ಭದ್ರಾವತಿ: ಹಣದ ನೆರವಿನ ಅಮಿಷವೊಡ್ಡಿ ಮನೆಗೆ ಕರೆಸಿ ಯುವತಿಯರನ್ನು ವೇಶ್ಯಾವಾಟಿಕೆಗೆ ಬಳಸುತ್ತಿದ್ದ ಭದ್ರಾವತಿಯ ಮೂವರು ಮಹಿಳೆಯರಿಗೆ ಇಲ್ಲಿನ ನಾಲ್ಕನೇ ಹೆಚ್ಚುವರಿ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯ 10 ವರ್ಷ ಕಠಿಣ ಕಾರಾಗೃಹ ವಾಸ ಶಿಕ್ಷೆ ಹಾಗೂ 1,61 ಲಕ್ಷ ದಂಡ ವಿಧಿಸಿ ಆದೇಶಿಸಿದೆ.
ಭದ್ರಾವತಿ ನಗರದ ನಿವಾಸಿಗಳಾದ ಚಂದ್ರಕಲಾ, ಎಸ್.ಶಿಲ್ಪಾ ಹಾಗೂ ಕವಿತಾ ಶಿಕ್ಷೆಗೆ ಒಳಗಾದವರು. 2021ರ ಡಿಸೆಂಬರ್ 24ರಂದು ಭದ್ರಾವತಿಯ ಮನೆಯೊಂದಕ್ಕೆ ದಾಳಿ ಮಾಡಿದ್ದ ಐಪಿಎಸ್ ಅಧಿಕಾರಿ ಜಿತೇಂದ್ರಕುಮಾರ್ ದಯಾಮ ವೇಶ್ಯಾವಾಟಿಕೆ ನಡೆಸುತ್ತಿದ್ದ ಆರೋಪದ ಮೇಲೆ ಮೂವರನ್ನು ಬಂಧಿಸಿದ್ದರು. ಈ ಬಗ್ಗೆ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಪೇಪರ್ ಟೌನ್ ಠಾಣೆ ಇನ್‌ಸ್ಪೆಕ್ಟರ್ ಇ.ಒ.ಮಂಜುನಾಥ್ ಪ್ರಕರಣದ ವಿಚಾರಣೆ ನಡೆಸಿ ನ್ಯಾಯಾಲಯಕ್ಕೆ ಆರೋಪ ಪಟ್ಟಿ ಸಲ್ಲಿಸಿದ್ದರು. ವಿಚಾರಣೆ ನಡೆಸಿದ ನ್ಯಾಯಾಧೀಶರಾದ ಇಂದಿರಾ ಮೈಲಸ್ವಾಮಿ ಚೆಟ್ಟಿಯಾರ್ ಆರೋಪ ದೃಢಪಟ್ಟ ಹಿನ್ನೆಲೆಯಲ್ಲಿ ಶಿಕ್ಷೆ ವಿಧಿಸಿ ಆದೇಶಿಸಿದ್ದಾರೆ.













