ಶಿವಮೊಗ್ಗ: ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದ್ದ ಖೋಟಾನೋಟು ಸಾಗಾಟ ಮತ್ತು ಚಲಾವಣೆ ಪ್ರಕರಣದ ಇಬ್ಬರು ಆರೋಪಿಗಳಿಗೆ ಶಿವಮೊಗ್ಗದ 3ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವು 3 ವರ್ಷಗಳ ಕಠಿಣ ಕಾರಾಗೃಹ ಶಿಕ್ಷೆ ಹಾಗೂ ತಲಾ 52,000 ರೂ. ದಂಡ ವಿಧಿಸಿ ತೀರ್ಪು ನೀಡಿದೆ.
ಇದನ್ನೂ ಓದಿ > >ಶರಾವತಿ ನದಿ ತೀರದಲ್ಲಿ ಭರ್ಜರಿ ಸಂಭ್ರಮಾಚರಣೆ, ಕಾರಣವೇನು?
07 ಫೆಬ್ರವರಿ 2018 ರಂದು ಟಿಪ್ಪುನಗರದ ನಿವಾಸಿಗಳಾದ ಅಮ್ಜದ್ ಪಾಷಾ (39 ವರ್ಷ) ಮತ್ತು ಮೌಸಿನ್ ಖಾನ್ (33 ವರ್ಷ) ಬೈಕ್‌ನಲ್ಲಿ ಖೋಟಾನೋಟುಗಳನ್ನು ಸಾಗಿಸುತ್ತಿದ್ದಾಗ, ಅಂದಿನ ಪೊಲೀಸ್ ನಿರೀಕ್ಷಕ ಆರ್.ವಿ.ಗಂಗಾಧರಪ್ಪ ಮತ್ತು ಸಿಬ್ಬಂದಿ ಗೋಪಾಳ ಬಸ್ ನಿಲ್ದಾಣದ ಬಳಿ ದಾಳಿ ನಡೆಸಿ ಬಂಧಿಸಿದ್ದರು. ಆರೋಪಿಗಳಿಂದ ತಲಾ 500 ರೂ. ಮುಖಬೆಲೆಯ ಒಟ್ಟು 262 ಖೋಟಾನೋಟುಗಳನ್ನ ವಶಪಡಿಸಿಕೊಳ್ಳಲಾಗಿತ್ತು. ತನಿಖೆಯ ವೇಳೆ ಇವರು ಪಶ್ಚಿಮ ಬಂಗಾಳದಿಂದ ಕಡಿಮೆ ದರಕ್ಕೆ ಖೋಟಾನೋಟುಗಳನ್ನು ತಂದು ಶಿವಮೊಗ್ಗ, ಭದ್ರಾವತಿ ಸೇರಿದಂತೆ ವಿವಿಧೆಡೆ ಚಲಾವಣೆ ಮಾಡುತ್ತಿರುವುದು ಬೆಳಕಿಗೆ ಬಂದಿತ್ತು.
ಇದನ್ನೂ ಓದಿ > > ನೀರು ಕೇಳುವ ನೆಪದಲ್ಲಿ ಸರ ಕದ್ದ ಖದೀಮರು, ಇಬ್ಬರ ಬಂಧನ
ಪ್ರಕರಣದ ತನಿಖೆ ನಡೆಸಿದ ಅಂದಿನ ಡಿಸಿಐಬಿ ಪಿಐ ಆರ್.ವಿ.ಗಂಗಾಧರಪ್ಪ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ಆರೋಪಿಗಳ ಮೇಲಿನ ಅಪರಾಧ ಸಾಬೀತಾದ ಹಿನ್ನೆಲೆಯಲ್ಲಿ, ನ್ಯಾಯಾಧೀಶರಾದ ಯಶವಂತ ಕುಮಾರ್ ರವರು ಆರೋಪಿಗಳಿಗೆ 3 ವರ್ಷಗಳ ಕಠಿಣ ಜೈಲು ಶಿಕ್ಷೆ ಹಾಗೂ 52,000 ರೂ. ದಂಡ ವಿಧಿಸಿ ಆದೇಶ ಹೊರಡಿಸಿದ್ದಾರೆ.
ಇದನ್ನೂ ಓದಿ > > ಶೇ.100 ಫಲಿತಾಂಶ, ಎನ್ಇಎಸ್ ಮಲೆನಾಡಿನ ವಿದ್ಯಾಸಂಸ್ಥೆಗಳ ಬೋಧಕ ವೃಂದಕ್ಕೆ ಅಭಿನಂದನೆ
ಸರ್ಕಾರದ ಪರವಾಗಿ ಸರ್ಕಾರಿ ಅಭಿಯೋಜಕಿ ಮಮತಾ ಬಿ.ಎಸ್. ವಾದ ಮಂಡಿಸಿದ್ದರು.














