ಹೊಳೆಹೊನ್ನೂರು: ಕುಡಿದ ಅಮಲಿನಲ್ಲಿ ಕುಟುಂಬಸ್ಥರ ಮೇಲೆ ಗಲಾಟೆ ಮಾಡಿ ಹಲ್ಲೆ ನಡೆಸಲು ಮುಂದಾಗಿದ್ದ ವ್ಯಕ್ತಿಯನ್ನು ಆತನ ಮಗನೇ ಕತ್ತುಹಿಸುಕಿ ಕೊಂದಿರುವ ಘಟನೆ ಭದ್ರಾವತಿ ತಾಲೂಕಿನ ಹೊಳೆಹೊನ್ನೂರಿನ ಅರಶಿನಘಟ್ಟದಲ್ಲಿ ಭಾನುವಾರ ರಾತ್ರಿ ನಡೆದಿದೆ.
ಮೃತರನ್ನು ಶಿವಗ ನಾಯ್ಕ (55) ಎಂದು ಗುರುತಿಸಲಾಗಿದ್ದು, ಆರೋಪಿ ಪುತ್ರನನ್ನು ಮಂಜುನಾಥ ನಾಯ್ಕ ಎಂದು ಗುರುತಿಸಲಾಗಿದೆ. ಅರಶಿನಗಟ್ಟ ತಾಂಡಾದಲ್ಲಿ ಕುಟುಂಬ ಕಲಹವು ದಾರುಣ ತಿರುವು ಪಡೆದಿದೆ.
ಇದನ್ನೂ ಓದಿ > >ಮಲೆನಾಡಲ್ಲಿ ಮಳೆ ಅಬ್ಬರ, ಕೋಡಿ ಬಿದ್ದ ಅಂಜನಾಪುರ ಜಲಾಶಯ!
ಸಾಲದ ವಿಚಾರದಿಂದ ಕುಟುಂಬ ಕಲಹ ಆರಂಭ
ಎಫ್ಐಆರ್’ನಲ್ಲಿ ದಾಖಲಾಗಿರುವ ಮಾಹಿತಿಯಂತೆ, ಶಿವಗ ನಾಯ್ಕ ಅವರು ಹೊಸ ಮನೆ ನಿರ್ಮಾಣ ಹಾಗೂ ಇಬ್ಬರು ಪುತ್ರರ ವಿವಾಹಕ್ಕಾಗಿ ಸಾಕಷ್ಟು ಸಾಲ ಮಾಡಿಕೊಂಡಿದ್ದರು. ಈ ವಿಚಾರವಾಗಿ ಮನೆಯಲ್ಲಿ ಪದೇಪದೇ ಗಲಾಟೆ ನಡೆಯುತ್ತಿತ್ತು. ನಂತರ ಶಿವಗ ನಾಯ್ಕ ಅವರು ಪತ್ನಿ, ಇಬ್ಬರು ಪುತ್ರರು ಹಾಗೂ ಸೊಸೆಯರನ್ನು ಹೊಸ ಮನೆಯಿಂದ ಹೊರಗೆ ಕಳುಹಿಸಿದ್ದು, ಅವರು ಹಳೆಯ ಮನೆಯಲ್ಲಿ ವಾಸವಾಗಿದ್ದರು.
ಆದರೆ ಶಿವಗ ನಾಯ್ಕ ಅವರು ಮದ್ಯಪಾನ ಮಾಡಿ ಆಗಾಗ ಹಳೆಯ ಮನೆಗೆ ಬಂದು ಗಲಾಟೆ ಮಾಡುತ್ತಿದ್ದರೆಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.
ಇದನ್ನೂ ಓದಿ > > ಅರಹತೊಳಲು ಗ್ರಾಮದಲ್ಲಿ ಮುಸಿಯಾ ದಾಳಿ, ಬಾಲಕ ಅಸ್ವಸ್ಥ!
ತಾಯಿಗೆ ಹಲ್ಲೆ ನಡೆಸುತ್ತಿದ್ದ ವೇಳೆ ಮಧ್ಯಪ್ರವೇಶಿಸಿದ ಪುತ್ರ
ಆಗಸ್ಟ್ 2ರಂದು ರಾತ್ರಿ ಸುಮಾರು 8 ಗಂಟೆ ವೇಳೆಗೆ, ಶಿವಗ ನಾಯ್ಕ ಮದ್ಯದ ಅಮಲಿನಲ್ಲಿ ಹಳೆಯ ಮನೆಗೆ ಬಂದು, ಈ ಮನೆಯಲ್ಲಿ ಇರಬಾರದು, ಮನೆ ಬಿಟ್ಟು ಹೋಗಿ ಎಂದು ಪತ್ನಿ ಪಾರ್ವತಿ ಬಾಯಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ, ಹಲ್ಲೆ ನಡೆಸಲು ಆರಂಭಿಸಿದ್ದಾರೆ ಎನ್ನಲಾಗಿದೆ.
ಈ ವೇಳೆ ಅಲ್ಲೆ ಇದ್ದ ಪುತ್ರ ಮಂಜುನಾಥ ನಾಯ್ಕ, ನನ್ನ ತಾಯಿಗೆ ಏಕೆ ಹೊಡೆಯುತ್ತಿದ್ದೀರಿ? ಎಂದು ಪ್ರಶ್ನಿಸಿ ಮಧ್ಯಪ್ರವೇಶಿಸಿದ್ದಾನೆ. ಇದರಿಂದ ತಂದೆ-ಮಗನ ನಡುವೆ ಮಾತಿನ ಚಕಮಕಿ ತೀವ್ರಗೊಂಡು, ಇಬ್ಬರೂ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.
ಕುತ್ತಿಗೆ ಹಿಸುಕಿದ ಪರಿಣಾಮ ಉಸಿರುಗಟ್ಟಿ ಸಾವು
ಜಗಳದ ವೇಳೆ ಮಂಜುನಾಥ ನಾಯ್ಕ ತನ್ನ ತಂದೆಯ ಕುತ್ತಿಗೆಯನ್ನು ಕೈಗಳಿಂದ ಬಿಗಿಯಾಗಿ ಹಿಸುಕಿದ ಪರಿಣಾಮ ಶಿವಗ ನಾಯ್ಕ ಉಸಿರಾಟದ ತೊಂದರೆಯಿಂದ ನೆಲಕ್ಕುರುಳಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
ಗಲಾಟೆಯ ಶಬ್ದ ಕೇಳಿ ಸ್ಥಳಕ್ಕೆ ಬಂದ ಸಂಬಂಧಿಕರಾದ ಮಹೇಶ್ ನಾಯ್ಕ ಹಾಗೂ ಕೀರ್ಯಾ ನಾಯ್ಕ ಅವರು ಇಬ್ಬರನ್ನು ಬೇರ್ಪಡಿಸಿದ್ದಾರೆ. ಬಳಿಕ ಶಿವಗ ನಾಯ್ಕ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲು ಯತ್ನಿಸಿದಾಗ ಅವರು ಪ್ರಜ್ಞೆ ತಪ್ಪಿದ್ದು, ಪರಿಶೀಲಿಸಿದಾಗ ಸ್ಥಳದಲ್ಲೇ ಮೃತಪಟ್ಟಿರುವುದು ತಿಳಿದುಬಂದಿದೆ.
ಪತ್ನಿಯಿಂದಲೇ ಪುತ್ರನ ವಿರುದ್ಧ ದೂರು
ಘಟನೆಯ ಬಳಿಕ ಮೃತನ ಪತ್ನಿ ಪಾರ್ವತಿ ಬಾಯಿ (51) ಹೊಳೆಹೊನ್ನೂರು ಪೊಲೀಸ್ ಠಾಣೆಗೆ ದೂರು ನೀಡಿದ್ದು, ತನ್ನ ಪುತ್ರ ಮಂಜುನಾಥ ನಾಯ್ಕನೇ ತನ್ನ ಗಂಡನ ಕುತ್ತಿಗೆ ಹಿಸುಕಿ ಕೊಲೆ ಮಾಡಿದ್ದಾನೆ ಎಂದು ಆರೋಪಿಸಿದ್ದಾರೆ.
ಪ್ರಕರಣ ದಾಖಲು – ತನಿಖೆ ಮುಂದುವರಿಕೆ
ಘಟನೆ ಕುರಿತಂತೆ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಅಪರಾಧ ಸಂಖ್ಯೆ 211/2026ರಡಿ ಭಾರತೀಯ ನ್ಯಾಯ ಸಂಹಿತೆ ಕಲಂ 103(1) ಅನ್ವಯ ಪ್ರಕರಣ ದಾಖಲಾಗಿದೆ.
ಹೊಳೆಹೊನ್ನೂರು ಪೊಲೀಸರು ಪ್ರಕರಣ ದಾಖಲಿಸಿಕೊಂಡು ಆರೋಪಿಯನ್ನು ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದ್ದು, ವರದಿ ಬಂದ ಬಳಿಕ ಸಾವಿನ ನಿಖರ ಕಾರಣ ಇನ್ನಷ್ಟು ಸ್ಪಷ್ಟವಾಗಲಿದೆ.
ಇದನ್ನೂ ಓದಿ > > ಮಲೆನಾಡಲ್ಲಿ ಮಳೆ ಅಬ್ಬರ, ಕೋಡಿ ಬಿದ್ದ ಅಂಜನಾಪುರ ಜಲಾಶಯ!
ಪೊಲೀಸರು ಪ್ರಕರಣದ ಎಲ್ಲಾ ಆಯಾಮಗಳ ಕುರಿತು ತನಿಖೆ ಮುಂದುವರೆಸಿದ್ದಾರೆ.














