ಶಿವಮೊಗ್ಗ : ಜಮೀನಿನ ತಂತಿ ಬೇಲಿಗೆ ಅನದಿಕೃತವಾಗಿ ಕಲ್ಪಸಿದ ವಿದ್ಯುತ್ ಸಂಪರ್ಕದಿಂದ ವ್ಯಕ್ತಿಯೊಬ್ಬರು ಶಾಕ್‌ನಿಂದ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ, ಇಬ್ಬರು ವ್ಯಕ್ತಿಗಳಿಗೆ ಶಿವಮೊಗ್ಗದ 3 ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 1 ವರ್ಷ ಜೈಲು ಶಿಕ್ಷೆ ವಿಧಿಸಿ ತೀರ್ಪು ನೀಡಿದೆ.
ತಾಲೂಕಿನ ಕೋಣೆಹೊಸೂರು ಗ್ರಾಮದ ನಿವಾಸಿಗಳಾದ ಲಕ್ಷ್ಮಣಪ್ಪ (48) ಹಾಗೂ ಲಿಂಗಪ್ಪ (43) ಶಿಕ್ಷೆಗೆ ಗುರಿಯಾದವರು. ಜೈಲು ಶಿಕ್ಷೆಯ ಜೊತೆಗೆ 11 ಸಾವಿರ ರೂ. ದಂಡ ವಿಧಿಸಲಾಗಿದೆ. ನ್ಯಾಯಾಧೀಶರಾದ ಯಶವಂತ್ ಕುಮಾರ್ ಅವರು ಈ ತೀರ್ಪು ನೀಡಿದ್ದಾರೆ. ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕರಾದ ಶಾಂತರಾಜ್ ಅವರು ವಾದ ಮಂಡಿಸಿದ್ದರು.
ನಡೆದಿದ್ದೇನು?: ಲಕ್ಷ್ಮಣಪ್ಪ ಹಾಗೂ ಲಿಂಗಪ್ಪ ಎಂಬುವರು ಜಮೀನಿನಲ್ಲಿ ಹಾಕಿಸಿದ್ದ ಬೋರ್ವೆಲ್ ಗೆ ಅನದಿಕೃತವಾಗಿ ವಿದ್ಯುತ್ ಸಂಪರ್ಕ ಪಡೆದಿದ್ದರು. ಜಮೀನಿನ ತಂತಿ ಬೇಲಿಯ ಮೇಲ್ಭಾಗ ಹಾಗೂ ಕೆಳಭಾಗದಲ್ಲಿ ಬೋರ್ ವೆಲ್ ಮೋಟಾರ್ ಸ್ವಿಚ್ ಬೋರ್ಡ್ ನಿಂದ ವಿದ್ಯುತ್ ಸಂಪರ್ಕ ನೀಡಿದ್ದರು.
ಗಾಮಪ್ಪ ಎಂಬುವರ 25-09-2021 ರಂದು ಮನೆಯ ಹಿಂಭಾಗದ ಸದರಿ ಜಮೀನಿನಲ್ಲಿ ಬಹಿರ್ದೆಸೆಗೆ ತೆರಳಿದ್ದರು. ಬೇಲಿ ತಂತಿ ದಾಟುವ ವೇಳೆ ವಿದ್ಯುತ್ ಶಾಕ್ ಗೆ ತುತ್ತಾಗಿ ಸ್ಥಳದಲ್ಲಿಯೇ ಅಸುನೀಗಿದ್ದರು.
ಈ ಸಂಬಂಧ ಕುಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಅಂದಿನ ಇನ್ಸ್’ಪೆಕ್ಟರ್ ಅಭಯ ಪ್ರಕಾಶ್ ಸೋಮನಾಳ್ ಅವರು ಪ್ರಕರಣದ ತನಿಖೆ ನಡೆಸಿ ನ್ಯಾಯಾಲಯಕ್ಕೆ ಆರೋಪಪಟ್ಟಿ ದಾಖಲಿಸಿದ್ದರು.













