ಶಿವಮೊಗ್ಗ: ತೀರ್ಥಹಳ್ಳಿಯ ಮೀನು ಮಾರುಕಟ್ಟೆ ರಸ್ತೆಯಲ್ಲಿ ಸಾರ್ವಜನಿಕರಿಗೆ ತೊಂದರೆ ಉಂಟುಮಾಡುವ ರೀತಿಯಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಯುವಕನೊಬ್ಬನನ್ನು ತೀರ್ಥಹಳ್ಳಿ ಪೊಲೀಸರು ಬಂಧಿಸಿ ವೈದ್ಯಕೀಯ ಪರೀಕ್ಷೆ ನಡೆಸಿದಾಗ ಆತ ಗಾಂಜಾ ಸೇವಿಸಿರುವುದು ದೃಢಪಟ್ಟ ಹಿನ್ನೆಲೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.
ಇದನ್ನೂ ಓದಿ > ಬೆಕ್ಕುಗಳ ವಿಚಾರಕ್ಕೆ ಅಕ್ಕಪಕ್ಕದ ಮನೆಯವರ ಹೊಡೆದಾಟ!
ಮಧ್ಯಾಹ್ನ ವಿಶೇಷ ಗಸ್ತು ಕರ್ತವ್ಯದಲ್ಲಿದ್ದ ತೀರ್ಥಹಳ್ಳಿ ಪೊಲೀಸರು, ಪಟ್ಟಣದ ಮೀನು ಮಾರುಕಟ್ಟೆ ರಸ್ತೆಯಲ್ಲಿ ವ್ಯಕ್ತಿಯೊಬ್ಬ ಜೋರಾಗಿ ಕೂಗಾಡುತ್ತಾ ಜನರಿಗೆ ಕಿರಿಕಿರಿ ಉಂಟುಮಾಡುತ್ತಿರುವುದನ್ನು ಗಮನಿಸಿದರು. ಪೊಲೀಸರನ್ನು ಕಂಡ ಕೂಡಲೇ ಯುವಕ ಸ್ಥಳದಿಂದ ಪರಾರಿಯಾಗಲು ಯತ್ನಿಸಿದ್ದಾನೆ.
ತಕ್ಷಣ ಪೊಲೀಸರು ಆತನನ್ನು ಹಿಡಿದು ವಿಚಾರಣೆ ನಡೆಸಿದರು. ಮೇಲಿನ ಕುರುವಳ್ಳಿಯ ನಿವಾಸಿಯಾಗಿರುವ ೨೧ ವರ್ಷದ ಯುವಕ ಸೆಂಟ್ರಿಂಗ್ ಕೆಲಸ ಮಾಡುತ್ತಿದ್ದು, ಸಾರ್ವಜನಿಕ ಸ್ಥಳದಲ್ಲಿ ಅಸಭ್ಯವಾಗಿ ವರ್ತಿಸುತ್ತಿದ್ದ ಬಗ್ಗೆ ಕೇಳಿದ ಪ್ರಶ್ನೆಗಳಿಗೆ ಸಮರ್ಪಕ ಉತ್ತರ ನೀಡದೇ ತಡಬಡಾಯಿಸಿದ್ದಾನೆ.
ಇದನ್ನೂ ಓದಿ > ಕಳ್ಳತನ ಪ್ರಕರಣ ಭೇದಿಸಿದ ವಿನೋಬನಗರ ಠಾಣೆ ಪೊಲೀಸರು, ಆರೋಪಿ ಬಂಧನ
ಆತನ ವರ್ತನೆಯಲ್ಲಿ ನಶೆಯ ಲಕ್ಷಣಗಳು ಕಂಡುಬಂದ ಹಿನ್ನೆಲೆಯಲ್ಲಿ, ಪೊಲೀಸರು ಆತನನ್ನು ವಶಕ್ಕೆ ಪಡೆದು ಠಾಣೆಗೆ ಕರೆತಂದು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿದರು. ವೈದ್ಯರು ನಡೆಸಿದ ಪರೀಕ್ಷೆಯಲ್ಲಿ ಆತ ಗಾಂಜಾ ಸೇವಿಸಿರುವುದು ದೃಢಪಟ್ಟಿದೆ.
ಇದನ್ನೂ ಓದಿ > ‘ಕಾಯಕ ಸೇತು’ ಮೂಲಕ ಮಹಿಳೆಯರಿಗೆ ಬೃಹತ್ ಉದ್ಯೋಗವಕಾಶ, ಶಿವಮೊಗ್ಗದಲ್ಲಿ ಸಂದರ್ಶನ
ವೈದ್ಯಕೀಯ ವರದಿ ಆಧರಿಸಿ ತೀರ್ಥಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.














