ಶಿವಮೊಗ್ಗ: ತಂತ್ರಜ್ಞಾನಕ್ಕೆ ಸೃಜನಶೀಲತೆಯ ಸ್ಪರ್ಶ, ಕಲಿಕೆಗೆ ಸ್ಪರ್ಧೆಯ ಸೊಗಡು ಹಾಗೂ ಯುವ ಮನಸ್ಸುಗಳಿಗೆ ನವೀನ ಚಿಂತನೆಯ ರೆಕ್ಕೆಗಳನ್ನು ನೀಡುವ ‘ಆರಾ 1.0’ ತಾಂತ್ರಿಕ ಉತ್ಸವಕ್ಕೆ ಗುರುವಾರ ಜೆಎನ್‌ಎನ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅದ್ದೂರಿ ಚಾಲನೆ ದೊರೆಯಿತು.
ಇದನ್ನೂ ಓದಿ > > ಶಿವಮೊಗ್ಗ, ಕೇಂದ್ರ ಕಾರಾಗೃಹದಲ್ಲಿ ಪೊಲೀಸರ ದಿಢೀರ್ ಪರಿಶೀಲನೆ
ಜೆಎನ್‌ಎನ್‌ಸಿಇಯ ಬೈಟ್ ಬ್ರಿಗೇಡ್ ಕ್ಲಬ್ ವತಿಯಿಂದ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ, ಕಾಲೇಜಿನ ವಿದ್ಯಾರ್ಥಿಗಳೊಂದಿಗೆ ವಿವಿಧ ಶಿಕ್ಷಣ ಸಂಸ್ಥೆಗಳ 700ಕ್ಕೂ ಅಧಿಕ ವಿದ್ಯಾರ್ಥಿಗಳು ಪಾಲ್ಗೊಂಡಿದ್ದು, 9 ತಾಂತ್ರಿಕ ಸ್ಪರ್ಧೆಗಳು ಸೇರಿದಂತೆ ವಿವಿಧ ಚಟುವಟಿಕೆಗಳು ಯುವ ಪ್ರತಿಭೆಗಳ ಸಾಮರ್ಥ್ಯ ಅನಾವರಣಕ್ಕೆ ವೇದಿಕೆಯಾಗಿ ರೂಪುಗೊಂಡಿತು.
ಕಾರ್ಯಕ್ರಮವನ್ನು ಉದ್ಘಾಟಿಸಿದ ವೇಫೇರ್ ಕಂಪನಿಯ ಡೇಟಾ ಮತ್ತು ಎಂಎಲ್ ವಿಭಾಗದ ಹಿರಿಯ ವ್ಯವಸ್ಥಾಪಕ ಇಂಜಿನಿಯರ್ ಅಜಯ್ ಕಮ್ಮರಡಿ ಮಾತನಾಡಿ, ಕೃತಕ ಬುದ್ಧಿಮತ್ತೆ ಇಂದು ಜಗತ್ತಿನ ಕಾರ್ಯವಿಧಾನವನ್ನೇ ಬದಲಿಸುತ್ತಿರುವ ಸಂದರ್ಭದಲ್ಲಿ, ವಿದ್ಯಾರ್ಥಿಗಳು ತಂತ್ರಜ್ಞಾನವನ್ನು ಕೇವಲ ಬಳಸುವುದಕ್ಕೆ ಸೀಮಿತವಾಗದೆ, ಅದನ್ನು ಅರ್ಥೈಸಿ, ವಿಶ್ಲೇಷಿಸಿ, ಸೃಜನಾತ್ಮಕವಾಗಿ ಬಳಸುವ ಸಾಮರ್ಥ್ಯ ಬೆಳೆಸಿಕೊಳ್ಳಬೇಕು ಎಂದು ಹೇಳಿದರು.
ಇದನ್ನೂ ಓದಿ > > ಶಿವಮೊಗ್ಗ, ಗಣೇಶ ಹಬ್ಬಕ್ಕೆ ಡಿಜೆ ಸಿಸ್ಟಂ, ಬೈಕ್ ರ‍್ಯಾಲಿ ನಿಷೇಧ!
ಎಐ ಯುಗದಲ್ಲಿ ಕೇವಲ ಕೋಡ್‌ಗಳನ್ನು ಕಾಪಿ-ಪೇಸ್ಟ್ ಮಾಡುವುದರಿಂದ ಯಶಸ್ಸು ಸಾಧ್ಯವಿಲ್ಲ. ಸಮಸ್ಯೆಯನ್ನು ಅರ್ಥೈಸುವ, ಸೂಕ್ತ ಪ್ರಶ್ನೆಗಳನ್ನು ಕೇಳುವ ಹಾಗೂ ಎಐಗೆ ಪರಿಣಾಮಕಾರಿ ಸೂಚನೆಗಳನ್ನು ನೀಡುವ ಕೌಶಲ್ಯವೇ ಭವಿಷ್ಯದ ಪ್ರಮುಖ ಶಕ್ತಿಯಾಗಲಿದೆ. ತಂತ್ರಜ್ಞಾನವನ್ನು ಜ್ಞಾನಕ್ಕೆ ಪರ್ಯಾಯವಾಗಿ ನೋಡದೆ, ಜ್ಞಾನವನ್ನು ವಿಸ್ತರಿಸುವ ಸಾಧನವಾಗಿ ಬಳಸಬೇಕು ಎಂದು ಅವರು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಉನ್ನತ ಶಿಕ್ಷಣದತ್ತ ಹೆಜ್ಜೆ ಇಡುವ ವಿದ್ಯಾರ್ಥಿಗಳು ದೇಶ-ವಿದೇಶಗಳ ಶಿಕ್ಷಣ ಸಂಸ್ಥೆಗಳ ಗುಣಮಟ್ಟ, ಶಿಕ್ಷಣದ ಸ್ವರೂಪ ಹಾಗೂ ವೆಚ್ಚಗಳನ್ನು ಸಮಗ್ರವಾಗಿ ಪರಿಶೀಲಿಸಿ, ತಮ್ಮ ಭವಿಷ್ಯಕ್ಕೆ ಪೂರಕವಾದ ನಿರ್ಧಾರಗಳನ್ನು ಕೈಗೊಳ್ಳಬೇಕು ಎಂದು ಸಲಹೆ ನೀಡಿದರು.
ಮುಖ್ಯ ಅತಿಥಿಗಳಾದ ಎನ್‌ಇಎಸ್ ಸಹ ಕಾರ್ಯದರ್ಶಿ ಡಾ. ಪಿ. ನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳ ಸರ್ವತೋಮುಖ ವ್ಯಕ್ತಿತ್ವ ನಿರ್ಮಾಣಕ್ಕೆ ಪಠ್ಯಪುಸ್ತಕದ ಜ್ಞಾನವೊಂದೇ ಸಾಕಾಗದು. ತಾಂತ್ರಿಕ ಶಿಕ್ಷಣದ ಜತೆಗೆ ಕ್ರೀಡೆ, ಸಾಂಸ್ಕೃತಿಕ ಚಟುವಟಿಕೆಗಳು ಹಾಗೂ ಸಾಮಾಜಿಕ ಸೇವೆಯಲ್ಲೂ ವಿದ್ಯಾರ್ಥಿಗಳು ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು ಎಂದು ತಿಳಿಸಿದರು.
ಜೆಎನ್‌ಎನ್‌ಸಿಇ ಸಂಶೋಧನಾ ಡೀನ್ ಡಾ.ಎಸ್.ವಿ. ಸತ್ಯನಾರಾಯಣ್ ಮಾತನಾಡಿ, ವಿದ್ಯಾರ್ಥಿಗಳಲ್ಲಿ ಕೌಶಲ್ಯ, ಆತ್ಮವಿಶ್ವಾಸ, ತಂಡದ ಮನೋಭಾವ ಹಾಗೂ ನಾಯಕತ್ವ ಗುಣಗಳನ್ನು ಬೆಳೆಸುವಲ್ಲಿ ವಿದ್ಯಾರ್ಥಿ ಕ್ಲಬ್‌ಗಳು ಮಹತ್ವದ ಪಾತ್ರ ವಹಿಸುತ್ತವೆ ಎಂದು ಹೇಳಿದರು.
ಇಸಿಇ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಹಾಗೂ ಬೈಟ್ ಬ್ರಿಗೇಡ್ ಕ್ಲಬ್‌ನ ಸಂಯೋಜಕರಾದ ಉಜ್ವಲಾ ಬಿ.ಎಸ್, ವಿದ್ಯಾರ್ಥಿ ಸಂಚಾಲಕ ರಿಷಿಕೇಶ್, ಸಹ ಸಂಚಾಲಕ ಮಲ್ಲಿಕಾರ್ಜುನ ಉಪಸ್ಥಿತರಿದ್ದರು.














