ಶಿವಮೊಗ್ಗ: ತ್ಯಾವರೆಕೊಪ್ಪದ ಹುಲಿ – ಸಿಂಹಧಾಮಕ್ಕೆ ಹೊಸ ಅತಿಥಿಗಳ ಆಗಮನವಾಗಿದ್ದು, ಬಿಹಾರದ ಪಟ್ನಾದಲ್ಲಿರುವ ಸಂಜಯ್ ಗಾಂಧಿ ಜೈವಿಕ ಉದ್ಯಾನವನದಿಂದ 8 ತೋಳಗಳು ಹಾಗೂ 4 ಘರಿಯಾಲ್ಗಳನ್ನು ಪ್ರಾಣಿ ವಿನಿಮಯ ಯೋಜನೆಯಡಿ ತರಲಾಗಿದೆ ಎಂದು ಕಾರ್ಯನಿರ್ವಾಹಕ ನಿರ್ದೇಶಕ ಅಮರನಾಥ್ ಬಿ.ಎಂ. ತಿಳಿಸಿದ್ದಾರೆ.
ಕೇಂದ್ರ ಮೃಗಾಲಯ ಪ್ರಾಧಿಕಾರದ (CZA) ಅನುಮೋದನೆಯೊಂದಿಗೆ ಪಟ್ನಾ ಮೃಗಾಲಯದಿಂದ ಪ್ರಾಣಿಗಳನ್ನು ತರಲಾಗಿದ್ದು, ಇದಕ್ಕೆ ಪ್ರತಿಯಾಗಿ ಶಿವಮೊಗ್ಗ ಮೃಗಾಲಯದಿಂದ ಎರಡು ಗಂಡು ಕಾಡುಕೋಣಗಳನ್ನು ನೀಡಲಾಗಿದೆ. ಪ್ರಾಣಿ ವಿನಿಮಯ ಯೋಜನೆಯು ಮೃಗಾಲಯದಲ್ಲಿನ ಜೀವವೈವಿಧ್ಯವನ್ನು ಮತ್ತಷ್ಟು ಹೆಚ್ಚಿಸುವ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯಾಗಿದೆ.
ಇದನ್ನೂ ಓದಿ > > ಮಾತೃಭಾಷೆ ಸೃಜನಶೀಲತೆಗೆ ಜೀವಸೆಲೆ | ಕಸಾಪ ಅಧ್ಯಕ್ಷ ಡಿ. ಮಂಜುನಾಥ
ಪಟ್ನಾದಿಂದ ತರಲಾದ 8 ತೋಳಗಳ ಪೈಕಿ 5 ತೋಳಗಳನ್ನು ಸುಮಾರು ಮೂರು ವಾರಗಳ ಕಾಲ ಪ್ರತ್ಯೇಕವಾಗಿ ಸೂಕ್ತ ನಿಗಾ, ತರಬೇತಿ ಹಾಗೂ ಅಗತ್ಯ ಆರೈಕೆಯಲ್ಲಿರಿಸಲಾಗಿತ್ತು. ಹೊಸ ಪರಿಸರಕ್ಕೆ ಅವುಗಳು ಹೊಂದಿಕೊಳ್ಳುವಿಕೆ ಹಾಗೂ ಆರೋಗ್ಯ ಸ್ಥಿತಿಯನ್ನು ಪರಿಶೀಲಿಸಿದ ಬಳಿಕ ಇದೀಗ ಪ್ರವಾಸಿಗರ ವೀಕ್ಷಣೆಗಾಗಿ ಪ್ರದರ್ಶನ ಆವರಣಕ್ಕೆ ಬಿಡಲಾಗಿದೆ.
ಹೊಸ ಪ್ರಾಣಿಗಳ ಸೇರ್ಪಡೆಯಿಂದ ಶಿವಮೊಗ್ಗ ಮೃಗಾಲಯದಲ್ಲಿರುವ ಪ್ರಾಣಿ ತಳಿಗಳ ಸಂಖ್ಯೆ 37ಕ್ಕೆ ಏರಿಕೆಯಾಗಿದೆ. ಈ ಮೂಲಕ ಮೃಗಾಲಯವು ಶೀಘ್ರದಲ್ಲೇ ‘ಚಿಕ್ಕ ಮೃಗಾಲಯ’ (Small Zoo) ವಿಭಾಗದಿಂದ ‘ಮಧ್ಯಮ ಮೃಗಾಲಯ’ (Medium Zoo) ವಿಭಾಗಕ್ಕೆ ಮೇಲ್ದರ್ಜೆಗೇರುವ ನಿರೀಕ್ಷೆಯಿದೆ.
ಇದನ್ನೂ ಓದಿ > > ಪತ್ರಕರ್ತನ ಮನೆಯಲ್ಲಿ ಲಕ್ಷಾಂತರ ಮೌಲ್ಯದ ಚಿನ್ನಾಭರಣ, ನಗದು ದೋಚಿದ ಖದೀಮರು!
ಇದೇ ವೇಳೆ, ಪಟ್ನಾ ಮೃಗಾಲಯದಿಂದ ತರಲಾಗಿರುವ ನಾಲ್ಕು ಘರಿಯಾಲ್ಗಳಿಂದಾಗಿ ಶಿವಮೊಗ್ಗ ಮೃಗಾಲಯದ ಘರಿಯಾಲ್ಗಳ ಸಂಗ್ರಹವೂ ಹೆಚ್ಚಾಗಿದೆ. ಅಪರೂಪದ ಹಾಗೂ ವಿಶಿಷ್ಟ ಪ್ರಾಣಿ-ಪಕ್ಷಿಗಳ ಸಂರಕ್ಷಣೆ, ಸಂತಾನೋತ್ಪತ್ತಿ ಮತ್ತು ಸಾರ್ವಜನಿಕರಿಗೆ ವನ್ಯಜೀವಿ ಕುರಿತು ಅರಿವು ಮೂಡಿಸುವ ಕಾರ್ಯಕ್ಕೆ ಈ ಹೊಸ ಸೇರ್ಪಡೆ ಮತ್ತಷ್ಟು ಬಲ ನೀಡಲಿದೆ.
ಹೊಸ ತೋಳಗಳನ್ನು ಪ್ರವಾಸಿಗರು ವೀಕ್ಷಿಸಲು ಅವಕಾಶ ಕಲ್ಪಿಸಿರುವುದರಿಂದ ತ್ಯಾವರೆಕೊಪ್ಪದ ಸಫಾರಿಗೆ ಆಗಮಿಸುವ ಪ್ರವಾಸಿಗರಿಗೆ ಮತ್ತೊಂದು ವಿಶೇಷ ಆಕರ್ಷಣೆ ದೊರೆತಂತಾಗಿದೆ.














