ಸಾಗರ : ಕೇಂದ್ರ ಸರ್ಕಾರ ರೈತರ ಬೇಡಿಕೆಗಳನ್ನು ಈಡೇರಿಸದ ಹಿನ್ನೆಲೆಯಲ್ಲಿ ರಾಜ್ಯ ರೈತ ಸಂಘ ನೀಡಿದ ಕರೆಯನುಸಾರು ಶಿವಮೊಗ್ಗ ಜಿಲ್ಲಾ ರೈತ ಸಂಘದ ವತಿಯಿಂದ ರಾಷ್ಟ್ರೀಯ ಹೆದ್ದಾರಿ 206ರ ಜೋಗ್ ರಸ್ತೆಯ ಪೊಲೀಸ್ ಸ್ಟೇಷನ್ ಸಮೀಪ ರಸ್ತೆತಡೆ ನಡೆಸುವ ಮೂಲಕ ಪ್ರತಿಭಟನೆ ನಡೆಸಲಾಯಿತು. ಸುಮಾರು ಮೂರು ಗಂಟೆಗೂ ಹೆಚ್ಚುಕಾಲ ರಸ್ತೆ ತಡೆ ನಡೆಸಿದ್ದರಿಂದ ವಾಹನ ಓಡಾಟಕ್ಕೆ ತೀವ್ರ ತೊಂದರೆ ಉಂಟಾಯಿತು.
ಇದನ್ನೂ ಓದಿ > > ಸಚಿವ ಸೋಮಣ್ಣ ಕಾರಿಗೆ ಅಡ್ಡಗಟ್ಟಿ ಪ್ರತಿಭಟನೆ, ಯುವ ಕಾಂಗ್ರೆಸ್ ಕಾರ್ಯಕರ್ತರ ವಿರುದ್ಧ ಎಫ್ಐಆರ್!
ಪ್ರತಿಭಟನೆ ಉದ್ದೇಶಿಸಿ ಮಾತನಾಡಿದ ರೈತ ಸಂಘದ ಜಿಲ್ಲಾ ಕಾರ್ಯಾಧ್ಯಕ್ಷ ರಮೇಶ್ ಈ. ಕೆಳದಿ, ಸೋಮವಾರ ಕೇಂದ್ರ ಸರ್ಕಾರ ಎಂಎಸ್ಪಿ ಕುರಿತು ಚರ್ಚಿಸಲು ರೈತ ಪ್ರಮುಖರ ಸಭೆ ಕರೆದಿತ್ತು. ಕೇಂದ್ರ ಕೃಷಿ ಸಚಿವ ಶಿವರಾಜ ಸಿಂಗ್ ಚವ್ಹಾನ್, ಆಹಾರ ನಾಗರೀಕ ಖಾತೆ ಸಚಿವ ಪ್ರಹ್ಲಾದ್ ಜೋಷಿ ಅವರ ಜೊತೆ ಸತತ ಮೂರುವರೆ ಗಂಟೆಗಳ ಕಾಲ ಸಭೆ ನಡೆಸಿದರೂ ರೈತ ಸಂಘದ ಯಾವುದೇ ಬೇಡಿಕೆಯನ್ನು ಈಡೇರಿಸದೆ ಸಮಯಾವಕಾಶ ಕೋರಿರುವುದನ್ನು ರೈತ ಸಂಘ ತೀವೃವಾಗಿ ಖಂಡಿಸುತ್ತದೆ ಎಂದರು.
ಇದನ್ನೂ ಓದಿ > > ಎಟಿಎನ್ಸಿಸಿ ಕಾಲೇಜಿನಲ್ಲಿ ನೇತ್ರ ತಪಾಸಣಾ ಮತ್ತು ನೇತ್ರದಾನ ಶಿಬಿರ
ಕೇಂದ್ರ ಸರ್ಕಾರ ರೈತಪರ ಯೋಜನೆಗಳನ್ನು ಈಡೇರಿಸುವಲ್ಲಿ ಮೀನಾಮೇಷ ಎಣಿಸುತ್ತಿರುವುದು ರೈತರಿಗೆ ಮಾಡಿದ ಅವಮಾನವಾಗಿದೆ. ಹುಬ್ಬಳ್ಳಿ ಧಾರವಾಡದಲ್ಲಿ ಮೂರುಲಕ್ಷಕ್ಕೂ ಅಧಿಕ ರೈತರು ಪ್ರತಿಭಟನೆ ಮಾಡಿ, ಕೇಂದ್ರ ಸಚಿವ ಪ್ರಹ್ಲಾದ್ ಜೋಷಿ ಅವರ ಮನೆಗೆ ನುಗ್ಗಿ ಪ್ರತಿಭಟನೆ ನಡೆಸಿತ್ತು. ಇದಕ್ಕೆ ಸ್ಪಂದಿಸಿ ಕೇಂದ್ರ ಸರ್ಕಾರ ದೆಹಲಿಗೆ ರೈತರನ್ನು ಮಾತುಕತೆಗೆ ಕರೆದಿತ್ತು. ಸಭೆಯಲ್ಲಿ ಯಾವುದೇ ಬೇಡಿಕೆಯನ್ನು ಕೇಂದ್ರ ಸರ್ಕಾರ ಈಡೇರಿಸಿಲ್ಲ. ಪದೇಪದೇ ಸಮಯಾವಕಾಶ ಕೇಳುತ್ತಿದೆ. ಈ ಹಿನ್ನೆಲೆಯಲ್ಲಿ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಕರೆ ಮೇರೆಗೆ ರಸ್ತೆ ತಡೆ ನಡೆಸಿದ್ದು, ಬೇಡಿಕೆ ಈಡೇರಿಸದೆ ಹೋದಲ್ಲಿ ರಸ್ತೆ ತಡೆ ಬುಧವಾರದಿಂದ ಮುಂದುವರೆಯುತ್ತದೆ ಎಂದು ಎಚ್ಚರಿಕೆ ನೀಡಿದರು.
ಇದನ್ನೂ ಓದಿ > > ಆಲಳ್ಳಿ ಗ್ರಾಮದ ಹೊಸಕೆರೆಯಲ್ಲಿ ದುರಂತ, ಇಬ್ಬರು ಮಕ್ಕಳು ಸಾವು!
ಈ ಸಂದರ್ಭದಲ್ಲಿ ಸಂತೋಷ್ ಚಿಕ್ಕನೆಲ್ಲೂರು, ಚಂದ್ರಪ್ಪ ಆಲಳ್ಳಿ, ಕೃಷ್ಣಮೂರ್ತಿ, ಸೋಮಶೇಖರ ಹುತ್ತದಿಂಬ, ಶಶಿಕಲಾ, ನಾಗರಾಜ್, ಟಾಕಪ್ಪ, ವಾಸು, ಅಜ್ಜಪ್ಪ ಇನ್ನಿತರರು ಹಾಜರಿದ್ದರು.
















