ಶಿವಮೊಗ್ಗ: ಬಡ ಕುಟುಂಬಗಳ ಹಸಿವು ನೀಗಿಸಬೇಕಾದ ಪಡಿತರ ವ್ಯವಸ್ಥೆಯಲ್ಲೇ ಕಳಪೆ ಆಹಾರ ಧಾನ್ಯ ವಿತರಣೆ ಮಾಡಲಾಗುತ್ತಿದೆ ಎಂಬ ಆರೋಪ ಹೊಸನಗರ ತಾಲೂಕಿನಲ್ಲಿ ಕೇಳಿಬಂದಿದೆ.
ನ್ಯಾಯಬೆಲೆ ಅಂಗಡಿಗಳ ಮೂಲಕ ಬಿಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರಿಗೆ ವಿತರಿಸಲಾಗುತ್ತಿರುವ ರಾಗಿಯಲ್ಲಿ ಕಲ್ಲು, ಮಣ್ಣು, ಕಸ ಹಾಗೂ ಧೂಳು ಹೆಚ್ಚಾಗಿದ್ದು, ತಿನ್ನಲು ಯೋಗ್ಯವಾಗಿಲ್ಲ ಎಂದು ಫಲಾನುಭವಿಗಳು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕ್ಷಣ ಕ್ಷಣದ ಸುದ್ದಿಗಳಿಗಾಗಿ ವಾಟ್ಸಪ್ ಗ್ರೂಪ್ಗೆ ಸೇರಲು ಇಲ್ಲಿ ಕ್ಲಿಕ್ ಮಾಡಿ
ಹೊಸನಗರ ತಾಲೂಕಿನಲ್ಲಿ ಒಟ್ಟು 46 ನ್ಯಾಯಬೆಲೆ ಅಂಗಡಿಗಳಿದ್ದು, ಸುಮಾರು 26 ಸಾವಿರಕ್ಕೂ ಅಧಿಕ ಬಡ ಕುಟುಂಬಗಳು ಪಡಿತರ ವ್ಯವಸ್ಥೆಯನ್ನು ಅವಲಂಬಿಸಿವೆ. ಈ ಹಿಂದೆ ಫಲಾನುಭವಿಗಳಿಗೆ ತಲಾ 10 ಕೆ.ಜಿ ಅಕ್ಕಿ ವಿತರಿಸಲಾಗುತ್ತಿತ್ತು. ಆದರೆ ಆಹಾರ ಇಲಾಖೆಯ ಇತ್ತೀಚಿನ ಸುತ್ತೋಲೆಯಂತೆ ಪ್ರತಿ ಸದಸ್ಯರಿಗೆ 7 ಕೆ.ಜಿ ಅಕ್ಕಿ ಹಾಗೂ 3 ಕೆ.ಜಿ ರಾಗಿ ವಿತರಿಸಲಾಗುತ್ತಿದೆ.
ಆರೋಗ್ಯದ ದೃಷ್ಟಿಯಿಂದ ರಾಗಿ ವಿತರಿಸುವ ಸರ್ಕಾರದ ಕ್ರಮಕ್ಕೆ ಸಾರ್ವಜನಿಕರಿಂದ ವಿರೋಧವಿಲ್ಲ. ಆದರೆ ವಿತರಿಸಲಾಗುತ್ತಿರುವ ರಾಗಿಯ ಗುಣಮಟ್ಟ ತೀರಾ ಕಳಪೆಯಾಗಿದ್ದು, ಮೂಟೆ ತೆರೆದಾಗ ರಾಗಿಗಿಂತ ಕಲ್ಲು, ಮಣ್ಣು, ಕಸ ಹಾಗೂ ಧೂಳೇ ಹೆಚ್ಚಾಗಿ ಕಂಡುಬರುತ್ತಿದೆ. ಇದರಿಂದ ಪಡಿತರ ಪಡೆಯಲು ಬರುವ ಗ್ರಾಹಕರು ನ್ಯಾಯಬೆಲೆ ಅಂಗಡಿ ಮಾಲೀಕರೊಂದಿಗೆ ವಾಗ್ವಾದ ನಡೆಸುವಂತಾಗಿದೆ.
ಇದನ್ನೂ ಓದಿ > > ಶಿವಮೊಗ್ಗ, ವಿ.ಎಸ್. ಉಗ್ರಪ್ಪ ಕಾರಿಗೆ ಮುತ್ತಿಗೆ, ಭೋವಿ ಸಮುದಾಯದಿಂದ ಆಕ್ರೋಶ!, ಉಗ್ರಪ್ಪ ಹೇಳಿದ್ದೇನು?
ಸರ್ಕಾರದ ಗೋದಾಮುಗಳಿಂದ ಸರಬರಾಜಾಗುವ ರಾಗಿಯನ್ನೇ ನ್ಯಾಯಬೆಲೆ ಅಂಗಡಿ ಮಾಲೀಕರು ವಿತರಿಸುತ್ತಿದ್ದು, ಸ್ಥಳೀಯ ವಿತರಕರಿಂದ ಯಾವುದೇ ಲೋಪವಾಗಿಲ್ಲ ಎಂಬ ಅಭಿಪ್ರಾಯವೂ ವ್ಯಕ್ತವಾಗಿದೆ. ಹೀಗಾಗಿ ಕಳಪೆ ಆಹಾರ ಧಾನ್ಯ ಪೂರೈಕೆಯ ಹೊಣೆ ಹೊತ್ತಿರುವ ಸಂಬಂಧಪಟ್ಟ ಇಲಾಖೆ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.
ಈ ನಡುವೆ ರಾಗಿಯ ಗುಣಮಟ್ಟದ ಕುರಿತು ದೂರುಗಳು ಕೇಳಿಬಂದ ಹಿನ್ನೆಲೆಯಲ್ಲಿ ಹೊಸನಗರ ತಹಶೀಲ್ದಾರ್ ಭರತ್ರಾಜ್, ಆಹಾರ ನಿರೀಕ್ಷಕರಾದ ಬಾಲಚಂದ್ರ ಹಾಗೂ ನಾಗರಾಜ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪರಿಶೀಲನೆ ವೇಳೆ ರಾಗಿಯ ಗುಣಮಟ್ಟದಲ್ಲಿ ಲೋಪವಿರುವುದು ಕಂಡುಬಂದಿದೆ ಎನ್ನಲಾಗಿದೆ.
ಈ ಸಂಬಂಧ ತಹಶೀಲ್ದಾರ್ ಅವರು ಸರ್ಕಾರದ ಉನ್ನತ ಮಟ್ಟದ ಆಹಾರ ಸರಬರಾಜು ಅಧಿಕಾರಿಗಳಿಗೆ ಲಿಖಿತ ಪತ್ರ ಬರೆದು, ಮುಂದಿನ ತಿಂಗಳಿನಿಂದ ಫಲಾನುಭವಿಗಳಿಗೆ ಸ್ವಚ್ಛ ಹಾಗೂ ಗುಣಮಟ್ಟದ ರಾಗಿಯನ್ನೇ ಪೂರೈಸುವಂತೆ ಸೂಚಿಸಿದ್ದಾರೆ ಎನ್ನಲಾಗಿದೆ.
ಇದನ್ನೂ ಓದಿ > > ತೀರ್ಥಹಳ್ಳಿ, ಸರ್ಕಾರಿ ಶಾಲೆಯ ಬೀಗ ಒಡೆದ ದುಷ್ಕರ್ಮಿಗಳು!
ಇದನ್ನೂ ಓದಿ > > ಜನತೆಗೆ ಶಾಕ್ ಕೊಟ್ಟ ಸರ್ಕಾರ, ಹೆಚ್ಚಳವಾಗಲಿದೆ ಹಾಲಿನ ದರ!
ಬಡವರ ಆಹಾರದ ವಿಚಾರದಲ್ಲಿ ನಿರ್ಲಕ್ಷ್ಯ ತೋರಬಾರದು. ತಕ್ಷಣವೇ ಕಳಪೆ ರಾಗಿ ವಿತರಣೆಯನ್ನು ಸ್ಥಗಿತಗೊಳಿಸಿ, ಉತ್ತಮ ಗುಣಮಟ್ಟದ ಆಹಾರ ಧಾನ್ಯ ಪೂರೈಸಬೇಕು. ಇಲ್ಲವಾದಲ್ಲಿ ನ್ಯಾಯಬೆಲೆ ಅಂಗಡಿಗಳ ಮುಂದೆ ಪ್ರತಿಭಟನೆ ನಡೆಸುವುದರ ಜೊತೆಗೆ ತಾಲೂಕು ಕಚೇರಿಗೆ ಮುತ್ತಿಗೆ ಹಾಕಲಾಗುವುದು ಎಂದು ಪಡಿತರ ಫಲಾನುಭವಿಗಳು ಎಚ್ಚರಿಕೆ ನೀಡಿದ್ದಾರೆ.













