ್ ಭವಿಷ್ಯ ಕುರಿತು ಭವಿಷ್ಯವಾಣಿ
ಇದೇ ವೇಳೆ ರಾಜಕೀಯ ಬೆಳವಣಿಗೆಗಳ ಕುರಿತು ಪ್ರತಿಕ್ರಿಯಿಸಿದ ಅವರು, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಚುನಾವಣಾ ರಾಜಕಾರಣದಿಂದ ಹಿಂದೆ ಸರಿಯುವ ನಿರ್ಧಾರ ಕೈಗೊಂಡಿರುವುದರಿಂದ 2028ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಪಕ್ಷದ ಸ್ಥಾನಗಳು 50-60ಕ್ಕೆ ಇಳಿಯಲಿವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ
ಬಾಂಗ್ಲಾ ಅಕ್ರಮ ನುಸುಳುಕೋರರನ್ನು ತಡೆಯುವ ಸಲುವಾಗಿ ದನಿ ಎತ್ತಿದರೆ ಅಂತಹ ವೈದ್ಯರನ್ನೇ ದಮನಿಸುವ ಕೆಲಸ ಮಾಡಿದ್ದಾರೆ. ವೈದ್ಯರ ವಿರುದ್ಧ ಎಫ್.ಐ.ಆರ್. ದಾಖಲಿಸಲಾಗಿದೆ. ಇದರಿಂದ ರಾಜ್ಯ ಕಾಂಗ್ರೆಸ್ ಸರ್ಕಾರದ ನಿಲುವು ಸ್ಪಷ್ಟವಾಗುತ್ತಿದೆ. ರಾಜ್ಯ ಸರ್ಕಾರ ಅಲ್ಪಸಂಖ್ಯಾತರನ್ನು ಓಲೈಸುವ ಕೆಲಸ ಮಾಡುತ್ತಿದೆ ಎಂದರು.














