ಹೊಸನಗರ: ರಾಜ್ಯದ ಪ್ರೌಡಶಾಲಾ ವಿದ್ಯಾರ್ಥಿಗಳ ತೃತೀಯ ಬಾಷೆ (ಹಿಂದಿ) ಎಸ್‌ಎಸ್‌ಎಲ್‌ಸಿ ಪರೀಕ್ಷೆ ಮಂಗಳವಾರ ನಡೆದಿದ್ದು, ನಮಗೆ ಸರ್ಕಾರ ಸೂಚಿಸಿರುವ ಗ್ರೇಡಿಂಗ್ ಅಂಕದ ಬದಲಾಗಿ ಪರೀಕ್ಷೆ ಬರೆದ ಅಂಕವನ್ನೇ ನೀಡಬೇಕೆಂದು ಹೊಸನಗರದ ಸರ್ಕಾರಿ ಜೂನಿಯರ್ ಕಾಲೇಜ್ ವಿಭಾಗದ ಪ್ರೌಡ ಶಾಲಾ ವಿದ್ಯಾರ್ಥಿಗಳು ಹೊಸನಗರದ ತಹಶೀಲ್ದಾರ್ ಭರತ್‌ರಾಜ್ ಅವರ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಿದರು.

ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳ ತೃತೀಯ ಬಾಷೆಯ(ಹಿಂದಿ) ಅಂಕಗಳನ್ನು ಅಂತಿಮ ಫಲಿತಾಂಶದಲ್ಲಿ ಪರಿಗಣಿಸದಂತೆ ಸರ್ಕಾರ ತೆಗೆದು ಕೊಂಡಿರುವ ಏಕಪಕ್ಷೀಯ ತೀರ್ಮಾನ ಪ್ರಸ್ತುತ ವಿದ್ಯಾರ್ಥಿಗಳ ಸಮಗ್ರ ವಿದ್ಯಾಬ್ಯಾಸದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ತೃತೀಯ ಭಾಷೆಯ ವಿದ್ಯಾರ್ಥಿಗಳ ಭಾಷಾ ಸಾಮರ್ಥ್ಯವನ್ನು ವೃದ್ಧಿಸುವುದಲ್ಲದೇ ವಿವಿಧ ಸಂಸ್ಕೃತಿಗಳ ಅರಿವು ಮತ್ತು ಸಂವಹನ ಕೌಶಲ್ಯಗಳನ್ನು ಬೆಳೆಸಲು ಸಹಕಾರಿಯಾಗುತ್ತದೆ.
ನಾವು ಕಲಿಯುವ ಮೂರು ಭಾಷೆಗಳಿಗೂ ಸರಿ ಸಮನಾದ ಮಾನ್ಯತೆ ನೀಡುವುದು ಶೈಕ್ಷಣಿಕವಾಗಿ ನ್ಯಾಯ ಸಮ್ಮತವಾಗಿದೆ ನಾವು ತರಗತಿಯಲ್ಲಿ ಓದಿ ಕಲಿತ ಎಲ್ಲ ವಿಷಯಗಳಿಗೆ ಸಂಬಂಧಿಸಿದಂತೆ ಪರೀಕ್ಷೆ ನಡೆಸಿ ಅಂಕಗಳ ಆಧಾರದಲ್ಲಿ ಫಲಿತಾಂಶ ನೀಡುವುದು ಶಿಕ್ಷಣ ವ್ಯವಸ್ಥೆಯ ಅವಿಭಾಜ್ಯ ಅಂಗವಾಗಿದ್ದು ಗ್ರೇಡಿಂಗ್ ನೀಡುವುದರಿಂದ ನಮ್ಮ ಫಲಿತಾಂಶದ ಮೇಲೆ ಪರಿಣಾಮ ಬೀರಲಿದೆ. ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಗ್ರೇಡಿಂಗ್ ರದ್ದು ಪಡಿಸಿ ನಮಗೆ ನಾವು ಪರೀಕ್ಷೆಯಲ್ಲಿ ಬರೆದ ಅಂಕವನ್ನು ನೀಡಬೇಕೆಂದು ಮನವಿಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ > ಶಿವಮೊಗ್ಗದಲ್ಲಿ ಶಾಲಾ ಬಸ್ ಡಿಕ್ಕಿ ಹೊಡೆದು ಒಂದೂವರೆ ವರ್ಷದ ಮಗು ಸಾವು














