ಶಿವಮೊಗ್ಗ: ಕರ್ನಾಟಕ ಪಶು ವೈದ್ಯಕೀಯ ಪರಿಷತ್ತು ನೇತೃತ್ವದಲ್ಲಿ ಇಲ್ಲಿನ ತ್ಯಾವರೆಕೊಪ್ಪ ಹುಲಿ-ಸಿಂಹಧಾಮದಲ್ಲಿ ಮಾರ್ಚ್ 19ರಂದು ನೀರಾನೆ ದಾಳಿಗೆ ಸಿಲುಕಿ ಸಾವನ್ನಪ್ಪಿದ ಪಶು ವೈದ್ಯೆ ಡಾ.ಸಮೀಕ್ಷಾ ರೆಡ್ಡಿ ಸಾವಿಗೆ ನ್ಯಾಯ ಕೊಡಿಸುವಂತೆ ಒತ್ತಾಯಿಸಿ ಗೋಪಿ ವೃತ್ತದಲ್ಲಿ ಪಶು ವೈದ್ಯಕೀಯ ಕಾಲೇಜಿನ ವಿದ್ಯಾರ್ಥಿಗಳು ಮೇಣದ ಬತ್ತಿ ಹಿಡಿದು ಪ್ರತಿಭಟನೆ ನಡೆಸಿದರು.
ಪ್ರತಿಭಟನೆಯಲ್ಲಿ ಪಾಲ್ಗೊಂಡ ವಿದ್ಯಾರ್ಥಿಗಳು ಸಮೀಕ್ಷಾ ರೆಡ್ಡಿ ಸಾವಿಗೆ ಅರಣ್ಯ ಇಲಾಖೆ ಅಧಿಕಾರಿಗಳ ನಿರ್ಲಕ್ಷ್ಯ ಕಾರಣವಾಗಿದೆ. ಕೆಲಸದ ಸ್ಥಳದಲ್ಲಿ ಪಶು ವೈದ್ಯರಿಗೆ ಯಾವುದೇ ರಕ್ಷಣೆ ಇಲ್ಲದಿರುವುದಕ್ಕೆ ಇದು ನಿದರ್ಶನ ಎಂದು ಆಕ್ರೋಶ ವ್ಯಕ್ತಪಡಿಸಿದರು. ಮೇಣದ ಬತ್ತಿ ಹಚ್ಚಿ ಸಮೀಕ್ಷಾ ರೆಡ್ಡಿ ಆತ್ಮಕ್ಕೆ ಶಾಂತಿಕೋರಿದರು.
ಇದನ್ನೂ ಓದಿ > ರಿಪ್ಪನ್‌ಪೇಟೆ, ಕೆರೆಗೆ ಬಿದ್ದು ಎಸ್ಸೆಸ್ಸೆಲ್ಸಿ ವಿದ್ಯಾರ್ಥಿ ಸಾವು!
ಮೃಗಾಲಯದಲ್ಲಿ ಸಾಮಾನ್ಯವಾಗಿ ಅಲ್ಲಿನ ಸಿಬ್ಬಂದಿ, ವೀಕ್ಷಕರು ಹಾಗೂ ಪ್ರಾಣಿಗಳ ಹಿತರಕ್ಷಣೆಗೆ ಅಗತ್ಯವಿರುವ ನಿಯಮಾವಳಿಗಳ ಪಾಲನೆ (ಎಸ್‌ಒಪಿ) ಮಾಡಲಾಗುತ್ತದೆ. ಆದರೆ ಸಮೀಕ್ಷಾ ರೆಡ್ಡಿ ವಿಚಾರದಲ್ಲಿ ಅದ್ಯಾವುದೂ ಆಗಿಲ್ಲ. ನೀರಾನೆಯ ನೆಲೆಯಲ್ಲಿ ಸಿಸಿ ಟಿವಿ ಕ್ಯಾಮೆರಾ ಅಳವಡಿಕೆ ಆಗಿದ್ದರೂ ಅದರಲ್ಲಿನ ದೃಶ್ಯಾವಳಿಗಳು ಲಭ್ಯವಿಲ್ಲ ಎಂಬ ಮಾಹಿತಿ ಇದೆ ಎಂದು ಪ್ರತಿಭಟನಾಕಾರರು ಆರೋಪಿಸಿದರು














