ಶಿವಮೊಗ್ಗ: ಶಿವಮೊಗ್ಗ ಜಿಲ್ಲಾ ಪೊಲೀಸ್ ಇಲಾಖೆಯು ಜಿಲ್ಲೆಯಲ್ಲಿ ರಸ್ತೆ ಅಪಘಾತಗಳನ್ನು ತಡೆಗಟ್ಟಲು ಮತ್ತು ವಾಹನ ಸಂಚಾರ ಸುರಕ್ಷತೆಯನ್ನು ಹೆಚ್ಚಿಸುವ ನಿಟ್ಟಿನಲ್ಲಿ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ (Intelligent Traffic Management System (ITMS) ಮೂಲಕ ಇ-ಚಲನ್ ವ್ಯವಸ್ಥೆಯನ್ನು ಅತ್ಯಂತ ಪರಿಣಾಮಕಾರಿಯಾಗಿ ಜಾರಿಗೊಳಿಸಲಿದೆ ಎಂದು ಪೊಲೀಸ್ ಪ್ರಕಟಣೆಯಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ > ರಿಪ್ಪನ್‌ಪೇಟೆ, ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು!
ಏಪ್ರಿಲ್ ತಿಂಗಳಿನಿಂದ ಸಂಚಾರ ನಿಯಮ ಉಲ್ಲಂಘಿಸುವ ಸವಾರರನ್ನು ಕೇವಲ ರಸ್ತೆಯಲ್ಲಿ ತಡೆದು ದಂಡ ವಿಧಿಸುವುದು ಮಾತ್ರವಲ್ಲದೆ, ತಂತ್ರಜ್ಞಾನದ ಮೂಲಕವೂ ಪತ್ತೆಹಚ್ಚಲಾಗುತ್ತದೆ. ಜಿಲ್ಲೆಯ ಎಲ್ಲಾ ಪೊಲೀಸ್ ಅಧಿಕಾರಿಗಳು ಮತ್ತು ಸಿಬ್ಬಂದಿ ತಮ್ಮ ಬಳಿ ಇರುವ ಜಿಪಿಎಸ್ ಆಧಾರಿತ ಕ್ಯಾಮೆರಾಗಳ ಮೂಲಕ ನಿಯಮ ಬಾಹಿರವಾಗಿ ಚಲಿಸುವ ವಾಹನಗಳ ಫೋಟೋ ಸೆರೆಹಿಡಿಯಲಿದ್ದಾರೆ. ಈ ಫೋಟೋಗಳನ್ನು ನೇರವಾಗಿ ಐಟಿಎಂಎಸ್ ತಂತ್ರಾಂಶಕ್ಕೆ ಅಪ್‌ಲೋಡ್ ಮಾಡುವ ಮೂಲಕ ಇ-ಚಲನ್ ಪ್ರಕರಣಗಳನ್ನು ದಾಖಲಿಸಲಾಗುತ್ತದೆ ಎಂದು ತಿಳಿಸಲಾಗಿದೆ.
ಇದನ್ನೂ ಓದಿ > ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ಕೋರಿ ಮೇಣದ ಬತ್ತಿ ಹಿಡಿದು ಪ್ರತಿಭಟನೆ
ವಾಹನ ಸವಾರರು ತಮ್ಮ ವಾಹನದ ಮೇಲೆ ಬಾಕಿ ಇರುವ ಇ-ಚಲನ್ ದಂಡವನ್ನು ಪಾವತಿಸಬೇಕು. ಜಿಲ್ಲೆಯ ಎಲ್ಲಾ ಪೊಲೀಸ್ ಠಾಣೆಗಳಲ್ಲಿ ದಂಡ ಪಾವತಿಗೆ ಅವಕಾಶವಿದೆ. ಶಿವಮೊಗ್ಗ ಮತ್ತು ಭದ್ರಾವತಿ ನಗರಗಳಲ್ಲಿ ಕರ್ತವ್ಯ ನಿರತವಾಗಿರುವ, ಇ-ಚಲನ್ ಪಿಡಿಎ ಮಿಷನ್ ಹೊಂದಿರುವ ಎಎಸ್‌ಐ ಹಾಗೂ ಮೇಲ್ಪಟ್ಟ ಅಧಿಕಾರಿಗಳ ಬಳಿ ದಂಡ ಪಾವತಿಸಬಹುದು. ಸಾರಿಗೆ ಇಲಾಖೆಯ ಅಧಿಕೃತ ಲಿಂಕ್ https://echallan.parivahan.gov.in/index/accused-challan ಮೂಲಕ ದಂಡದ ವಿವರ ವೀಕ್ಷಿಸಿ, ಆನ್‌ಲೈನ್ ಮೂಲಕವೇ ಹಣ ಪಾವತಿಸಬಹುದಾಗಿದೆ ಎಂದು ತಿಳಿಸಲಾಗಿದೆ.














