ಶಿವಮೊಗ್ಗ: ಪಾರ್ಶ್ವವಾಯುಗೆ ತುತ್ತಾಗಿ ಕಾಲುಗಳ ಸ್ವಾಧೀನ ಕಳೆದುಕೊಂಡಿದ್ದ ತ್ಯಾವರೆಕೊಪ್ಪ ಹುಲಿ-ಸಿಂಹ ಧಾಮದ ಚಿರತೆ ಭದ್ರಾಗೆ ಚಿಕಿತ್ಸೆಯ ಭಾಗವಾಗಿ ತಡರಾತ್ರಿ ಇಲ್ಲಿನ ನಂಜಪ್ಪ ಆಸ್ಪತ್ರೆಯಲ್ಲಿ ಎಂಆರ್‌ಐ ಸ್ಕ್ಯಾನ್ ಮಾಡಲಾಯಿತು.
ಚಿರತೆ ಭದ್ರಾ ಕೆಲ ದಿನಗಳಿಂದ ಕಾಲುಗಳ ಸ್ವಾಧೀನವಿಲ್ಲದೇ ಓಡಾಡಲು ಸಾಧ್ಯವಿಲ್ಲದಂತಾಗಿತ್ತು. ಅದು ಬೆನ್ನು ಹುರಿಗೆ ಪೆಟ್ಟು ಬಿದ್ದು ಇಲ್ಲವೇ ಯಾವುದಾದರೂ ಸೋಂಕಿಗೆ ತುತ್ತಾಗಿ ಅನಾರೋಗ್ಯ ಪೀಡಿತವಾಗಿದೆಯೇ ಎಂಬುದನ್ನು ದೃಢಪಡಿಸಿಕೊಳ್ಳಲು ವೈದ್ಯರು ಎಂಆರ್‌ಐ ಸ್ಕ್ಯಾನ್ ಗೆ ಶಿಫಾರಸು ಮಾಡಿದ್ದರು.
ಚಿರತೆಯ ಎಂಆರ್‌ಐ ಸ್ಕ್ಯಾನ್ ಮಾಡಲು ನಂಜಪ್ಪ ಆಸ್ಪತ್ರೆಯ ಆಡಳಿತ ಒಪ್ಪಿಗೆ ಸೂಚಿಸಿತ್ತು. ಹಗಲು ಹೊತ್ತು ರೋಗಿಗಳು, ಆಸ್ಪತ್ರೆಯ ಸಿಬ್ಬಂದಿ ಹೆದರಿಕೊಳ್ಳಬಹುದು ಎಂಬ ಕಾರಣಕ್ಕೆ ತಡರಾತ್ರಿ ಚಿರತೆಯನ್ನು ಆಸ್ಪತ್ರೆಗೆ ಕರೆತರಲು ಮೃಗಾಲಯ ಪ್ರಾಧಿಕಾರ ನಿರ್ಧರಿಸಿತ್ತು.
ಅದರಂತೆ ಹುಲಿ-ಸಿಂಹ ಧಾಮದ ಕಾರ್ಯನಿರ್ವಾಹಕ ನಿರ್ದೇಶಕ ಕೆ.ವಿ.ಅಮರಾಕ್ಷರ ಹಾಗೂ ವನ್ಯಜೀವಿ ವೈದ್ಯ ಡಾ.ಮುರಳಿಮೋಹನ್ ನೇತೃತ್ವದ ತಂಡ ಚಿರತೆಯನ್ನು ಆಸ್ಪತ್ರೆಗೆ ಕರೆತಂದಿತ್ತು. ಒಂದೂವರೆ ಗಂಟೆ ಅವಧಿಗೆ ಚಿರತೆಗೆ ಅರೆವಳಿಕೆ ಮದ್ದು ನೀಡಿ ಪ್ರಜ್ಞೆ ತಪ್ಪಿಸಿ ನಂತರ ಎಂಆರ್ ಐ ಸ್ಕ್ಯಾನ್ ಗೆ ಒಳಪಡಿಸಲಾಯಿತು. ಆಸ್ಪತ್ರೆಯ ರೇಡಿಯಾಲಜಿ ವಿಭಾಗದ ತಜ್ಞರು, ಸಿಬ್ಬಂದಿ ಹೀಗೊಂದು ವಿಶಿಷ್ಟ ಪ್ರಯೋಗಕ್ಕೆ ಸಹಕರಿಸಿದರು.













